IPL 2022- RCB – ವಿರಾಟ್ ಮಾಡಿದ್ದ ತಪ್ಪನ್ನು ಫಾಫ್ ಡು ಪ್ಲೇಸಸ್ ಮಾಡಿಲ್ಲ..!
ಅದೃಷ್ಟದ ಬೆಂಬಲವೋ ಏನೋ ಗೊತ್ತಿಲ್ಲ. ಆರ್ ಸಿಬಿ ಮಾತ್ರ 15ನೇ ಆವೃತ್ತಿಯ ಐಪಿಎಲ್ ನಲ್ಲಿ ಪ್ಲೇ ಆಫ್ ಪ್ರವೇಶಿಸಿದೆ. ಮೇ 25ರಂದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಆಡಲಿದೆ.
ಸಾಲು ಸಾಲು ಗೆಲುವು… ಸಾಲು ಸಾಲು ಸೋಲುಗಳ ನಡುವೆ ಹೇಗೋ ಆರ್ ಸಿಬಿ ಸತತವಾಗಿ ಮೂರನೇ ಬಾರಿ ಪ್ಲೇ ಆಫ್ ಎಂಟ್ರಿ ಪಡೆದ ಸಾಧನೆ ಮಾಡಿದೆ. ಒಟ್ಟಾರೆ, ಐಪಿಎಲ್ ನಲ್ಲಿ ಎಂಟನೇ ಬಾರಿ ಪ್ಲೇ ಆಫ್ ಪ್ರವೇಶ ಪಡೆದ್ರೂ ಒಂದು ಬಾರಿಯೂ ಪ್ರಶಸ್ತಿ ಗೆದ್ದಿಲ್ಲ. ಮೂರು ಬಾರಿ ರನ್ನರ್ ಅಪ್ ಆಗಿದೆ.
ಹಾಗೇ ನೋಡಿದ್ರೆ ಕಳೆದ ವರ್ಷ ವಿರಾಟ್ ಕೊಹ್ಲಿ ನಾಯಕತ್ವವನ್ನು ತ್ಯಜಿಸಿದ್ದಾಗ ಆರ್ ಸಿಬಿ ಕಥೆ ಮುಂದೇನು ಅನ್ನೋ ಪ್ರಶ್ನೆ ಎದುರಾಗಿತ್ತು. ಇದನ್ನೆಲ್ಲಾ ಮೊದಲೇ ಅರಿತುಕೊಂಡಿದ್ದ ಆರ್ ಸಿಬಿ ಟೀಮ್ ಮ್ಯಾನೇಜ್ ಮೆಂಟ್ ಪಕ್ಕಾ ಲೆಕ್ಕಚಾರದೊಂದಿಗೆ ಫಾಫ್ ಡುಪ್ಲೇಸಸ್ ಅವರನ್ನು ಐಪಿಎಲ್ ಹರಾಜಿನಲ್ಲಿ ಖರೀದಿ ಮಾಡಿತ್ತು. ಅಲ್ಲದೆ ಭಾರೀ ಬಿಲ್ಡಪ್ ನೊಂದಿಗೆ ನಾಯಕತ್ವವನ್ನು ಕೂಡ ಫಾಫ್ ಡು ಪ್ಲೇಸಸ್ ಅವರಿಗೆ ವಹಿಸಿತ್ತು.
ಫಾಫ್ ಡು ಪ್ಲೇಸಸ್ ಸಾರಥ್ಯದ ಆರ್ ಸಿಬಿ ತಂಡ ಆರಂಭದಲ್ಲೇ ಸಾಕಷ್ಟು ಭರವಸೆಯನ್ನು ಮೂಡಿಸಿತ್ತು. ದಿಟ್ಟ ನಾಯಕತ್ವ ಮತ್ತು ಸಂಯಮದಿಂದಲೇ ತಂಡವನ್ನು ಮುನ್ನಡೆಸಿದ್ದ ಫಾಫ್ ಡು ಪ್ಲೇಸಸ್ ಅವರು ಇದೀಗ ತಂಡವನ್ನು ಪ್ಲೇ ಆಫ್ ಗೆ ಎಂಟ್ರಿಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಇನ್ನೊಂದೆಡೆ ಆರ್ ಸಿಬಿಯ ಕೋಚ್ ಸಂಜಯ್ ಬಂಗಾರ್ ಕೂಡ ತಂಡದ ಆಟಗಾರರಿಗೆ ಉತ್ತೇಜನ ನೀಡುತ್ತಿದ್ದರು. ಕೋಚ್ ಮತ್ತು ನಾಯಕನ ಹೊಂದಾಣಿಕೆ ಕೂಡ ಆರ್ ಸಿಬಿ ತಂಡದ ಯಶಸ್ಸಿನಲ್ಲಿ ಪ್ರಮುಖ ವಹಿಸಿತ್ತು.
ಈ ಹಿಂದಿನ ಟೂರ್ನಿಗಳಲ್ಲಿ ಆರ್ ಸಿಬಿ ತಂಡ ಪದೇ ಪದೇ 11ರ ಬಳಗದಲ್ಲಿ ಬದಲಾವಣೆ ಮಾಡುತ್ತಿತ್ತು. ಒಬ್ಬ ಆಟಗಾರ ವೈಫಲ್ಯ ಅನುಭವಿಸಿದ್ರೆ ಆತನಿಗೆ ಮುಂದಿನ ಪಂದ್ಯದಲ್ಲಿ ಅವಕಾಶ ಸಿಗುತ್ತಿರಲಿಲ್ಲ. ವಿರಾಟ್ ಕೊಹ್ಲಿ ವೈಫಲ್ಯ ಅನುಭವಿಸುತ್ತಿರುವ ಆಟಗಾರರಿಗೆ ಹೆಚ್ಚು ಅವಕಾಶ ನೀಡುತ್ತಿರಲಿಲ್ಲ.
ಆದ್ರೆ ಫಾಫ್ ಡು ಪ್ಲೇಸಸ್ ಅವರು ವಿರಾಟ್ ಮಾಡಿದ್ದ ತಪ್ಪುಗಳನ್ನು ಮಾಡಲಿಲ್ಲ. ಆಟಗಾರರಿಗೆ ಅವಕಾಶ ನೀಡುತ್ತಿದ್ದರು. ಸತತವಾಗಿ ವೈಫಲ್ಯ ಅನುಭವಿಸಿದ್ದಾಗ ಮಾತ್ರ ಬದಲಾವಣೆ ಮಾಡುತ್ತಿದ್ದರು. ಆರಂಭದಲ್ಲಿ ಅನುಜ್ ರಾವತ್ ಗೆ ಹೆಚ್ಚು ಚಾನ್ಸ್ ನೀಡಿದ್ದರು. ಆದ್ರೆ ಪ್ರಯೋಜನವಾಗಲಿಲ್ಲ. ನಂತರ ರಜತ್ ಪಟಿದಾರ್ ಗೆ ಅವಕಾಶ ನೀಡಿದ್ರು. ಇನ್ನು ಬೌಲರ್ ಗಳಂತೂ ಬದಲಾವಣೆ ಮಾಡುವ ಗೋಜಿಗೆ ಕೂಡ ಹೋಗಲಿಲ್ಲ. IPL 2022- RCB – How Faf du Plessis Has Helped Stabilise RCB Ahead of Eliminator
ಇನ್ನೊಂದೆಡೆ ಈ ಹಿಂದಿನ ಟೂರ್ನಿಗಳಲ್ಲಿ ಆರ್ ಸಿಬಿ ವಿರಾಟ್ ಮತ್ತು ಎಬಿಡಿ ಅವರನ್ನು ಹೆಚ್ಚು ಅವಲಂಬಿತವಾಗಿತ್ತು. ಆದ್ರೆ ಈ ಬಾರಿ ಹಾಗಲ್ಲ. ವಿರಾಟ್ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದ್ರೂ ಗ್ಲೇನ್ ಮ್ಯಾಕ್ಸ್ ವೆಲ್, ದಿನೇಶ್ ಕಾರ್ತಿಕ್ ಮತ್ತು ಫಾಫ್ ಡು ಪ್ಲೇಸಸ್ ತಂಡವನ್ನು ಸಂಕಷ್ಟದಿಂದ ಪಾರು ಮಾಡಿ ಮಹತ್ವದ ಗೆಲುವನ್ನು ಸಾಧಿಸಲು ಸಾಧ್ಯವಾಯ್ತು.
ಹೀಗೆ ಫಾಫ್ ಡು ಪ್ಲೇಸಸ್ ಅವರ ನಾಯಕತ್ವದಲ್ಲಿ ಆರ್ ಸಿಬಿ ತಂಡದಲ್ಲಿ ಸಾಕಷ್ಟು ಬದಲಾವಣೆ ಕೂಡ ಆಗಿದೆ. ಮುಖ್ಯವಾಗಿ ಡ್ರೆಸಿಂಗ್ ರೂಮ್ ನ ವಾತಾವರಣವನ್ನು ಉತ್ತಮ ಪಡಿಸಿದ್ದಾರೆ. ಆಟಗಾರರು ಅಂಗಣದಲ್ಲಿ ಹೇಗೆ ವರ್ತಿಸಬೇಕು. ಡ್ರೆಸಿಂಗ್ ರೂಮ್ ನಲ್ಲಿ ಯಾವ ರೀತಿ ಶಾಂತಿಯನ್ನು ಕಾಯ್ದುಕೊಳ್ಳಬೇಕು ಎಂಬುದರ ಬಗ್ಗೆ ಟೀಮ್ ಮೀಟಿಂಗ್ ನಲ್ಲಿ ಫಾಫ್ ಡು ಪ್ಲೇಸಸ್ ಅವರು ಆಟಗಾರರಿಗೆ ಸ್ಪಷ್ಟವಾಗಿ ಹೇಳುತ್ತಿದ್ದರು.
ಒಟ್ಟಿನಲ್ಲಿ ಫಾಫ್ ಡು ಪ್ಲೇಸಸ್ ಅವರ ನಾಯಕತ್ವ ಆರ್ ಸಿಬಿ ತಂಡದಲ್ಲಿ ಭಾರಿ ಬದಲಾವಣೆಗೆ ಕಾರಣವಾಗಿದೆ. ದಕ್ಷಿಣ ಆಫ್ರಿಕಾದ ಮಾಜಿ ನಾಯಕ ತನ್ನ ಕ್ರಿಕೆಟ್ ಬದುಕಿನ ಅನುಭವಗಳನ್ನು ಆರ್ ಸಿಬಿ ತಂಡಕ್ಕೆ ಧಾರೆ ಎರೆದಿದ್ದಾರೆ. ಅಲ್ಲದೆ ಈ ಹಿಂದೆ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿದ್ದಾಗ ಧೋನಿಯವರಿಂದಲೂ ಸಾಕಷ್ಟು ಕಲಿತುಕೊಂಡಿರುವ ಫಾಫ್ ಡು ಪ್ಲೇಸಸ್ ಅವರು ಆರ್ ಸಿಬಿ ತಂಡದ ಪ್ರಭಾವಿ ನಾಯಕನಾಗಿ ಹೊರಹೊಮ್ಮಿದ್ದಾರೆ.