IPL 2022- RCB – ಆರ್ ಸಿಬಿ ಕಥೆ ಗೋವಿಂದಾ..! ಈ ಬಾರಿಯೂ ಕಪ್ ನಮ್ದಲ್ಲ..!

ಈ ಸಲ ಕೂಡ ಕಪ್ ನಮ್ದಲ್ಲ.. ಕಳೆದ 15 ವರ್ಷಗಳಿಂದ ಆರ್ ಸಿಬಿ ಕಪ್ ಗೆಲ್ಲುತ್ತೆ ಅಂತ ಕನಸು ಕಾಣುತ್ತಿದ್ದ ಆರ್ ಸಿಬಿ ಅಭಿಮಾನಿಗಳಿಗೆ ಈ ಬಾರಿಯೂ ನಿರಾಸೆ ಆಗುವುದು ಬಹುತೇಕ ಪಕ್ಕಾ..!
ಆರ್ ಸಿಬಿ ಸದ್ಯ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಹೀಗಾಗಿ ಫ್ಲೇ ಆಪ್ ಗೆ ಎಂಟ್ರಿಕೊಡಬಹುದು ಅನ್ನೋ ಆಶಾಭಾವನೆಯಂತೂ ಇದ್ದೇ. ಈಗಾಗಲೇ ಆಡಿರುವ 13 ಪಂದ್ಯಗಳಲ್ಲಿ ಏಳು ಪಂದ್ಯಗಳನ್ನು ಗೆದ್ದಿದೆ. ಆರು ಪಂದ್ಯಗಳಲ್ಲಿ ಸೋತಿದೆ. ಲೀಗ್ ನ ಕೊನೆಯ ಪಂದ್ಯವನ್ನು ಗುಜರಾತ್ ಟೈಟಾನ್ಸ್ ವಿರುದ್ಧ ಆಡಲಿದೆ. ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ರೂ ರನ್ ರೇಟ್ ಮೈನಸ್ ನಲ್ಲಿದೆ.
ಇನ್ನೊಂದೆಡೆ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಕೂಡ ಪ್ಲೇ ಆಫ್ ರೇಸ್ ನಲ್ಲಿವೆ. ಡೆಲ್ಲಿ ಮತ್ತು ಪಂಜಾಬ್ ತಂಡಗಳ ಪೈಕಿ ಒಂದು ತಂಡ ಇನ್ನುಳಿದಿರುವ ಎರಡು ಪಂದ್ಯಗಳನ್ನು ಗೆದ್ರೆ ಆರ್ ಸಿಬಿ ಮನೆಗೆ ಹೋಗುವುದು ಖಚಿತ. ಯಾಕಂದ್ರೆ ಪಂಜಾಬ್ ಮತ್ತು ಡೆಲ್ಲಿ ತಂಡಗಳ ರನ್ ರೇಟ್ ಪ್ಲಸ್ ನಲ್ಲಿದೆ.
ಹೀಗೆ ಲೆಕ್ಕಚಾರ ಮತ್ತು ಪಂಜಾಬ್ ಹಾಗೂ ಡೆಲ್ಲಿ ತಂಡಗಳ ಸೋಲು ಗೆಲುವುಗಳ ಮೇಲೆ ಆರ್ ಸಿಬಿ ಭವಿಷ್ಯ ನಿಂತಿದೆ. ಒಂದು ವೇಳೆ ಆರ್ ಸಿಬಿ ಲೀಗ್ ನ ಕೊನೆಯ ಪಂದ್ಯವನ್ನು ಗೆದ್ದುಕೊಂಡು, ಡೆಲ್ಲಿ ಮತ್ತು ಪಂಜಾಬ್ ತಂಡಗಳು ಕೊನೆಯ ಎರಡು ಪಂದ್ಯಗಳಲ್ಲಿ ಒಂದೊಂದು ಪಂದ್ಯವನ್ನು ಸೋತ್ರೆ ಮಾತ್ರ ಆರ್ ಸಿಬಿಗೆ ಪ್ಲೇ ಆಫ್ ಗೆ ಪ್ರವೇಶ ಪಡೆಯಬಹುದು. ಇಲ್ಲದೆ ಇದ್ರೆ ಈ ಬಾರಿಯೂ ಆರ್ ಸಿಬಿ ನಿರಾಸೆ ಅನುಭವಿಸಲಿದೆ.
ಹಾಗೇ ನೋಡಿದ್ರೆ, ಆರ್ ಸಿಬಿ ಟೂರ್ನಿಯ ಆರಂಭದಲ್ಲಿ ಸಾಕಷ್ಟು ಭರವಸೆ ಮೂಡಿಸಿತ್ತು. ಆದ್ರೆ ಹ್ಯಾಟ್ರಿಕ್ ಸೋಲಿನ ನಂತರ ಆರ್ ಸಿಬಿ ಎಚ್ಚೆತ್ತುಕೊಳ್ಳಲಿಲ್ಲ. ಆರಂಭದಲ್ಲಿ ದಿನೇಶ್ ಕಾರ್ತಿಕ್, ಗ್ಲೇನ್ ಮ್ಯಾಕ್ಸ್ ವೆಲ್, ಶಹಬಾಝ್ ಅಹಮ್ಮದ್ ಸಾಕಷ್ಟು ಭರವಸೆ ಮೂಡಿಸಿದ್ರು. ಆದ್ರೆ ವಿರಾಟ್ ಕೊಹ್ಲಿ ಅವರ ಕಳಪೆ ಫಾರ್ಮ್ ಆರ್ ಸಿಬಿ ಕಪ್ ಗೆಲ್ಲುವ ಕನಸನ್ನು ಭಗ್ನಗೊಳಿಸಿತ್ತು. ಸತತವಾಗಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ವಿರಾಟ್ ಕೊಹ್ಲಿ ಅವರ ಪಾಲಿಗೆ ಈ ಬಾರಿಯ ಐಪಿಎಲ್ ಕೆಟ್ಟ ಐಪಿಎಲ್ ಟೂರ್ನಿಯಾಗಿದೆ. ಇನ್ನೊಂದೆಡೆ ನಾಯಕ ಫಾಫ್ ಡುಪ್ಲೇಸಸ್ ಕೂಡ ನಿರೀಕ್ಷೆಗಳನ್ನು ಹುಸಿಗೊಳಿಸಿದ್ರು.
ಇನ್ನು ಬೌಲಿಂಗ್ ನಲ್ಲಿ ಮಹಮ್ಮದ್ ಸೀರಾಜ್ ಕೂಡ ದುಬಾರಿಯಾದ್ರು. ಹರ್ಷೆಲ್ ಪಟೇಲ್ ಸಹ ಪರಿಣಾಮಕಾರಿಯಾಗಲಿಲ್ಲ. ವನಿಂದು ಹಸರಂಗ ದುಡ್ಡು ಕೊಟ್ಟಿದ್ದಕ್ಕೆ ಸಾರ್ಥಕವಾಯ್ತು ಎಂದು ಹೇಳಬಹುದು. ಜೋಶ್ ಹ್ಯಾಝೇಲ್ ವುಡ್ ಜೋಶ್ ಎರಡು ಮೂರು ಪಂದ್ಯಗಳಿಗೆ ಸೀಮಿತವಾಯ್ತು. ಇನ್ನುಳಿದಂತೆ ಯುವ ಆಟಗಾರರು ಕೂಡ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ.

ಹಾಗೇ ನೋಡಿದ್ರೆ ಆರ್ ಸಿಬಿಯ ಟೀಮ್ ಕಾಂಬಿನೇಷನ್ ಕೂಡ ಹೇಳಿಕೊಳ್ಳುವ ಮಟ್ಟದಲ್ಲಿ ಇರಲಿಲ್ಲ. ಸಾಲು ಸಾಲು ಪಂದ್ಯಗಳನ್ನು ಗೆದ್ದಾಗ ತಂಡದ ಲೋಪದೋಷಗಳು ಕಣ್ಣಿಗೆ ಕಾಣಲಿಲ್ಲ. ಸೋತಾಗ ಎಲ್ಲವೂ ಗೊತ್ತಾಗುತ್ತದೆ. ಆರಂಭದಲ್ಲಿ ವಿರಾಟ್ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಆಡಿದ್ದರು. ಆಗ ಫಾಫ್ ಡುಪ್ಲೇಸಸ್ ಜೊತೆ ಇನಿಂಗ್ಸ್ ಆರಂಭಿಸುವ ಇನ್ನೊಬ್ಬ ಆಟಗಾರನ ಕೊರತೆ ಕಾಡಿತ್ತು. ನಂತರ ಫಾಫ್ ಜೊತೆ ವಿರಾಟ್ ಇನಿಂಗ್ಸ್ ಆರಂಭಿಸಿದ್ರು. ಆಗ ಮೂರನೇ ಕ್ರಮಾಂಕದ ಕೊರತೆ ಎದ್ದು ಕಾಣುತ್ತಿತ್ತು.
ಒಟ್ಟಿನಲ್ಲಿ ಆರ್ ಸಿಬಿ ಸ್ಥಿರ ಪ್ರದರ್ಶನ ನೀಡಲಿಲ್ಲ. ಸಂಘಟಿತ ಆಟವನ್ನು ಆಡಲಿಲ್ಲ. ಏಕಾಂಗಿ ಹೋರಾಟದಿಂದಲೇ ತಂಡ ಗೆಲುವು ಸಾಧಿಸಿತ್ತು. ಮುಖ್ಯವಾಗಿ ಆರ್ ಸಿಬಿ ಗೆ ಈ ಬಾರಿ ಪೆಟ್ಟು ಕೊಟ್ಟಿದ್ದು ತಂಡದ ಸೂಪರ್ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ.

ವಿರಾಟ್ ಕೊಹ್ಲಿ ಈ ರೀತಿಯ ಕೆಟ್ಟ ಆಟವನ್ನು ಯಾವತ್ತೂ ಆಡಿಲ್ಲ. ಹಾಗಂತ ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ಟೆಕ್ನಿಕ್ ಸಮಸ್ಯೆಯಾಗಿಲ್ಲ. ಫಿಟ್ ನೆಸ್ ಕೂಡ ಸಮಸ್ಯೆಯಾಗಿಲ್ಲ. ಆಗಿದ್ದು ವಿರಾಟ್ ಬ್ಯಾಡ್ ಟೈಮ್. ವಿರಾಟ್ ಅವರ ಕಳಪೆ ಆಟ ಆರ್ ಸಿಬಿ ಅಭಿಮಾನಿಗಳಿಗೆ ಮಾತ್ರ ನಿರಾಸೆಯನ್ನುಂಟು ಮಾಡಲಿಲ್ಲ. ಸ್ವತಃ ವಿರಾಟ್ ಕೊಹ್ಲಿಗೂ ಬೇಸರವಾಗಿದೆ. ಅದು ಅವರ ಹಾವ ಭಾವದಿಂದಲೇ ಗೊತ್ತಾಗುತ್ತಿದೆ. ವಿರಾಟ್ ಕೊಹ್ಲಿಗೆ ಏನು ಮಾಡಬೇಕು ಎಂಬುದೇ ಅರ್ಥವಾಗುತ್ತಿಲ್ಲ. ಅಷ್ಟರ ಮಟ್ಟಿಗೆ ಕೊಹ್ಲಿ ಕುಗ್ಗಿ ಹೋಗಿದ್ದಾರೆ.
ಒಟ್ಟಿನಲ್ಲಿ ಆರ್ ಸಿಬಿಗೆ ಈ ಬಾರಿಯೂ ಕಪ್ ಗೆಲ್ಲುವ ಅದೃಷ್ಟವಿಲ್ಲ. ಆದ್ರೂ ದೇವಯ ದಯೆ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ದುರಾದೃಷ್ಟದ ಲಾಭ ಪಡೆದ್ರೂ ಆರ್ ಸಿಬಿ ಅಚ್ಚರಿ ಏನಿಲ್ಲ. ಏನೇ ಆದ್ರೂ ಆರ್ ಸಿಬಿ ಕಥೆ ಈ ಬಾರಿಯೂ ಗೋವಿಂದಾ..!