ವಿಶ್ವ ಕ್ರಿಕೆಟ್ನ ಸರ್ವಶ್ರೇಷ್ಠ ಲೀಗ್ ಎನಿಸಿರುವ ಐಪಿಎಲ್ಗೆ ಭರ್ಜರಿ ಎಂಟ್ರಿ ಕೊಟ್ಟಿರುವ ಗುಜರಾತ್ ಟೈಟನ್ಸ್, 15ನೇ ಆವೃತ್ತಿಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸುವ ಮೂಲಕ ಹೊಸದೊಂದು ದಾಖಲೆ ನಿರ್ಮಿಸಿದೆ.
2022ರ ಐಪಿಎಲ್ಗೆ ಹೊಸ ತಂಡವಾಗಿ ಸೇರ್ಪಡೆಗೊಂಡಿರುವ ಗುಜರಾತ್ ಟೈಟನ್ಸ್, ಆರಂಭಿಕ ಮೂರು ಪಂದ್ಯಗಳನ್ನು ಗೆದ್ದು ಬೀಗುತ್ತಿದೆ. ಇದರೊಂದಿಗೆ ಐಪಿಎಲ್ನಲ್ಲಿ ತನ್ನ ಮೊದಲ ಮೂರು ಪಂದ್ಯಗಳನ್ನು ಗೆದ್ದ 3ನೇ ತಂಡವಾಗಿ ಗುಜರಾತ್ ಟೈಟನ್ಸ್, ಹೊಸದೊಂದು ದಾಖಲೆ ಸೃಷ್ಟಿಸಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಬಲಿಷ್ಠವಾಗಿರುವ ಗುಜರಾತ್, ಶ್ರೇಷ್ಠ ಪ್ರದರ್ಶನದಿಂದ ಪ್ರಶಸ್ತಿ ಗೆಲ್ಲುವ ಫೇವರೆಟ್ ತಂಡವಾಗಿ ಹೊರಹೊಮ್ಮುತ್ತಿದೆ.
ಟೀಂ ಇಂಡಿಯಾದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಸಾರಥ್ಯದಲ್ಲಿ ಮುನ್ನಡೆಯುತ್ತಿರುವ ಗುಜರಾತ್, ಟೂರ್ನಿಯ ಮೊದಲ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 5 ವಿಕೆಟ್ಗಳಿಂದ ಗೆದ್ದು ಶುಭಾರಂಭ ಮಾಡಿತು. ನಂತರ 2ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನ 14 ರನ್ಗಳಿಂದ ಮಣಿಸಿದ ಗುಜರಾತ್, 3ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧದ ರೋಚಕ ಫೈಟ್ನಲ್ಲಿ 6 ವಿಕೆಟ್ಗಳ ಜಯಭೇರಿ ಬಾರಿಸಿ ಹ್ಯಾಟ್ರಿಕ್ ಗೆಲುವಿನ ಸಾಧನೆ ಮಾಡಿತು. ಸತತ ಮೂರು ಗೆಲುವಿನೊಂದಿಗೆ ಗುಜರಾತ್ 6 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್ನಲ್ಲಿ 2ನೇ ಸ್ಥಾನಕ್ಕೇರಿದೆ.
ಈ ಹಿಂದೆ 2008ರಲ್ಲಿ ಎಂ.ಎಸ್.ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ಆರಂಭಿಕ ಮೂರು ಪಂದ್ಯಗಳನ್ನು ಗೆದ್ದಿತ್ತು. ಇದಾದ ನಂತರದಲ್ಲಿ 2016ರಲ್ಲಿ ಗುಜರಾತ್ ಲಯನ್ಸ್ ತಂಡ ಸುರೇಶ್ ರೈನಾ ಸಾರಥ್ಯದಲ್ಲಿ ಮೊದಲ ಮೂರು ಪಂದ್ಯಗಳನ್ನು ಗೆದ್ದು ಬೀಗಿತ್ತು. ಇದೀಗ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟನ್ಸ್, ಆರಂಭಿಕ ಮೂರು ಪಂದ್ಯವನ್ನ ಗೆದ್ದು ಕಮಾಲ್ ಮಾಡಿದೆ.