ಕೊನೆಯ ಬಾಲ್ವರೆಗೂ ರೋಚಕತೆಯಿಂದ ಕೂಡಿದ್ದ ಕದನದಲ್ಲಿ ಗುಜರಾತ್ ಟೈಟನ್ಸ್, ಅಬ್ಬರದ ಪ್ರದರ್ಶನ ನೀಡುವ ಮೂಲಕ ಪಂಜಾಬ್ ಕಿಂಗ್ಸ್ ವಿರುದ್ಧ 6 ವಿಕೆಟ್ಸ್ಗಳ ಭರ್ಜರಿ ಗೆಲುವು ಸಾಧಿಸಿದೆ. ಆ ಮೂಲಕ ಐಪಿಎಲ್ನಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದ ಗುಜರಾತ್, ಗೆಲುವಿನ ನಾಗಾಲೋಟವನ್ನು ಮುಂದುವರಿಸಿದೆ.
ಬ್ರಬೌರ್ನ್ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ 20 ಓವರ್ಗಳಲ್ಲಿ 189/9 ರನ್ಗಳಿಸಿತು. ಈ ಸವಾಲು ಬೆನ್ನತ್ತಿದ ಗುಜರಾತ್ ಟೈಟನ್ಸ್ 20ನೇ ಓವರ್ನಲ್ಲಿ 190/4 ರನ್ಗಳಿಸಿ ಗೆಲುವಿನ ದಡಸೇರಿತು. ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯದ ಕೊನೆಯ ಎರಡು ಬಾಲ್ನಲ್ಲಿ 2 ಸಿಕ್ಸರ್ ಸಿಡಿಸಿದ ರಾಹುಲ್ ತೆವಾಟಿಯ ಕೇವಲ 3 ಬಾಲ್ಗಳಲ್ಲಿ 2 ಸಿಕ್ಸರ್ ಸಹಿತ 13* ರನ್ಗಳಿಸಿ, ಗುಜರಾತ್ ಗೆಲುವಿನ ಹೀರೋ ಆಗಿ ಮಿಂಚಿದರು.
ಗಿಲ್ ಬೊಂಬಾಟ್ ಆಟ:
ಪ್ರಸಕ್ತ ಐಪಿಎಲ್ನಲ್ಲಿ ಭರ್ಜರಿ ಫಾರ್ಮ್ನಲ್ಲಿರುವ ಶುಭ್ಮನ್ ಗಿಲ್, ಪಂಜಾಬ್ ವಿರುದ್ಧವೂ ಅಬ್ಬರಿಸಿದರು. ಚೇಸಿಂಗ್ನಲ್ಲಿ ಮತ್ತೆ ಮಿಂಚಿದ ಗಿಲ್, ಮತ್ತೊಂದು ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದರು. ಜವಾಬ್ದಾರಿಯ ಬ್ಯಾಟಿಂಗ್ ಮೂಲಕ 96 ರನ್(59 ಬಾಲ್, 11 ಬೌಂಡರಿ, 1 ಸಿಕ್ಸರ್) ತಂಡವನ್ನ ಗೆಲುವಿನ ಹೊಸ್ತಿಲಿಗೆ ತಂದು ನಿಲ್ಲಿಸಿದ ಶುಭ್ಮನ್ ಗಿಲ್, ಕೇವಲ 4 ರನ್ಗಳಿಂದ ಶತಕ ವಂಚಿತರಾಗಿ ಭಾರೀ ನಿರಾಸೆ ಅನುಭವಿಸಿ ಹೊರ ನಡೆದರು.
ಫೈನಲ್ ಓವರ್ ಥ್ರಿಲ್:
ಪಂಜಾಬ್ ತಂಡದ ಸವಾಲು ಬೆನ್ನತ್ತಿದ ಗುಜರಾತ್ ಟೈಟನ್ಸ್, ನಿರ್ಣಾಯಕ ಹಂತದಲ್ಲಿ ಪ್ರಮುಖ ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ಇದರ ಪರಿಣಾಮ ಗುಜರಾತ್ ಗೆಲುವಿಗೆ ಕೊನೆ ಓವರ್ನಲ್ಲಿ 19 ರನ್ಗಳ ಅಗತ್ಯವಿತ್ತು. ಈ ಹಂತದಲ್ಲಿ ಬೌಲಿಂಗ್ ದಾಳಿಗಿಳಿದ ಒಡಿಯನ್ ಸ್ಮಿತ್, ಮೊದಲ ಬಾಲ್ನಲ್ಲಿ ವೈಡ್ ಮೂಲಕ ಒಂದು ರನ್ ನೀಡಿದರು. ಹೀಗಾಗಿ ಗೆಲುವಿಗೆ 6 ಬಾಲ್ಗಳಲ್ಲಿ 18 ರನ್ಗಳಿಸಬೇಕಿತ್ತು. ಮೊದಲ ಎಸೆತದಲ್ಲಿ ರನ್ಗಳಿಸುವ ಆತುರದಲ್ಲಿ ನಾಯಕ ಹಾರ್ದಿಕ್ ಪಾಂಡ್ಯ ರನೌಟ್ ಬಲೆಗೆ ಬಿದ್ದರು.
ಈ ಹಂತದಲ್ಲಿ ಕಣಕ್ಕಿಳಿದ ರಾಹುಲ್ ತೆವಾಟಿಯ, 20ನೇ ಓವರ್ನ 2ನೇ ಬಾಲ್ನಲ್ಲಿ 1 ರನ್ಗಳಿಸಿದರು. ಬಳಿಕ 3ನೇ ಬಾಲ್ನಲ್ಲಿ ಡೇವಿಡ್ ಮಿಲ್ಲರ್ ಬೌಂಡರಿ ಬಾರಿಸಿದರೆ, 4ನೇ ಬಾಲ್ನಲ್ಲಿ 1 ರನ್ಗಳಿಸಿದರು. ಹೀಗಾಗಿ ಕೊನೆಯ ಎರಡು ಬಾಲ್ನಲ್ಲಿ ಗುಜರಾತ್ ಗೆಲುವಿಗೆ 12 ರನ್ಗಳ ಅಗತ್ಯವಿತ್ತು. 5ನೇ ಬಾಲ್ನಲ್ಲಿ ಭರ್ಜರಿ ಸಿಕ್ಸರ್ ಸಿಡಿಸಿದ ತೆವಾಟಿಯಾ, ಪಂದ್ಯದ ರೋಚಕತೆಯನ್ನ ಮತ್ತಷ್ಟು ಹೆಚ್ಚಿಸಿದರು. ಪರಿಣಾಮ 1 ಬಾಲ್ಗೆ 6 ರನ್ಬೇಕಿತ್ತು. ಕೊನೆಯ ಬಾಲ್ನಲ್ಲೂ ರಾಹುಲ್ ತೆವಾಟಿಯ, ಸಿಕ್ಸರ್ ಬಾರಿಸುವ ಮೂಲಕ ಗುಜರಾತ್ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು.
ಶುಭ್ಮನ್-ಸುದರ್ಶನ್ ಆಸರೆ:
190 ರನ್ಗಳ ಗುರಿ ಬೆನ್ನತ್ತಿದ ಗುಜರಾಜ್ ಟೈಟನ್ಸ್, ಮ್ಯಾಥ್ಯೂ ವೇಡ್(6) ಅವರ ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಜೊತೆಯಾದ ಶುಭ್ಮನ್ ಗಿಲ್(96) ಹಾಗೂ ಸಾಯಿ ಸುದರ್ಶನ್ 35(30) ಜವಾಬ್ದಾರಿಯ ಆಟವಾಡಿದರು. ಅಲ್ಲದೇ 2ನೇ ವಿಕೆಟ್ಗೆ ಈ ಜೋಡಿ 101 ರನ್ಗಳ ಅತ್ಯುತ್ತಮ ಜೊತೆಯಾಟದಿಂದ ತಂಡಕ್ಕೆ ಆಸರೆಯಾದರು. ಐಪಿಎಲ್ನ ಚೊಚ್ಚಲ ಪಂದ್ಯವಾಡಿದ ಸುದರ್ಶನ್, ಅದ್ಭುತ ಬ್ಯಾಟಿಂಗ್ನಿಂದ ಗಮನ ಸೆಳೆದರು. ನಂತರ ಬಂದ ಹಾರ್ದಿಕ್ ಪಾಂಡ್ಯ 24(18) ಉಪಯುಕ್ತ ಬ್ಯಾಟಿಂಗ್ ಪ್ರದರ್ಶಿಸಿದರು. ಪಂಜಾಬ್ ಪರ ರಬಾಡ 2, ರಾಹುಲ್ ಚಹರ್ 1 ವಿಕೆಟ್ ಪಡೆದರು.
ಲಿವಿಂಗ್ಸ್ಟೋನ್ ಅಬ್ಬರ:
ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ಉತ್ತಮ ಆರಂಭ ಪಡೆಯಲಿಲ್ಲ. ನಾಯಕ ಮಯಂಕ್ ಅಗರ್ವಾಲ್(5) ಹಾಗೂ ಜಾನಿ ಬೈರ್ಸ್ಟೌವ್(8) ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಆದರೆ ಗುಜರಾತ್ ಟೈಟನ್ಸ್ ಬೌಲರ್ಗಳ ಪ್ರಾಬಲ್ಯದ ನಡುವೆಯೂ ಲಿಯಾಮ್ ಲಿವಿಂಗ್ಸ್ಟೋನ್ 64 ರನ್ (27 ಬಾಲ್, 7 ಬೌಂಡರಿ, 4 ಸಿಕ್ಸರ್) ತಂಡಕ್ಕೆ ಆಸರೆಯಾದರು. ಇವರಿಗೆ ಶಿಖರ್ ಧವನ್(35) ಹಾಗೂ ಜಿತೇಶ್ ಶರ್ಮ(23) ಉತ್ತಮ ಸಾಥ್ ನೀಡಿದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಪಂಜಾಬ್, 20 ಓವರ್ನಲ್ಲಿ 189 ರನ್ಗಳಿಸಿತು.