ಇದೇ ಮೊದಲ ಬಾರಿಗೆ ಇಂಡಿಯನ್ ಪ್ರೀಮಿಯರ್ ಲೀಗ್ ಆಡುತ್ತಿರುವ ಗುಜರಾತ್ ಟೈಟಾನ್ಸ್ ಮೊದಲ ಪ್ರಯತ್ನದಲ್ಲೇ ಫೈನಲ್ ಗೆ ಪ್ರವೇಶ ಪಡೆದಿದೆ. ಮಂಗಳವಾರ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಏಳು ವಿಕೆಟ್ ಗಳಿಂದ ಮಾಜಿ ಚಾಂಪಿಯನ್ ರಾಜಸ್ಥಾನ ರಾಯಲ್ಸ್ ತಂಡವನ್ನು ಮಣಿಸಿದ ಹಾರ್ದಿಕ್ ಪಡೆ ಪ್ರಶಸ್ತಿ ಸುತ್ತಿಗೆ ಅರ್ಹತೆ ಪಡದಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ ಪರ ಇನ್ನಿಂಗ್ಸ್ ಆರಂಭಿಸಿದ ಯಶಸ್ವಿ ಜೈಸ್ವಾಲ್ ರನ್ ಕಲೆ ಹಾಕುವಲ್ಲಿ ಎಡವಿದರು. ಎರಡನೇ ವಿಕೆಟ್ ಗೆ ಆರಂಭಿಕ ಜೋಸ್ ಬಟ್ಲರ್ ಅವರನ್ನು ಸೆರಿಕೊಂಡ ನಾಯಕ ಸಂಜು ಸ್ಯಾಮ್ಸನ್ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿದರು. ಸಂಜು ಸ್ಯಾಮ್ಸನ್ 5 ಬೌಂಡರಿ, 3 ಸಿಕ್ಸರ್ ಸಹಾಯದಿಂದ 47 ರನ್ ಸಿಡಿಸಿದರು. ಎರಡನೇ ವಿಕೆಟ್ ಗೆ ಬಟ್ಲರ್ ಹಾಗೂ ಸಂಜು 47 ಎಸೆತಗಳಲ್ಲಿ 68 ರನ್ ಕಲೆ ಹಾಕಿದರು.
ದೇವದತ್ ಪಡಿಕ್ಕಲ್ ಅವರ ಆಟ 20 ರನ್ ಗಳಿಗೆ ಸೀಮಿತವಾಯಿತು. ನಾಲ್ಕನೇ ವಿಕೆಟ್ ಗೆ ಬಟ್ಲರ್ ಸೇರಿಕೊಂಡ ಶಿಮ್ರೊನ್ ಹೆಟ್ಮೆಯರ್ (4) ಸಮಯೋಚಿತ ಆಟವನ್ನು ಆಡಿದರು. ಈ ಅವಧಿಯಲ್ಲಿ ಬಟ್ಲರ್ ತಮ್ಮ ರೌದ್ರರೂಪ ಪ್ರದರ್ಶಿಸಿದರು. ಪರಿಣಾಮ ಜೊತೆಯಾಟದ ಬಹುಪಾಲು ರನ್ ಬಟ್ಲರ್ ಬ್ಯಾಟಿನಿಂದ ಬಂದವು.
ಆರಂಭಿಕ ಜೋಸ್ ಬಟ್ಲರ್ ಆರಂಭದಲ್ಲಿ ರನ್ ಕಲೆ ಹಾಕುವಲ್ಲಿ ಹಿಂದೆ ಬಿದ್ದರೂ, ಸಮಯ ಕಳೆದಂತೆ ರನ್ ಮಹಲ್ ಕಟ್ಟಿದರು. 12 ಬೌಂಡರಿ, 2 ಸಿಕ್ಸರ್ ಸಹಾಯದಿಂದ 89 ರನ್ ಬಾರಿಸಿದ ಬಟ್ಲರ್ ತಂಡ ಉತ್ತಮ ಮೊತ್ತ ಕಲೆ ಹಾಕಲು ನೆರವಾದರು. ಅಂತಿಮವಾಗಿ ರಾಜಸ್ಥಾನ 20 ಓವರ್‌ಗಲ್ಲಿ 6 ವಿಕೆಟ್ ನಷ್ಟಕ್ಕೆ 185 ರನ್ ಸೇರಿಸಿತು.
ಗುರಿಯನ್ನು ಹಿಂಬಾಲಿಸಿದ ಟೈಟಾನ್ಸ್ ತಂಡದ ಭರವಸೆಯ ಆಟಗಾರ ವೃದ್ಧಿಮನ್ ಸಹಾ ನಿರಾಸೆ ಅನುಭವಿಸಿದರು. ಎರಡನೇ ವಿಕೆಟ್ ಗೆ ಶುಭ್‌ಮನ್ ಗಿಲ್ ಹಾಗೂ ಮ್ಯಾಥ್ಯು ವೇಡ್ ಜೋಡಿ 72 ರನ್ ಗಳ ಜೊತೆಯಾಟ ನೀಡಿತು. ಗಿಲ್ 35 ರನ್ ಬಾರಿಸಿದ್ದಾಗ ಇಲ್ಲದ ರನ್ ಕದಿಯಲು ಹೋಗಿ ಔಟ್ ಆದರು. ಮಧ್ಯಮ ಕ್ರಮಾಂಕದ ಮ್ಯಾಥ್ಯು ವೇಡ್ 35 ರನ್ ಗಳಿಗೆ ಆಟ ಮುಗಿಸಿದರು.
85 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಹಾರ್ದಿಕ್ ಪಾಂಡ್ಯ ಹಾಗೂ ಡೇವಿಡ್ ಮಿಲ್ಲರ್ ಆಸರೆಯಾದರು. ಈ ಜೋಡಿ 61 ಎಸೆತಗಳಲ್ಲಿ ಅಜೇಯ 106 ರನ್ ಗಳ ಜೊತೆಯಾಟವನ್ನು ನೀಡಿತು. ಹಾರ್ದಿಕ್ ಅಜೇಯ 40 ರನ್ ಬಾರಿಸಿದರು. ಡೇವಿಡ್ ಮಿಲ್ಲರ್ 5 ಸಿಕ್ಸರ್, 3 ಬೌಂಡರಿ ನೆರವಿನಿಂದ ಅಜೇಯ 68 ರನ್ ಸಿಡಿಸಿ ಗೆಲುವಿನಲ್ಲಿ ಮಿಂಚಿದರು. 19.3 ಓವರ್‌ಗಳಲ್ಲಿ 3 ವಿಕೆಟ್ ಗೆ 191 ರನ್ ಸೇರಿಸಿ ಜಯ ಸಾಧಿಸಿತು.