ಐಪಿಎಲ್ 2022ಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮುನ್ನಡೆಸೋದು ಯಾರು? ಎಂಬ ಅಭಿಮಾನಿಗಳ ಈ ಪ್ರಶ್ನೆಗೆ ಕಡೆಗೂ ಉತ್ತರ ಸಿಗುವ ಕಾಲ ಸನ್ನಿಹಿತವಾಗಿದ್ದು, ಕೋಟ್ಯಾಂತರ ಅಭಿಮಾನಿಗಳ ಕುತೂಹಲ ಕೆರಳಿಸಿರುವ ಮಿಲಿಯನ್ ಡಾಲರ್ ಪ್ರಶ್ನೆಗೆ ಇಂದು(ಮಾ.7ರಂದು) ಉತ್ತರ ದೊರೆಯುವ ಸಾಧ್ಯತೆ ಇದೆ.
ಆರ್ಸಿಬಿ ತಂಡದ ನಾಯಕತ್ವದ ಸ್ಥಾನದಿಂದ ವಿರಾಟ್ ಕೊಹ್ಲಿ ಕೆಳಗಿಳಿದ ದಿನದಿಂದಲೂ ಮುಂದಿನ ಕ್ಯಾಪ್ಟನ್ ಯಾರು? ಎಂಬ ಪ್ರಶ್ನೆ ಕಳೆದ ಹಲವು ತಿಂಗಳುಗಳಿಂದ ಕ್ರಿಕೆಟ್ ಅಭಿಮಾನಿಗಳನ್ನ ಕಾಡುತ್ತಿದೆ. ಆದರೆ ಇದೀಗ ಈ ಎಲ್ಲಾ ಪ್ರಶ್ನೆ, ಕುತೂಹಲಗಳಿಗೆ ತೆರೆಬೀಳಲಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೊಸ ಕ್ಯಾಪ್ಟನ್ ಯಾರೆಂಬುದನ್ನ ಇಂದು ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಕಳೆದ ಸೀಸನ್ನಲ್ಲಿ ತಂಡವನ್ನು ಮುನ್ನಡೆಸಿದ್ದ ವಿರಾಟ್ ಕೊಹ್ಲಿ, ಕ್ಯಾಪ್ಟನ್ ಸ್ಥಾನದಿಂದ ಕೆಳಗಿಳಿದ ದಿನದಿಂದಲೂ ಹೊಸ ನಾಯಕನ ಕುರಿತು ಸಾಕಷ್ಟು ಚರ್ಚೆಗಳು ನಡೆದಿತ್ತು. ಹೀಗಾಗಿ ಹೊಸ ಸಾರಥಿಯ ಹುಡುಕಾಟದ್ದ ಆರ್ಸಿಬಿ ಮ್ಯಾನೇಜ್ಮೆಂಟ್, ನೂತನ ಕ್ಯಾಪ್ಟನ್ ಯಾರು ಎಂಬುದನ್ನ ಘೋಷಣೆ ಮಾಡಲು ನಿರ್ಧರಿಸಿದೆ. ಪ್ರಮುಖವಾಗಿ ಗ್ಲೆನ್ ಮ್ಯಾಕ್ಸ್ವೆಲ್, ಫಾಫ್ ಡುಪ್ಲೆಸ್ಸಿ, ದಿನೇಶ್ ಕಾರ್ತಿಕ್ ಅವರುಗಳ ಹೆಸರು ಮಂಚೂಣಿಯಲ್ಲಿದ್ದು, ಯಾರಿಗೆ ಈ ಅವಕಾಶ ಸಿಗಲಿದೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.
ಈ ನಡುವೆ ಚುಟುಕು ಕ್ರಿಕೆಟ್ ಹಬ್ಬವೆನಿಸಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಬಿಸಿಸಿಐ ಸಹ 15ನೇ ಆವೃತ್ತಿಯ ಐಪಿಎಲ್ ವೇಳಾಪಟ್ಟಿಯನ್ನು ಭಾನುವಾರ ಬಿಡುಗಡೆ ಮಾಡಿದೆ. ಹೀಗಾಗಿ ಕ್ರಿಕೆಟ್ನ ಮಹಾ ಸಂಗ್ರಾಮಕ್ಕೆ ಆರ್ಸಿಬಿ ಸೇರಿದಂತೆ ಎಲ್ಲಾ 10 ತಂಡಗಳು ತಯಾರಿ ಆರಂಭಿಸಿವೆ. ಪ್ರಸಕ್ತ ಸೀಸನ್ನಲ್ಲಿ ಆರ್ಸಿಬಿ ಮಾ.27ರಂದು ತನ್ನ ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.