ಆರಂಭಿಕ ಬ್ಯಾಟ್ಸ್ಮನ್ ಡೀನ್ ಎಲ್ಗರ್(67) ಹಾಗೂ ನಾಯಕ ತೆಂಬಾ ಬವುಮಾ(53*) ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ನಲ್ಲಿ ಸೌತ್ ಆಫ್ರಿಕಾ ಮೊದಲ ದಿನದ ಗೌರವ ತನ್ನದಾಗಿಸಿಕೊಂಡಿದೆ.
ಡರ್ಬನ್ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟ್ಸಮನ್ಗಳ ಜವಾಬ್ದಾರಿಯ ಆಟದಿಂದ ಸೌತ್ ಆಫ್ರಿಕಾ ಮೊದಲ ದಿನದಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 233 ರನ್ಗಳಿಸಿತು. ಆಫ್ರಿಕಾ ಪರ ತೆಂಬಾ ಬವುಮಾ(53*) ಹಾಗೂ ಕೈಲ್ ವರೆನ್ನೆ(27*) 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಸೌತ್ ಆಫ್ರಿಕಾ ಪರ ಆರಂಭಿಕರಾಗಿ ಕಣಕ್ಕಿಳಿದ ಡೀನ್ ಎಲ್ಗರ್(67) ಹಾಗೂ ಸೆರೆಲ್ ಎರ್ವಿನ್(41) ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಮೊದಲ ವಿಕೆಟ್ಗೆ 113 ರನ್ ಕಲೆಹಾಕಿದ ಈ ಜೋಡಿ ತಮ್ಮ ತಂಡಕ್ಕೆ ಸುಭದ್ರ ಅಡಿಪಾಯ ಹಾಕಿಕೊಟ್ಟರು. ಆದರೆ ಉತ್ತಮವಾಗಿ ಆಡುತ್ತಿದ್ದ ಈ ಜೋಡಿ ಕೇವಲ ನಾಲ್ಕು ರನ್ಗಳ ಅಂತರದಲ್ಲಿ ಪೆವಿಲಿಯನ್ ಸೇರಿಕೊಂಡರು. ನಂತರ ಕಣಕ್ಕಿಳಿದ ಕೆಗನ್ ಪೀಟರ್ಸನ್(19) ರನೌಟ್ ಬಲೆಗೆ ಬಿದ್ದರು. ಪರಿಣಾಮ ಉತ್ತಮ ಆರಂಭ ಕಂಡಿದ್ದ ಸೌತ್ ಆಫ್ರಿಕಾ ಕೇವಲ 33 ರನ್ಗಳಿಗೆ 3 ವಿಕೆಟ್ಗಳನ್ನು ಕಳೆದುಕೊಂಡು ಆಘಾತ ಅನುಭವಿಸಿತು.
ಈ ವೇಳೆ 4ನೇ ಕ್ರಮಾಂಕದಲ್ಲಿ ಬಂದ ರೆಯಾನ್ ರಿಕೆಲ್ಟನ್(21) ನಿರೀಕ್ಷಿತ ಆಟವಾಡುವಲ್ಲಿ ವಿಫಲರಾದರು. ಈ ಹಂತದಲ್ಲಿ ಜೊತೆಯಾದ ನಾಯಕ ತೆಂಬಾ ಬವುಮಾ ಹಾಗೂ ಕೈಲ್ ವರೆನ್ನೆ ತಂಡಕ್ಕೆ ಆಸರೆಯಾದರು. ಜವಾಬ್ದಾರಿಯ ಆಟವಾಡಿದ ತೆಂಬ ಬವುಮಾ, ತಮ್ಮ 18ನೇ ಟೆಸ್ಟ್ನಲ್ಲಿ 50ನೇ ಅರ್ಧಶತಕ ಬಾರಿಸಿದರು. ಅಲ್ಲದೇ ಬವುಮಾ ಹಾಗೂ ವರೆನ್ನೆ 5ನೇ ವಿಕೆಟ್ಗೆ ಅಜೇಯ 53 ರನ್ಗಳ ಜೊತೆಯಾಟವಾಡಿದರು. ಆದರೆ ಮಂದ ಬೆಳಕಿನ ಕಾರಣದಿಂದ ದಿನದಾಟವನ್ನು ಬಹುಬೇಗನೆ ಮುಕ್ತಾಯಗೊಳಿಸಲಾಯಿತು. ಬಾಂಗ್ಲಾದೇಶ ಪರ ಎಬ್ದೋತ್ ಹೊಸೈನ್, ಖಲೀದ್ ಅಹ್ಮದ್ ಹಾಗೂ ಮೆಹದಿ ಹಸನ್ ತಲಾ 1 ವಿಕೆಟ್ ಪಡೆದರು.