IPL 2022 -Umran Malik- ಜಮ್ಮು ಕಾಶ್ಮೀರದ ಘಜಿನಿ.. ಎಸ್ ಆರ್ ಎಚ್ ನ ಬುಲೆಟ್ ವೇಗಿ..

ಉಮ್ರನ್ ಮಲ್ಲಿಕ್. 150 ಕಿಲೋ ಮೀಟರ್ ವೇಗದಲ್ಲಿ ಬೌಲಿಂಗ್ ಮಾಡುವ ಜಮ್ಮು ಕಾಶ್ಮೀರದ ಬೌಲರ್.
ಸದ್ಯ ಐಪಿಎಲ್ ನಲ್ಲಿ ಸದ್ದು ಮಾಡುತ್ತಿರುವ ಸನ್ ರೈಸರ್ಸ್ ಹೈದ್ರಬಾದ್ ತಂಡದ ಘಾತಕ ವೇಗಿ. ಮೊದಲ ಸ್ಪೆಲ್ ನಲ್ಲಿ ದುಬಾರಿಯಾದ್ರೂ ಜೋಸ್ ಬಟ್ಲರ್ ಗೆ ಪೆವಿಲಿಯನ್ ದಾರಿ ತೋರಿಸಿದ್ರು. ಎರಡನೇ ಸ್ಪೆಲ್ ನಲ್ಲಿ ದೇವದತ್ತ್ ಪಡಿಕ್ಕಲ್ ಅವರನ್ನು ಬೌಲ್ಡ್ ಮಾಡುವ ಮೂಲಕ ತನ್ನ ಬೌಲಿಂಗ್ ನೈಪುಣ್ಯತೆ ಏನು ಎಂಬುದನ್ನು ಸಾಬೀತುಪಡಿಸಿದ್ರು. ಅಲ್ಲದೆ ಟೀಮ್ ಇಂಡಿಯಾದ ಮಾಜಿ ಕೋಚ್ ರವಿಶಾಸ್ತ್ರಿ ಬಾಯಿಂದಲೇ ಭವಿಷ್ಯದ ಟೀಮ್ ಇಂಡಿಯಾದ ವೇಗದ ಬೌಲರ್ ಹೊರಬಂದಿತ್ತು. ಇನ್ನೊಂದೆಡೆ ಬೌಲ್ಡ್ ಆದ ದೇವದತ್ ಪಡಿಕ್ಕಲ್ ಆಶ್ಚರ್ಯಚಕಿತರಾಗಿ ಪೆವಿಲಿಯನ್ ದಾರಿ ಹಿಡಿದಿದ್ರು.
ಅಷ್ಟೊಂದು ಲಯಬದ್ಧವಾದ, ನಿಖರವಾದ ಚಾಕಚಕ್ಯತೆ ಉಮ್ರಾನ್ ಮಲ್ಲಿಕ್ ಅವರ ಎಸೆತದಲ್ಲಿತ್ತು.
ಸುಮಾರು ಐದು ವರ್ಷಗಳ ಹಿಂದೆ ಉಮ್ರಾನ್ ಮಲ್ಲಿಕ್ ಅವರು ಗಲ್ಲಿ ಕ್ರಿಕೆಟ್ ಆಟಗಾರ. ಸಂಜೆಯಾಗುತ್ತಿದ್ದಂತೆ ಟೆನಿಸ್ ಬಾಲ್ ನಲ್ಲಿ ಆಡುತ್ತಿದ್ದ ಉಮ್ರಾನ್, ಇಂದು ಐಪಿಎಲ್ ಆಟಗಾರನಾಗಿರುವುದರ ಹಿಂದೆ ರೋಚಕ ಕಥೆಯೇ ಇದೆ.
ಜಮ್ಮು ಕಾಶ್ಮೀರದ ಗುಜ್ಜರ್ ನಗರದಲ್ಲಿ ಬೆಳೆದ ಹುಡುಗ ಉಮ್ರಾನ್ ಮಲ್ಲಿಕ್. ಮಲ್ಲಿಕ್ ತಂದೆ ಅಬ್ದುಲ್ ರಶೀದ್ ಹಣ್ಣು ವ್ಯಾಪಾರಿ. ತಾಯಿ, ಇಬ್ಬರು ಅಕ್ಕಂದಿರ ಪ್ರೀತಿಯಲ್ಲಿ ಬೆಳೆದ ಉಮ್ರಾನ್ ಗೆ ಸಾಮಾನ್ಯ ಹುಡುಗರಂತೆ ಟೆನಿಸ್ ಬಾಲ್ ಕ್ರಿಕೆಟ್ ಆಡುತ್ತಿದ್ದರು.
ಕ್ರಿಕೆಟ್ ಆಟದಷ್ಟೇ ಶಿಕ್ಷಣಕ್ಕೂ ಆದ್ಯತೆ ನೀಡಬೇಕು ಎಂಬುದು ಮನೆಯವರ ಬುದ್ದಿವಾದದ ಮಾತಾಗಿರುತ್ತಿತ್ತು. ಆದ್ರೂ ಶಾಲೆ ಬಿಟ್ಟು ಸಂಜೆಯ ವೇಳೆ ಮೈದಾನದಲ್ಲಿರುತ್ತಿದ್ದ ಉಮ್ರಾನ್ ಮಲ್ಲಿಕ್ ತನ್ನ ವೇಗದ ಎಸೆತ ಹಾಗೂ ಹೊಡಿಬಡಿ ಆಟದ ಮೂಲಕವೇ ಜನಪ್ರಿಯತೆಯನ್ನು ಪಡೆದುಕೊಂಡಿದ್ದರು. ಅಷ್ಟೇ ಅಲ್ಲ, ಘಜಿನಿ ಅಂತನೇ ಫೇಮಸ್ ಆಗಿದ್ದರು.
ತನ್ನ 17ನೇ ವಯಸ್ಸಿನ ತನಕ ಉಮ್ರಾನ್ ಮಲ್ಲಿಕ್ ಅವರು ಟೆನಿಸ್ ಬಾಲ್ ಆಟಕ್ಕೆ ಸೀಮಿತವಾಗಿದ್ರು. ನಂತರ ಅವರು ಲೆದರ್ ಬಾಲ್ ಕ್ರಿಕೆಟ್ ನತ್ತ ಚಿತ್ತವನ್ನು ಹರಿಸಿದ್ರು. ಅದೊಂದು ದಿನ ಉಮ್ರಾನ್ ಮಲ್ಲಿಕ್ ಬೌಲಿಂಗ್ ಮಾಡುತ್ತಿರುವುದನ್ನು 19 ವಯೋಮಿತಿಯ ಆಯ್ಕೆ ಸಮಿತಿ ಸದಸ್ಯರು ನೋಡಿದ್ದರು. ಆಗ ಈ ಹುಡುಗ ಯಾರು ಎಂದು ಕೇಳಿದ್ದರು. ತಕ್ಷಣವೇ ಜಮ್ಮು ಕಾಶ್ಮೀರ ಕ್ರಿಕೆಟ್ ಸಂಸ್ಥೆಯ ಜೊತೆ ಮಾತನಾಡಿ 19 ವಯೋಮಿತಿ ತಂಡಕ್ಕೆ ಆಯ್ಕೆ ಟ್ರಯಲ್ಸ್ ಮಾಡುವಂತೆ ಸಲಹೆ ನೀಡಿದ್ದರು. ಆಯ್ಕೆ ಟ್ರಯಲ್ಸ್ ನಲ್ಲಿ ಬೌಲಿಂಗ್ ಮಾಡಿದ್ದ ನಂತರ ಉಮ್ರಾನ್ ಮಲ್ಲಿಕ್ ಅವರ ನಸೀಬು ಕೂಡ ಬದಲಾಗಿ ಹೋಯ್ತು. 19 ವಯೋಮಿತಿಯಲ್ಲೇ 135ರಿಂದ 140 ಕಿಲೋ ಮೀಟರ್ ವೇಗದಲ್ಲಿ ಬೌಲಿಂಗ್ ಮಾಡುತ್ತಿದ್ದ ಮಲ್ಲಿಕ್ ಜಮ್ಮು ಕಾಶ್ಮೀರ 19 ವಯೋಮಿತಿ ತಂಡವನ್ನು ಸೇರಿಕೊಂಡ್ರು.
ಇದೇ ವೇಳೆ, ಇರ್ಫಾನ್ ಪಠಾಣ್ ಅವರು ಜಮ್ಮು ಕಾಶ್ಮೀರದ ಕ್ರಿಕೆಟ್ ಮೆಂಟರ್ ಆಗಿದ್ದರು. ಇರ್ಫಾನ್ ಗರಡಿಯಲ್ಲಿ ಪಳಗಿದ್ದ ಉಮ್ರಾನ್ ಮಲ್ಲಿಕ್ ತನ್ನ ಬೌಲಿಂಗ್ ವೀಕ್ ನೆಸ್ ಗಳನ್ನು ಸರಿಪಡಿಸಿಕೊಂಡ್ರು.

ಇನ್ನೊಂದೆಡೆ ಅಬ್ದುಲ್ ಸಮಾದ್ ಅವರು ಐಪಿಎಲ್ ನಲ್ಲಿ ಸನ್ ರೈಸರ್ಸ್ ಹೈದ್ರಬಾದ್ ತಂಡದ ಪರ ಆಡುತ್ತಿದ್ದರು. ಆಗ ಸಮಾದ್ ಅವರು ಮಲ್ಲಿಕ್ ಅವರ ಬೌಲಿಂಗ್ ವಿಡಿಯೋಗಳನ್ನು ಎಸ್ ಆರ್ ಎಚ್ ಟೀಮ್ ಮ್ಯಾನೇಜ್ ಮೆಂಟ್ ಗೆ ತೋರಿಸಿದ್ರು. ಹೀಗಾಗಿ 2020ರಲ್ಲಿ ಉಮ್ರಾನ್ ಮಲ್ಲಿಕ್ ಅವರು ಸನ್ ರೈಸರ್ಸ್ ಹೈದ್ರಬಾದ್ ತಂಡದ ನೆಟ್ ಬೌಲರ್ ಆಗಿ ಸೇರಿಕೊಂಡ್ರು. ಮಲ್ಲಿಕ್ ಅವರ ಬೌಲಿಂಗ್ ಅನ್ನು ನೋಡಿದ್ದ ಕೇದಾರ್ ಜಾಧವ್ ಅವರು ನೀನು ನೆಟ್ ಬೌಲರ್ ಅಥವಾ ತಂಡದ ಆಟಗಾರನ ಎಂದು ಪ್ರಶ್ನೆ ಮಾಡುತ್ತಿದ್ದರು.
ವೇಗವಾಗಿ ಬೌಲಿಂಗ್ ಮಾಡುತ್ತಿದ್ದ ಮಲ್ಲಿಕ್ ಅವರು ಜಾನಿ ಬೇರ್ ಸ್ಟೋವ್ ಅವರ ಗಮನವನ್ನು ಕೂಡ ಸೆಳೆದಿದ್ದರು. ವೇಗವಾಗಿ ಬೌಲಿಂಗ್ ಮಾಡುತ್ತಿದ್ದ ಜಾನಿ ಬೇರ್ ಸ್ಟೋವ್ ಅವರು ಸ್ವಲ್ಪ ನಿಧಾನವಾಗಿ ಬೌಲಿಂಗ್ ಮಾಡು ಎಂದು ಹೇಳಿದ್ದರು. ಆದ್ರೆ ಉಮ್ರಾನ್ ಮಲ್ಲಿಕ್ ಅವರು ಮತ್ತಷ್ಟು ವೇಗವಾಗಿ ಎಸೆಯುತ್ತಿದ್ದರು. ಜಾನಿ ಬೇರ್ ಸ್ಟೋವ್ ಇಂಗ್ಲಿಷ್ ಅರ್ಥವಾಗದ ಕಾರಣ ಉಮ್ರಾನ್ ಮಲ್ಲಿಕ್ ಗೆ, ಎಸ್ ಆರ್ ಎಚ್ ತಂಡದ ಸಹ ಆಟಗಾರ ನಿಧಾನವಾಗಿ ಬೌಲಿಂಗ್ ಮಾಡು ಎಂದು ಜಾನಿ ಹೇಳುತ್ತಿದ್ದಾರೆ ಎಂದು ಹೇಳಿದ್ರು.
2021ರಲ್ಲಿ ಎಸ್ ಆರ್ ಎಚ್ ತಂಡದ ಪರ ಆಡುವ ಅವಕಾಶ ಸಿಕ್ಕಿತ್ತು. ನಟರಾಜ್ ಅಲಭ್ಯರಾದ ಕಾರಣ ಆ ಜಾಗದಲ್ಲಿ ಉಮ್ರಾನ್ ಮಲ್ಲಿಕ್ ಆಡಿದ್ದರು. ಇದೀಗ 2022ರ ಐಪಿಎಲ್ ನಲ್ಲಿ ಉಮ್ರಾನ್ ಮಲ್ಲಿಕ್ ತಂಡದ ಟ್ರಂಪ್ ಕಾರ್ಡ್ ಬೌಲರ್ ಆಗಿದ್ದಾರೆ.
ಮತ್ತೊಂದೆಡೆ 2021ರ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾದ ನೆಟ್ ಬೌಲರ್ ಕೂಡ ಆಗಿದ್ದರು. IPL 2022- SRH – Meet India’s fastest bowler, Umran Malik IPL 2022
ವಕಾರ್ ಯೂನಸ್ ಅವರ ಬೌಲಿಂಗ್ ಶೈಲಿಯಂತೆ ಬೌಲಿಂಗ್ ಮಾಡುವ ಉಮ್ರಾನ್ ಮಲ್ಲಿಕ್ ಭವಿಷ್ಯದ ಟೀಮ್ ಇಂಡಿಯಾ ಆಟಗಾರನಾಗುವ ಎಲ್ಲಾ ಸಾಧ್ಯತೆಗಳು ಇವೆ. ಲಯಬದ್ದ ಎಸೆತಗಳ ಜೊತೆ ವೇಗವಾಗಿ ಬೌಲಿಂಗ್ ಮಾಡುವ ಉಮ್ರಾನ್ ಮಲ್ಲಿಕ್ ಮುಂಬರುವ ಟಿ-20 ವಿಶ್ವಕಪ್ ಟೂರ್ನಿಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದುಕೊಂಡ್ರೂ ಅಚ್ಚರಿ ಏನು ಇಲ್ಲ. ಯಾವುದಕ್ಕೂ ಮುಂದಿನ 13 ಪಂದ್ಯಗಳಲ್ಲಿ ಯಾವ ರೀತಿ ಆಡ್ತಾರೆ ಅನ್ನೋದು ಮುಖ್ಯವಾಗಿರುತ್ತದೆ.