ipl 2022- CSK – ಸುರೇಶ್ ರೈನಾಗೆ ಮಾಡಿದ ಅಪಮಾನಕ್ಕೆ ಸಿಎಸ್ ಕೆ ತಂಡಕ್ಕೆ ತಕ್ಕ ಪಾಠ..!

ಚೆನ್ನೈ ಸೂಪರ್ ಕಿಂಗ್ಸ್.. ಐಪಿಎಲ್ ನ ಯಶಸ್ವಿ ತಂಡ. ನಾಲ್ಕು ಬಾರಿ ಚಾಂಪಿಯನ್. ಐದು ಬಾರಿ ರನ್ನರ್ ಅಪ್.. ಒಂದು ಬಾರಿ ಸೆಮಿಫೈನಲ್. ಒಂದು ಬಾರಿ ಪ್ಲೇ ಆಫ್.. ಎರಡು ವರ್ಷ ನಿಷೇಧ.. ಇದೀಗ ಎರಡನೇ ಬಾರಿ ಲೀಗ್ ಹಂತಕ್ಕೆ ಸೀಮಿತ.
ಇದು ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಏರಿಳಿತಗಳ ಪಟ್ಟಿ.
ಒಂದಂತೂ ನಿಜ, ಸಿಎಸ್ ಕೆ ತಂಡದ ಯಶಸ್ಸಿನ ಶ್ರೇಯ ಮಹೇಂದ್ರ ಸಿಂಗ್ ಧೋನಿಗೆ ಸಲ್ಲಬೇಕು. ಕೂಲ್ ಕ್ಯಾಪ್ಟನ್ ಧೋನಿ ತಂಡವನ್ನು ಮುನ್ನಡೆಸಿದ್ದ ರೀತಿಯೂ ಆ ಮಟ್ಟದಲ್ಲಿತ್ತು. ಆಟಗಾರರ ಸಾಮಥ್ರ್ಯ ಮತ್ತು ಪ್ರತಿಭೆಯನ್ನು ಯಾವ ರೀತಿ ಬೆಳಕಿಗೆ ತರಬೇಕು ಎಂಬ ಕಲೆಯೂ ಧೋನಿಗಿತ್ತು. ಮ್ಯಾಚ್ ನ ಕೊನೆಯ ಎಸೆತದವರೆಗೂ ಸೋಲು ಗೆಲುವುಗಳನ್ನು ನಿರ್ಧರಿಸುತ್ತಿದ್ದ ನೈಪುಣ್ಯತೆಯೂ ಧೋನಿಗಿತ್ತು. ಹಾಗಾದ್ರೆ 2020ರಲ್ಲಿ ಮತ್ತು 2022ರಲ್ಲಿ ಧೋನಿ ಟೀಮ್ ಯಾಕೆ ಲೀಗ್ ಹಂತಕ್ಕೆ ಸೀಮಿತವಾಗಿತ್ತು. ಧೋನಿಗೆ ಅಷ್ಟೆಲ್ಲಾ ತಾಕತ್ತು., ಪ್ರತಿಭೆ, ಚಾಣಕ್ಷತನವಿದ್ರೂ ತಂಡ ಯಾಕೆ ಕಳಪೆ ಪ್ರದರ್ಶನ ನೀಡಿತ್ತು ಎಂಬ ಪ್ರಶ್ನೆಗೆ ಉತ್ತರ ಸುರೇಶ್ ರೈನಾ.

ಹೌದು, ನೆನಪಿಟ್ಟುಕೊಳ್ಳಿ.. ಸುರೇಶ್ ರೈನಾ ಅವರು ಮಹೇಂದ್ರ ಸಿಂಗ್ ಧೋನಿಯ ರೈಟ್ -ಲೆಫ್ಟ್ ಎರಡೂ ಆಗಿದ್ದರು. ಅದಕ್ಕಾಗಿಯೇ ಸಿಎಸ್ ಕೆ ಅಭಿಮಾನಿಗಳು ಧೋನಿಯವರನ್ನು ತಲೈವಾ ಅಂತ ಕರೆದ್ರೆ, ಸುರೇಶ್ ರೈನಾ ಅವರನ್ನು ಚಿಣ್ಣ ತಲೈವಾ ಅಂತ ಕರೆಯುತ್ತಿದ್ದರು. ಆದ್ರೆ ಇವರಿಬ್ಬರ ನಡುವೆ ಯಾವುದು ಕೂಡ ಸರಿ ಇಲ್ಲ ಎಂಬುದು ಗುಟ್ಟಾಗಿ ಉಳಿದಿಲ್ಲ.
ಹೌದು, 2020ರಲ್ಲಿ ಸುರೇಶ್ ರೈನಾ ಮತ್ತು ಸಿಎಸ್ ಕೆ ಟೀಮ್ ಮ್ಯಾನೇಜ್ ಮೆಂಟ್ ನಡುವೆ ಕಿತ್ತಾಟ ನಡೆಯಿತ್ತು. ಆನಂತರ ವೈಯಕ್ತಿಕ ಕಾರಣ ನೀಡಿ ಸುರೇಶ್ ರೈನಾ ತಂಡದಿಂದ ಹೊರಬಂದಿದ್ದರು. 2020ರ ಟೂರ್ನಿಯಲ್ಲಿ ಸಿಎಸ್ ಕೆ ತಂಡ ಏಳನೇ ಸ್ಥಾನ ಪಡೆದುಕೊಂಡಿತ್ತು. ಬಳಿಕ 2021ರಲ್ಲಿ ರೈನಾ ಮತ್ತೆ ಸಿಎಸ್ ಕೆ ಪರ ಆಡಿದ್ದರು. ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಆದ್ರೆ ಸುರೇಶ್ ರೈನಾ ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ.
2022ರ ಐಪಿಎಲ್ ನಲ್ಲಿ ಸುರೇಶ್ ರೈನಾ ಅವರನ್ನು ಸಿಎಸ್ ಕೆ ರಿಟೇನ್ ಮಾಡಿಕೊಳ್ಳಲಿಲ್ಲ. ಕೊನೆಗೆ ಐಪಿಎಲ್ ಮೆಗಾ ಹರಾಜಿನಲ್ಲೂ ಖರೀದಿ ಮಾಡಲಿಲ್ಲ. ಪರಿಣಾಮ ಸುರೇಶ್ ರೈನಾ ಅನ್ ಸೋಲ್ಡ್ ಆಟಗಾರನಾದ್ರು.

ಸುರೇಶ್ ರೈನಾ ಇಲ್ಲದ ಸಿಎಸ್ ಕೆ ತಂಡವನ್ನು ಊಹೆ ಮಾಡಿಕೊಳ್ಳುವುದು ಕೂಡ ಸಿಎಸ್ ಕೆ ಅಭಿಮಾನಿಗಳಿಗೆ ಕಷ್ಟವಾಗಿತ್ತು. ಸಾಮಾಜಿಕ ಜಾಲ ತಾಣದಲ್ಲೂ ಸಾಕಷ್ಟು ಟೀಕೆಗಳು ಕೂಡ ಕೇಳಿಬಂದಿದ್ದವು. ಅಲ್ಲದೆ ಧೋನಿ ಬದಲು ರವೀಂದ್ರ ಜಡೇಜಾಗೆ ನಾಯಕತ್ವ ನೀಡಲಾಗಿತ್ತು. ಅಲ್ಲೂ ಕೂಡ ಜಡ್ಡು ವಿಫಲರಾದ್ರು. ಸಾಲು ಸಾಲು ಸೋಲುಗಳಿಂದ ಕಂಗೆಟ್ಟಿದ್ದ ಜಡ್ಡು ಮತ್ತೆ ನಾಯಕ ಪಟ್ಟವನ್ನು ಧೋನಿಗೆ ಹಸ್ತಾಂತರಿಸಿದ್ರು. ಆದ್ರೂ ಪ್ರಯೋಜನವೇನೂ ಆಗಿಲ್ಲ. ಸದ್ಯ ಸಿಎಸ್ ಕೆ ತಂಡ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ.
ಇನ್ನು ಎರಡು ವರ್ಷ ನಿಷೇಧದ ಕಪ್ಪುಚುಕ್ಕೆ ಸಿಎಸ್ ಕೆ ತಂಡಕ್ಕಿದೆ. ಅದು ಬಿಟ್ರೆ ಸಿಎಸ್ ಕೆ ತಂಡದೊಳಗಿನ ಭಿನ್ನಾಭಿಪ್ರಾಯ, ಗೊಂದಲಗಳು ಕೇಳಿಬಂದಿದ್ದು ಎರಡೇ ಎರಡು ಬಾರಿ. ಅದು 2020 ಮತ್ತು 2022ರಲ್ಲಿ. 2020ರಲ್ಲಿ ಸುರೇಶ್ ರೈನಾ ಜೊತೆಗಿನ ಕಿರಿಕ್. 2022ರಲ್ಲಿ ನಾಯಕತ್ವದ ಗೊಂದಲ. ಹೀಗೆ ಸಿಎಸ್ ಕೆ ತಂಡದ ಟೀಮ್ ಮ್ಯಾನೇಜ್ ಮೆಂಟ್ ನ ಗೊಂದಲ ತಂಡದ ಮೇಲೆ ಗಾಢವಾದ ಪರಿಣಾಮ ಬೀರಿದೆ. ಇನ್ನೊಂದೆಡೆ ಸುರೇಶ್ ರೈನಾ ಅವರ ಅನುಪಸ್ಥಿತಿ ಕೂಡ ನಾಯಕ ಧೋನಿಯ ಮೇಲೆ ಎಫೆಕ್ಟ್ ಆಗಿದೆ. ಎಷ್ಟಾದ್ರೂ ಕುಚುಕ್ ದೋಸ್ತಿಗಳು ಅಲ್ವಾ. ipl 2022- CSK -What’s Wrong With Chennai-Super-Kings-flop-show
ಏನೇ ಆಗ್ಲಿ, ಸಿಎಸ್ ಕೆ ತಂಡದ ಯಶಸ್ಸಿನಲ್ಲಿ ಧೋನಿಯಷ್ಟೇ ಸುರೇಶ್ ರೈನಾ ಅವರ ಪಾಲು ಕೂಡ ಇದೆ. ಅದಕ್ಕೆ ಅವರು ಐಪಿಎಲ್ ನಲ್ಲಿ ದಾಖಲಿಸಿದ್ದ ರನ್ ಗಳು. ಜೊತೆಗೆ ಮಿಸ್ಟರ್ ಐಪಿಎಲ್ ಎಂಬ ಬಿರುದು ಕೂಡ ಇದೆ. ಏನೇ ಆಗ್ಲಿ, ಸುರೇಶ್ ರೈನಾ ಮಾಡಿರುವ ಅವಮಾನಕ್ಕೆ ತಕ್ಕ ಪಾಠವನ್ನು ಸಿಎಸ್ ಕೆ ತಂಡ ಅನುಭವಿಸಿದೆ.