ಕನ್ನಡಿಗ ರಾಬಿನ್ ಉತ್ತಪ್ಪ(50) ಅವರ ಸ್ಪೋಟಕ ಅರ್ಧಶತಕ ಹಾಗೂ ಇತರೆ ಬ್ಯಾಟ್ಸ್ಮನ್ಗಳ ಉತ್ತಮ ಬ್ಯಾಟಿಂಗ್ ಪ್ರದರ್ಶನದಿಂದ ಅಬ್ಬರಿಸಿದ ಚೆನ್ನೈ ಸೂಪರ್ ಕಿಂಗ್ಸ್ 210 ಬೃಹತ್ ಮೊತ್ತ ಕಲೆಹಾಕಿದೆ.
ಇಲ್ಲಿನ ಬ್ರೆಬೌರ್ನ್ ಮೈದಾನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲ ಬ್ಯಾಟಿಂಗ್ ಅವಕಾಶ ಪಡೆದ ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟ್ಸ್ಮನ್ಗಳ ಭರ್ಜರಿ ಪ್ರದರ್ಶನದ ನೆರವಿನಿಂದ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 210 ರನ್ಗಳಿಸಿತು. ಬೌಲಿಂಗ್ ಹಾಗೂ ಫೀಲ್ಡಿಂಗ್ನಲ್ಲಿ ನೀರಸ ಪ್ರದರ್ಶನ ನೀಡಿದ ಲಕ್ನೋ ಸೂಪರ್ ಜೈಂಟ್ಸ್ ಈ ಪಂದ್ಯವನ್ನು ಗೆಲ್ಲಲು 211 ರನ್ಗಳ ಗುರಿ ಮುಟ್ಟಬೇಕಿದೆ.
ಚೆನ್ನೈ ಪರ ಆರಂಭಿಕನಾಗಿ ಕಣಕ್ಕಿಳಿದ ಋತುರಾಜ್ ಗಾಯಕ್ವಾಡ್(1) ಮತ್ತೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಆದರೆ 2ನೇ ವಿಕೆಟ್ಗೆ ಜೊತೆಯಾದ ರಾಬಿನ್ ಉತ್ತಪ್ಪ(50) ಹಾಗೂ ಮೊಯಿನ್ ಅಲಿ(35) ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಈ ಜೋಡಿ 56 ರನ್ಗಳ ಜೊತೆಯಾಟವಾಡಿ ತಂಡಕ್ಕೆ ಚೇತರಿಕೆ ನೀಡಿದರು. ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಉತ್ತಪ್ಪ 27 ಬಾಲ್ಗಳಲ್ಲಿ 8 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ ಅರ್ಧಶತಕ ಬಾರಿಸಿದರು. ಇವರಿಗೆ ಉತ್ತಮ ಸಾಥ್ ನೀಡಿದ ಮೊಯಿನ್ ಅಲಿ 22 ಬಾಲ್ಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ 35 ರನ್ಗಳಿಸಿ ವಿಕೆಟ್ ಒಪ್ಪಿಸಿದರು.
ನಂತರ ಜೊತೆಯಾದ ಶಿವಂ ದುಬೆ(49) ಹಾಗೂ ಅಂಬಟಿ ರಾಯುಡು(27) ಕೂಡ ಜವಾಬ್ದಾರಿಯ ಆಟವಾಡಿದರು. 4ನೇ ವಿಕೆಟ್ಗೆ 67 ರನ್ಗಳಿಸಿದ ಈ ಜೋಡಿ ತಂಡದ ರನ್ಗಳಿಕೆಯ ವೇಗವನ್ನು ಹೆಚ್ಚಿಸಿದರು. 4ನೇ ಕ್ರಮಾಂಕದಲ್ಲಿ ಬಂದ ಶಿವಂ ದುಬೆ 49 (30 ಎಸೆತ, 5 ಬೌಂಡರಿ, 2 ಸಿಕ್ಸ್) ಲಕ್ನೋ ಬೌಲರ್ಗಳ ಮೇಲೆ ಪ್ರಾಬಲ್ಯ ಸಾಧಿಸಿ, ಅಬ್ಬರದ ಆಟವಾಡಿದರು. ಉಳಿದಂತೆ ರವೀಂದ್ರ ಜಡೇಜಾ 17, ಎಂ.ಎಸ್.ಧೋನಿ 16* ರನ್ಗಳಿಸಿ ತಂಡದ ಮೊತ್ತವನ್ನ 200ರ ಗಡಿದಾಟಿಸಿದರು. ಲಕ್ನೋ ಸೂಪರ್ ಜೈಂಟ್ಸ್ ಪರ ರವಿ ಬಿಷ್ಣೋಯಿ 24/2 ಹಾಗೂ ಅವೇಶ್ ಖಾನ್ 38/2, ಆಂಡ್ರ್ಯೂ ಥೈ 41/2 ವಿಕೆಟ್ ಪಡೆದು ಉತ್ತಮ ಬೌಲಿಂಗ್ ಪ್ರದರ್ಶಿಸಿದರು.