IPL 2022- Shahbaz Ahmed – ಇಂಜಿನಿಯರ್ ಹುಡುಗ ಆರ್ ಸಿಬಿಯ ಮ್ಯಾಚ್ ವಿನ್ನರ್…! ಶಹಬ್ಬಾಸ್… ಶಹಬಾಝ್..!

ಶಹಬಾಝ್ ಅಹಮ್ಮದ್.. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಂಬಿಕಸ್ಥ ಆಟಗಾರ.
ಅಂದ ಹಾಗೇ, ಶಹಬಾಝ್ ಅಹಮ್ಮದ್ ಈ ಮಟ್ಟದಲ್ಲಿ ಆಡುತ್ತಾರೆ ಅಂತ ಊಹೆ ಕೂಡ ಮಾಡುವುದಕ್ಕೆ ಸಾಧ್ಯವಿಲ್ಲ. ಯಾಕಂದ್ರೆ ಅವರ ದೇಹಗಾತ್ರವನ್ನು ನೋಡಿದಾಗ ಹೊಡಿಬಡಿ ಆಟವನ್ನಾಡುತ್ತಾರೆ ಅಂತ ನಂಬುವುದಕ್ಕೆ ಕೂಡ ಅಗುವುದಿಲ್ಲ. ಆದ್ರೆ ಶಹಬಾಝ್ ರಟ್ಟೆಯಲ್ಲಿ ಅಂತಹ ಶಕ್ತಿ ಇದೆ. ಬೌಲರ್ ಗಳನ್ನು ಅರಿತುಕೊಳ್ಳುವ ಯುಕ್ತಿ ಇದೆ. ಪಂದ್ಯದ ಪರಿಸ್ಥಿತಿಯನ್ನು ತಿಳಿದುಕೊಂಡು ಬ್ಯಾಟ್ ಮಾಡುವ ಕಲೆ ಇದೆ. ಅದಕ್ಕಿಂತ ಹೆಚ್ಚಾಗಿ ತನ್ನ ತಂಡದ ಮೇಲೆ ಅಪಾರವಾದ ಪ್ರೀತಿ ಇದೆ. ಜೊತೆಗೆ ಗೆಲ್ಲಬೇಕು ಎಂಬ ಹಠವಿದೆ. ಹೀಗಾಗಿಯೇ ಶಹಬಾಝ್ ಅವರು ಆರ್ ಸಿಬಿ ತಂಡದ ಮ್ಯಾಚ್ ವಿನ್ನರ್ ಆಗುತ್ತಿದ್ದಾರೆ. ಆರ್ ಸಿಬಿ ಅಭಿಮಾನಿಗಳಿಗೆ ನೆಚ್ಚಿನ ಆಟಗಾರನಾಗುತ್ತಿದ್ದಾರೆ.
ಹೌದು, ಶಹಬಾಝ್ ಅಹಮ್ಮದ್ ಅವರು ಪಶ್ಚಿಮ ಬಂಗಾಳದವರು. ಓದಿದ್ದು ಇಂಜಿನಿಯರಿಂಗ್. ಆದ್ರೆ ಬದುಕುಕಟ್ಟಿಕೊಂಡಿದ್ದು ಕ್ರಿಕೆಟ್ ನಲ್ಲಿ. ಕ್ರಿಕೆಟ್ ಆಟದ ಮೇಲೆ ಆಕರ್ಷಣೆ ಹುಟ್ಟಿದ್ದು ಕೂಡ ಆಕಸ್ಮಿಕವಾಗಿ. ಶಹಬಾಝ್ ಅವರು ಕ್ರಿಕೆಟ್ ಆಟಗಾರನಾಗಿ ಹೇಗೆ ರೂಪುಗೊಂಡಿದ್ದಾರೆ ಎಂಬುದನ್ನು ಕೋಚ್ ಪಾರ್ಥ ಪ್ರತೀಮ್ ಚೌಧುರಿ ನೆನಪು ಮಾಡಿಕೊಳ್ಳುತ್ತಾರೆ.

ಪಾರ್ಥ ಪ್ರತೀಮ್ ಚೌಧುರಿ ಅವರು ಕೊಲ್ಕತ್ತಾ ಕ್ಲಬ್ ನ ತರಬೇತುದಾರ. ಸಿವಿಲ್ ಇಂಜಿನಿಯರಿಂಗ್ ಮೂರನೇ ಸೆಮಿಸ್ಟರ್ ವೇಳೆ ಶಹಬಾಝ್ ಅಹಮ್ಮದ್ ಅವರು ಕ್ರಿಕೆಟ್ ಆಡಲು ಶುರು ಮಾಡಿದ್ದರು. ನಂತರ ಹಿಂತಿರುಗಿ ನೋಡಲೇ ಇಲ್ಲ.
ಅಂದ ಹಾಗೇ ಕೊಲ್ಕತ್ತಾ ಕ್ಲಬ್ ದೊಡ್ಡ ಮಟ್ಟದ ಕ್ರಿಕೆಟ್ ಕ್ಲಬ್ ಆಗಿರಲಿಲ್ಲ. ಹೊಸ ಹುಡುಗರಿಗೆ ಅವಕಾಶ ನೀಡುವುದು ಕ್ಲಬ್ ನ ಮುಖ್ಯ ಧ್ಯೇಯವಾಗಿತ್ತು. ಹೀಗಾಗಿ ಪಾರ್ಥ ಪ್ರತೀಮ್ ಗರಡಿಯಲ್ಲಿ ಅಭ್ಯಾಸ ನಡೆಸುತ್ತಿದ್ದ ಪ್ರಮೋದ್ ಚಾಂಡಿಲಾ ಅವರು ಶಹಬಾಝ್ ಅಹಮ್ಮದ್ ಅವರನ್ನು ಪರಿಚಯಿಸಿದ್ರು. ಪ್ರಮೋದ್ ಚಾಂಡಿಲಾ ಅವರು ಪಶ್ವಿಮ ಬಂಗಾಳದ ಮಾಜಿ ಆಟಗಾರ. ಈಗ ಹರಿಯಾಣ ಪರ ಆಡುತ್ತಿದ್ದಾರೆ.
ಶಹಬಾಝ್ ಅವರನ್ನು ಕೋಚ್ ಪಾರ್ಥ ಪ್ರತೀಮ್ ಅವರಿಗೆ ಪರಿಚಯ ಮಾಡುವಗಲೇ ಪ್ರಮೋದ್ ಚಾಂಡಿಲಾ ಅವರು ಒಂದು ಮಾತು ಹೇಳಿದ್ದರು. ಶಹಬಾಝ್ ಸೆಮಿಸ್ಟರ್ ಪರೀಕ್ಷೆಗಳು ಇರುವಾಗ ಕೆಲವೊಂದು ಪಂದ್ಯಗಳನ್ನು ಮಿಸ್ ಮಾಡಿಕೊಳ್ಳುತ್ತಾರೆ. ಅದಕ್ಕೆ ಅವಕಾಶ ನೀಡಬೇಕು ಎಂದು. ಅದಕ್ಕೆ ಪಾರ್ಥ ಪ್ರತೀಮ್ ಅವರು ಸಹಮತ ಕೂಡ ಸೂಚಿಸುತ್ತಾರೆ. ಹೀಗೆ ಕೋಚ್ ಪಾರ್ಥ ಪ್ರತೀಮ್ ಅವರು ಶಹಬಾಝ್ ಜೊತೆಗಿನ ಒಡನಾಟವನ್ನು ನೆನಪು ಮಾಡಿಕೊಳ್ಳುತ್ತಿದ್ದಾರೆ.
ಶಹಬಾಝ್ ಅಹಮ್ಮದ್ ಅವರು ಮೆವತ್ ನಲ್ಲಿ ವಾಸವಾಗಿದ್ದರು. ಆದ್ರೆ ಕ್ರಿಕೆಟ್ ಆಟಕ್ಕಾಗಿಯೇ ಅವರು ಪಾರ್ಥ ಪ್ರತೀಮ್ ಅವರ ಮನೆಯಲ್ಲೇ ವಾಸವಾಗಿದ್ದಾರೆ.
ನನಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಶಹಬಾಝ್ ಅಹಮ್ಮದ್ ನನಗೆ ಮೂರನೇ ಮಗ. ಶಹಬಾಝ್ ನನ್ನ ಕುಟುಂಬದ ಅವಿಭಾಜ್ಯ ಅಂಗ. ಅವನು ವೃತ್ತಿಪರ ಕ್ರಿಕೆಟಿಗನಾಗಿ ರೂಪುಗೊಂಡ ನಂತರ ಅವನು ಅವನ ಮನೆಗೆ ಹೋಗಿಲ್ಲ. ಅದ್ಭುತ ಪ್ರತಿಭಾವಂತ ಎಂಬುದು ನಿಮಗೂ ಗೊತ್ತಾಗಿದೆ. ಅಷ್ಟೇ ಅಲ್ಲ ಹೃದಯವಂತ ಕೂಡ ಎಂದು ಕೋ ಚ್ ಪಾರ್ಥ ಪ್ರತೀಮ್ ಚೌಧುರಿ ಹೇಳ್ತಾರೆ.
ಶಹಬಾಝ್ ಅಹಮ್ಮದ್ ಅವರು ಸಿಕ್ಸರ್ ಬಾರಿಸುವಾಗ ನಿಜಕ್ಕೂ ಅಚ್ಚರಿಯಾಗುತ್ತದೆ. ಯಾಕಂದ್ರೆ ಅವರ ದೇಹಗಾತ್ರ. ಆದ್ರೆ ಶಹಬಾಝ್ ಫಿಟ್ ಆಂಡ್ ಫೈನ್ ಆಗಿದ್ದಾರೆ. ಹಾಗೇ ಮಿತವ್ಯಯಿ ಭೋಜನ ಮಾಡುತ್ತಾರೆ. ಎರಡು ರೋಟಿ ಸಾಕು. ಹೆಚ್ಚು ತಿನ್ನುವುದಿಲ್ಲ. ಆದ್ರೆ ಆತನ ಸಾಮಥ್ರ್ಯ ಮತ್ತು ಶಕ್ತಿಯ ಬಗ್ಗೆ ನನಗೆ ಇನ್ನೂ ಅರ್ಥಮಾಡಿಕೊಳ್ಳಲು ಸಾಧ್ಯವಾಗಿಲ್ಲ ಅಂತಾರೆ ಪಾರ್ಥ ಪ್ರತೀಮ್.

ಆರಂಭದ ದಿನಗಳಲ್ಲಿ ಕೊಲ್ಕತ್ತಾ ಕ್ಲಬ್ ಕ್ರಿಕೆಟ್ ಟೂರ್ನಿಗಳಲ್ಲಿ ಶಹಬಾಝ್ ಅಹಮ್ಮದ್ ಅವರು ಏಳು ಪಂದ್ಯಗಳನ್ನು ಆಡಿದ್ದರು. ಅದರಲ್ಲಿ ಆರು ಶತಕಗಳನ್ನು ದಾಖಲಿಸಿದ್ದರು. ಪ್ರಥಮ ದರ್ಜೆಯ ಕ್ರಿಕೆಟ್ ನಲ್ಲಿ ಆರು ಅರ್ಧಶತಕ ಹಾಗೂ ಲೀಸ್ಟ್ ಎ ಪಂದ್ಯಗಳಲ್ಲಿ ಎರಡು ಶತಕಗಳನ್ನು ಸಿಡಿಸಿದ್ದಾರೆ. ಪಶ್ಚಿಮ ಬಂಗಾಳ ರಣಜಿ ತಂಡದ ಪ್ರಮುಖ ಆಟಗಾರನಾಗಿ ಶಹಬಾಝ್ ಅಹಮ್ಮದ್ ಹೊರಹೊಮ್ಮಿದ್ದಾರೆ.
ಅಷ್ಟಕ್ಕೂ ಕ್ರಿಕೆಟ್ ನಲ್ಲಿ ಪರಿಕ್ವತೆಯನ್ನು ಪಡೆದುಕೊಳ್ಳಲು ಶಹಬಾಝ್ ಅಹಮ್ಮದ್ ಅವರಿಗೆ ನೆರವಾಗಿದ್ದು ರೇಖಾಗಣಿತ. ಹೌದು. ರೇಖಾ ಗಣಿತ ಶಹಬಾಝ್ ಅಹಮ್ಮದ್ ಅವರ ನೆಚ್ಚಿನ ವಿಷಯವಾಗಿದೆ. ಸರಿಯಾದ ಅಂತರ ಮತ್ತು ಕೋನಗಳನ್ನು ಕಂಡುಹಿಡಿಯುವ ನಿಖರತೆ ಮತ್ತು ತಿಳುವಳಿಕೆಯನ್ನು ಕರಗತ ಮಾಡಿಕೊಂಡಿದ್ದಾರೆ. ಬಹುಶಃ ಇದು ಕೂಡ ಶಹಬಾಝ್ ಅಹಮ್ಮದ್ ಅವರ ಕ್ರಿಕೆಟ್ ಬದುಕಿಗೂ ನೆರವಾಗಿರುತ್ತದೆ.
ಶಹಬಾಝ್ ಅಹಮ್ಮದ್ ಒಬ್ಬ ಕ್ರಿಕೆಟಿಗ ಮಾತ್ರವಲ್ಲ. ಹೃದಯವಂತ ವ್ಯಕ್ತಿ. ಗ್ರೌಂಡ್ ಮೆನ್ ನಿಧನರಾಗಿದ್ದಾಗ ಯಾರಿಗೂ ಗೊತ್ತಾಗದಂತೆ ಅವರ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡಿದ್ದರು. ಹಾಗೇ ತನ್ನ ಕ್ರಿಕೆಟ್ ಬದುಕಿಗೆ ಆಧಾರವಾಗಿದ್ದ ಕೋಚ್ ಪಾರ್ಥ ಪ್ರತೀಮ್ ಚೌಧುರಿ ಅವರಿಗೆ ಕಾರು ಅನ್ನು ಕೂಡ ಉಡುಗೊರೆಯಾಗಿ ನೀಡಿದ್ದರು. ಆಗ ಪಾರ್ಥ ಪ್ರತೀಮ್ ನಿನ್ನ ಹೆತ್ತವರಿಗೆ ಕೊಡು ಅಂದಾಗ, ಬೇಡ, ನಿಮಗೆ ಕಚೇರಿಗೆ ಹೋಗಲು ಇರಲಿ ಎಂದು ಶಹಬಾಝ್ ಹೇಳಿದ್ದರು ಎಂಬುದನ್ನು ಪಾರ್ಥ ಪ್ರತೀಮ್ ನೆನಪು ಮಾಡಿಕೊಳ್ಳುತ್ತಿದ್ದಾರೆ.
ಒಟ್ಟಿನಲ್ಲಿ ಶಹಬಾಝ್ ಅಹಮ್ಮದ್ ಅವರು ಆರ್ ಸಿಬಿ ತಂಡದ ಸ್ಟಾರ್ ಆಟಗಾರನಾಗಿ ರೂಪುಗೊಳ್ಳುತ್ತಿದ್ದಾರೆ.