ಐಪಿಎಲ್ 15ನೇ ಆವೃತ್ತಿಯಲ್ಲಿ ಅದ್ಭುತ ಬ್ಯಾಟಿಂಗ್ನಿಂದ ಮಿಂಚಿದ್ದ ಶುಭ್ಮನ್ ಗಿಲ್, ʼವಿಶ್ವ ಕ್ರಿಕೆಟ್ನ ಅತ್ಯುತ್ತಮ ಪ್ರತಿಭಾವಂತ ಕ್ರಿಕೆಟಿಗʼ ಎಂದು ಟೀಂ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಳೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಶುಭ್ಮನ್ ಗಿಲ್, ಗುಜರಾತ್ ತಂಡದ ಗೆಲುವಿನ ಹೀರೋ ಆಗಿದ್ದರು. 22ರ ಹರೆಯದ ಯುವ ಆಟಗಾರನ ಪ್ರದರ್ಶನದ ಕುರಿತು ಮಾತನಾಡಿರುವ ರವಿ ಶಾಸ್ತ್ರಿ, ಕ್ರಿಕೆಟ್ ಜಗತ್ತಿನ ಅತ್ಯುತ್ತಮ ಟ್ಯಾಲೆಂಟ್ಗಳಲ್ಲಿ ಶುಭ್ಮನ್ ಗಿಲ್ ಒಬ್ಬರಾಗಿದ್ದು, ಅವರ ಸ್ಟ್ರೋಕ್ಗಳು ಟಿ20 ಕ್ರಿಕೆಟ್ಗೆ ಹೇಳಿ ಮಾಡಿದಂತಿದೆ. ಆತ ನೆಲಕಚ್ಚಿ ನಿಂತರ ಅತ್ಯಂತ ಸುಲಭವಾಗಿ ಬ್ಯಾಟಿಂಗ್ ಮಾಡಲಿದ್ದು, ಇದೇ ರೀತಿ ಪ್ರದರ್ಶನ ನೀಡುತ್ತಾ ಸಾಗಿದರೆ ದೊಡ್ಡ ಸ್ಕೋರ್ ಗಳಿಸಬಹುದು ಎಂದು ರವಿಶಾಸ್ತ್ರಿ ತಿಳಿಸಿದ್ದಾರೆ.
ತಮ್ಮ ಬ್ಯಾಟಿಂಗ್ನಲ್ಲಿ ಪಂಚ್, ಟೈಮಿಂಗ್ ಜೊತೆಗೆ ದೊಡ್ಡ ಹೊಡೆತವನ್ನು ಬಾರಿಸುವ ಸಾಮರ್ಥ್ಯ ಹೊಂದಿದ್ದಾರೆ. ಆತ ಟಿ20 ಮಾದರಿಗೆ ಹೇಳಿ ಮಾಡಿಸಿದ ಆಟಗಾರನಾಗಿದ್ದು, ಶಾಟ್ ಸೆಲೆಕ್ಷನ್ ಹಾಗೂ ಸ್ಟ್ರೈಕ್ ರೊಟೇಷನ್ ಮಾಡುವುದು ಅವರ ಬ್ಯಾಟಿಂಗ್ ಒತ್ತಡವನ್ನು ಕಡಿಮೆ ಮಾಡುತ್ತದೆ ಎಂದು ರವಿ ಶಾಸ್ತ್ರಿ ಸ್ಟಾರ್ ಸ್ಪೋರ್ಟ್ಸ್ ಲೈವ್ನಲ್ಲಿ ತಿಳಿಸಿದರು.
ಇದೇ ವರ್ಷದ ಕೊನೆಯಲ್ಲಿ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ನಡೆಯಲಿದೆ. ಹೀಗಾಗಿ ಶುಭ್ಮನ್ ಗಿಲ್ ಈ ಅವಕಾಶವನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಂಡು, ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಭಾರತ ತಂಡದಲ್ಲಿ ಸ್ಥಾನ ಪಡೆಯುವ ರೇಸ್ನಲ್ಲಿ ಇರಬಹುದು ಎಂದಿದ್ದಾರೆ.
ಪಂದ್ಯಾವಳಿಯ ಆರಂಭದಲ್ಲೇ ಉತ್ತಮ ಪ್ರದರ್ಶನ ನೀಡಿ, ಗರಿಷ್ಠ ಸ್ಕೋರ್ಗಳಿಸಬೇಕಿದೆ. ಅಲ್ಲದೇ ಹೊಸ ಫ್ರಾಂಚೈಸಿ ಪರವಾಗಿ ಆಡುವುದೇ ಆಟಗಾರನ ಆತ್ಮವಿಶ್ವಾಸ ಹೆಚ್ಚಿಸಲಿದೆ ಎಂದು ರವಿಶಾಸ್ತ್ರಿ ಹೇಳಿದರು. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ್ದ ಶುಭ್ಮನ್ ಗಿಲ್, 182.61ರ ಸ್ಟ್ರೈಕ್ ರೇಟ್ನಲ್ಲಿ 84(46) ರನ್ಗಳಿಸಿ ತಂಡದ ಗೆಲುವಿಗೆ ಪ್ರಮುಖ ಕಾರಣರಾದರು.