ಮಹಿಪಾಲ್ ಲೋಮ್ರೋರ್(42) ಜವಾಬ್ದಾರಿಯ ಬ್ಯಾಟಿಂಗ್ ಹಾಗೂ ಫಾಫ್ ಡುಪ್ಲೆಸ್ಸಿ(38) ಹಾಗೂ ವಿರಾಟ್ ಕೊಹ್ಲಿ(30) ಉತ್ತಮ ಜೊತೆಯಾಟದ ನೆರವಿನಿಂದ ಸಿಎಸ್‌ಕೆ ವಿರುದ್ಧ ಆರ್‌ಸಿಬಿ 173 ರನ್‌ಗಳಿಸಿತು.
ಪುಣೆಯ ಎಂಸಿಎ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಸೋತ ಆರ್‌ಸಿಬಿ ಬ್ಯಾಟಿಂಗ್ ಅವಕಾಶ ಪಡೆಯಿತು. ಸಾಂಘಿಕ ಬ್ಯಾಟಿಂಗ್ ಪ್ರದರ್ಶಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್‌ಗಳಲ್ಲಿ 8 ವಿಕೆಟ್‌ಗೆ 173 ರನ್‌ಗಳಿಸಿತು. ಆರ್‌ಸಿಬಿ ಪರ ಲೋಮ್ರೋರ್(42), ಫಾಫ್ ಡುಪ್ಲೆಸ್ಸಿ(38) ಹಾಗೂ ವಿರಾಟ್ ಕೊಹ್ಲಿ(30) ಉಪಯುಕ್ತ ರನ್ ಕಲೆಹಾಕಿದರು.

ಫಾಫ್-ಕೊಹ್ಲಿ ಜೊತೆಯಾಟ:
ಟಾಸ್ ಸೋತು ಮೊದಲು ಬ್ಯಾಟಿಂಗ್ ಅವಕಾಶ ಪಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಉತ್ತಮ ಆರಂಭ ಪಡೆಯಿತು. ತಂಡದ ಪರ ಇನ್ನಿಂಗ್ಸ್ ಆರಂಭಿಸಿದ ನಾಯಕ ಫಾಫ್ ಡುಪ್ಲೆಸ್ಸಿ 38 ರನ್(22 ಬಾಲ್, 4 ಬೌಂಡರಿ, 1 ಸಿಕ್ಸ್) ಹಾಗೂ ವಿರಾಟ್ ಕೊಹ್ಲಿ 30 ರನ್(33 ಬಾಲ್, 3 ಬೌಂಡರಿ, 1 ಸಿಕ್ಸ್) ಉತ್ತಮ ಆಟವಾಡಿದರು. ಅಲ್ಲದೇ ಮೊದಲ ವಿಕೆಟ್‌ಗೆ 62 ರನ್‌ಗಳಿಸಿದ ಈ ಜೋಡಿ ಆರ್‌ಸಿಬಿಗೆ ಭದ್ರಬುನಾದಿ ಹಾಕಿಕೊಟ್ಟರು.

ಆರ್‌ಸಿಬಿ ದಿಢೀರ್ ಕುಸಿತ:
ಒಂದು ಹಂತದಲ್ಲಿ ಉತ್ತಮವಾಗಿ ಆಡುತ್ತಿದ್ದ ಆರ್‌ಸಿಬಿ, ಕೇವಲ 17 ರನ್‌ಗಳ ಅಂತರದಲ್ಲಿ ಪ್ರಮುಖ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಡುಪ್ಲೆಸ್ಸಿ ಔಟಾದ ನಂತರ ಬಂದ ಗ್ಲೆನ್ ಮ್ಯಾಕ್ಸ್‌ವೆಲ್(3) ಇಲ್ಲನ ರನ್‌ಗಳಿಸುವ ಯತ್ನದಲ್ಲಿ ರನೌಟ್ ಬಲೆಗೆ ಬಿದ್ದರು. ಇದರ ಬೆನ್ನಲ್ಲೇ ವಿರಾಟ್ ಕೊಹ್ಲಿ ಸಹ ವಿಕೆಟ್ ಒಪ್ಪಿಸಿ ಹೊರ ನಡೆದರು. ಪರಿಣಾಮ ಆರ್‌ಸಿಬಿ 9.5 ಓವರ್‌ಗಳಲ್ಲಿ 79 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಪಟಿದಾರ್-ಲೋಮ್ರೋರ್ ಚೇತರಿಕೆ:
ನಿರ್ಣಾಯಕ ಹಂತದಲ್ಲಿ ಪ್ರಮುಖ ಮೂರು ವಿಕೆಟ್ ಕಳೆದುಕೊಂಡ ಆರ್‌ಸಿಬಿ, ಸಂಕಷ್ಟಕ್ಕೆ ಸಿಲುಕಿತು. ಈ ವೇಳೆ ಜೊತೆಯಾದ ರಜತ್ ಪಟಿದಾರ್(21) ಹಾಗೂ ಮಹಿಪಾಲ್ ಲೋಮ್ರೋರ್ 42 ರನ್(27 ರನ್, 3 ಬೌಂಡರಿ, 2 ಸಿಕ್ಸ್) ತಂಡಕ್ಕೆ ಚೇತರಿಕೆ ನೀಡಿದರು. ಚೆನ್ನೈ ಬೌಲಿಂಗ್ ದಾಳಿಗೆ ದಿಟ್ಟ ಪ್ರತ್ಯುತ್ತರ ನೀಡಿದ ಈ ಜೋಡಿ, 44 ರನ್‌ಗಳ ಅದ್ಭುತ ಜೊತೆಯಾಟವಾಡಿ ಮಿಂಚಿದರು. ಲೋಮ್ರೋರ್ ಹಾಗೂ ಕಾರ್ತಿಕ್ 5ನೇ ವಿಕೆಟ್‌ಗೆ 32 ರನ್‌ಗಳ ಉಪಯುಕ್ತ ಕಾಣಿಕೆ ನೀಡಿದರು. ಆದರೆ ಹಸರಂಗ(0), ಶಹಬಾಜ್ ಅಹ್ಮದ್(1), ಹರ್ಷಲ್ ಪಟೇಲ್(0) ಬಹುಬೇಗನೆ ವಿಕೆಟ್ ಒಪ್ಪಿಸಿದರು. ಕೊನೆ ಹಂತದಲ್ಲಿ ಬಿರುಸಿನ ಆಟವಾಡಿದ ದಿನೇಶ್ ಕಾರ್ತಿಕ್ 26* ರನ್(17 ಬಾಲ್, 1 ಬೌಂಡರಿ, 2 ಸಿಕ್ಸ್) ಮೂಲಕ ತಂಡದ ಮೊತ್ತವನ್ನ 170ರ ಗಡಿದಾಟಿಸಿದರು.

ಚೆನ್ನೈ ಸೂಪರ್ ಕಿಂಗ್ಸ್ ಪರ ಮಹೀಶ್ ತೀಕ್ಷಣ(3/27), ಮೊಯಿನ್ ಅಲಿ(2/28), ಪ್ರಿಟೋರಿಯಸ್(1/40) ಉತ್ತಮ ಬೌಲಿಂಗ್ ಪ್ರದರ್ಶಿಸಿದರು.