ಯುವ ಆಟಗಾರ ಅಭಿಷೇಕ್ ಶರ್ಮ(75) ಆಕರ್ಷಕ ಅರ್ಧಶತಕ ಹಾಗೂ ಬೌಲರ್ಗಳ ಸಾಂಘಿಕ ಪ್ರದರ್ಶನದಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನ ಮಣಿಸಿದ ಸನ್ರೈಸರ್ಸ್ ಹೈದ್ರಾಬಾದ್ 8 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ.
ಡಿವೈ ಪಾಟೀಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ 154/7 ಸಾಧಾರಣ ಮೊತ್ತ ಕಲೆ ಹಾಕಿತು. ಈ ಸವಾಲು ಬೆನ್ನತ್ತಿದ ಹೈದ್ರಾಬಾದ್ 17.4 ಓವರ್ಗಳಲ್ಲಿ 155 ರನ್ಗಳಿಸಿ ಗೆಲುವಿನ ನಗೆಬೀರಿತು. ಆ ಮೂಲಕ 2022ರ ಐಪಿಎಲ್ನಲ್ಲಿ ಸತತ ಎರಡು ಸೋಲಿನಿಂದ ಕಂಗೆಟ್ಟಿದ್ದ ಸನ್ರೈಸರ್ಸ್, 15ನೇ ಆವೃತ್ತಿಯಲ್ಲಿ ಗೆಲುವಿನ ಖಾತೆ ತೆರೆಯಿತು.
ಅಭಿಷೇಕ್ ಅದ್ಭುತ ಆಟ:
ಚೆನ್ನೈ ನೀಡಿದ ಪೈಪೋಟಿಯ ಮೊತ್ತ ಎದುರಿಸಿದ ಸನ್ರೈಸರ್ಸ್ ಹೈದ್ರಾಬಾದ್ ಉತ್ತಮ ಆರಂಭ ಕಂಡಿತು. ಆರಂಭಿಕರಾಗಿ ಕಣಕ್ಕಿಳಿದ ಅಭಿಷೇಕ್ ಶರ್ಮ(75) ಹಾಗೂ ನಾಯಕ ಕೇನ್ ವಿಲಿಯಮ್ಸ್(32) ಜವಾಬ್ದಾರಿಯ ಆಟವಾಡಿದರು. ಆ ಮೂಲಕ ಮೊದಲ ವಿಕೆಟ್ಗೆ 89 ರನ್ಗಳ ಜೊತೆಯಾಟವಾಡಿದ ಈ ಜೋಡಿ, ತಂಡದ ಗೆಲುವಿನ ಹಾದಿಯನ್ನ ಸುಗಮಗೊಳಿಸಿದರು. ಅದ್ಭುತ ಆಟವಾಡಿದ ಅಭಿಷೇಕ್ ಶರ್ಮ 75 ರನ್ (50 ಬಾಲ್, 8 ಬೌಂಡರಿ, 3 ಸಿಕ್ಸ್) ಮೂಲಕ ಮೊದಲ ಗೆಲುವಿನ ಹುಡುಕಾಟದಲ್ಲಿದ್ದ ಸನ್ರೈಸರ್ಸ್ ತಂಡದ ರೈಸಿಂಗ್ ಸ್ಟಾರ್ ಆಗಿ ಮಿಂಚಿದರು. 1ನೇ ಕ್ರಮಾಂಕದಲ್ಲಿ ಬಂದ ರಾಹುಲ್ ತ್ರಿಪಾಠಿ 39* ರನ್(15 ಬಾಲ್, 5 ಬೌಂಡರಿ, 2 ಸಿಕ್ಸ್) ಬಿರುಸಿನ ಆಟವಾಡಿದರು.
ಚೆನ್ನೈ ನೀರಸ ಬ್ಯಾಟಿಂಗ್:
ಇದಕ್ಕೂ ಮುನ್ನ ಟಾಸ್ ಸೋತ ಚೆನ್ನೈ ಸೂಪರ್ ಕಿಂಗ್ಸ್ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆಯಿತು. ಉತ್ತಮ ಮೊತ್ತ ಕಲೆಹಾಕುವ ನಿರೀಕ್ಷೆಯಲ್ಲಿ ಕಣಕ್ಕಿಳಿದ ರಾಬಿನ್ ಉತ್ತಪ್ಪ(15) ಹಾಗೂ ಋತುರಾಜ್ ಗಾಯಕ್ವಾಡ್(16) ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ನಂತರ ಜೊತೆಯಾದ ಮೊಯೀನ್ ಅಲಿ 48 ರನ್ (35 ಬಾಲ್, 3 ಬೌಂಡರಿ, 2 ಸಿಕ್ಸರ್) ಹಾಗೂ ಅಂಬಟಿ ರಾಯುಡು 27 ರನ್(27 ಬಾಲ್, 4 ಬೌಂಡರಿ) 62 ರನ್ಗಳ ಜೊತೆಯಾಟವಾಡಿದರು. ನಂತರ ಬಂದ ಶಿವಂ ದುಬೆ(3), ಎಂ.ಎಸ್.ಧೋನಿ(3) ಯಾವುದೇ ಕಮಾಲ್ ಮಾಡಲಿಲ್ಲ. ಆದರೆ ಇನ್ನಿಂಗ್ಸ್ ಕೊನೆಯಲ್ಲಿ ಬಿರುಸಿನ ಆಟವಾಡಿದ ನಾಯಕ ರವೀಂದ್ರ ಜಡೇಜಾ 23 ರನ್ (15 ಬಾಲ್, 2 ಬೌಂಡರಿ, 1 ಸಿಕ್ಸರ್) ಹಾಗೂ ಡ್ವೇನ್ ಬ್ರಾವೋ 8* ರನ್ಗಳಿಸಿದರು. ಸನ್ರೈಸರ್ಸ್ ಹೈದ್ರಾಬಾದ್ ಪರ ವಾಷಿಂಗ್ಟನ್ ಸುಂದರ್(2/21), ಟಿ. ನಟರಾಜನ್(2/30), ಮಾಕ್ರಂ, ಭುವನೇಶ್ವರ್ ಹಾಗೂ ಜಾನ್ಸೆನ್ ತಲಾ 1 ವಿಕೆಟ್ ಪಡೆದರು.
ಚೆನ್ನೈಗೆ ನಾಲ್ಕನೇ ಸೋಲು:
ಐಪಿಎಲ್ನ ಬಲಿಷ್ಠ ತಂಡ ಎನಿಸಿದ್ದ ಚೆನ್ನೈ ಸೂಪರ್ ಕಿಂಗ್ಸ್, 15ನೇ ಸೀಸನ್ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಮೊದಲ ಬಾರಿಗೆ ರವೀಂದ್ರ ಜಡೇಜಾ ನಾಯಕತ್ವದಲ್ಲಿ ಮುನ್ನಡೆಯುತ್ತಿರುವ ಚೆನ್ನೈ, ಪ್ರಸಕ್ತ ಆವೃತ್ತಿಯಲ್ಲಿ ಆಡಿರುವ ನಾಲ್ಕು ಪಂದ್ಯಗಳಲ್ಲಿ ಸೋಲಿನ ಆಘಾತ ಕಂಡಿದೆ.