IPL 2022- RCB – Harshal Patel – ಆರ್ ಸಿಬಿ ಗೆ ಕಾಡುತ್ತಿದೆ ಹರ್ಷೆಲ್ ಪಟೇಲ್ ಗಾಯದ ಚಿಂತೆ..!

ಅದೃಷ್ಟದ ಬಲದೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಪ್ಲೇ ಆಫ್ ಗೆ ಎಂಟ್ರಿಕೊಟ್ಟಿದೆ. ಅಲ್ಲದೆ ಮೇ 25ರಂದು ಆರ್ ಸಿಬಿ ತಂಡ ಲಕ್ನೋ ಸೂಪರ್ ಜೈಂಟ್ಸ್ ತಂಡದ ವಿರುದ್ಧ ಎರಡನೇ ಪ್ಲೇ ಆಫ್ ಪಂದ್ಯವನ್ನು ಆಡಲಿದೆ.
ಅಂದ ಹಾಗೇ ಆರ್ ಸಿಬಿ ಕಳೆದ 15 ಆವೃತ್ತಿಗಳಲ್ಲಿ ಕಪ್ ಗೆದ್ದಿಲ್ಲ. ಮೂರು ಬಾರಿ ರನ್ನರ್ ಅಪ್ ಆಗಿರೋದು ಆರ್ ಸಿಬಿಯ ಶ್ರೇಷ್ಠ ಸಾಧನೆಯಾಗಿದೆ. ಆದ್ರೆ 15 ಆವೃತ್ತಿಗಳಲ್ಲಿ ಎಂಟು ಬಾರಿ ಪ್ಲೇ ಆಫ್ ಗೆ ಎಂಟ್ರಿಕೊಟ್ಟಿದೆ. ಏಳು ಬಾರಿ ಲೀಗ್ ಹಂತಕ್ಕೆ ಸೀಮಿತವಾಗಿದೆ.
ಪ್ರತಿ ವರ್ಷದಂತೆ ಈ ಬಾರಿಯೂ ಕಪ್ ನಮ್ದೆ ಅಂತ ಆರ್ ಸಿಬಿ ಅಭಿಮಾನಿಗಳು ಸಾಕಷ್ಟು ನಿರೀಕ್ಷೆಯಲ್ಲಿದ್ದಾರೆ. ಇನ್ನು ಕೆಲವರು ಆರ್ ಸಿಬಿ ಗೆಲ್ಲಲಿ, ಸೋಲಲಿ ಆರ್ ಸಿಬಿಗೆ ಜೈಕಾರ ಹಾಕುವಂತಹ ಅಪ್ಪಟ ಅಭಿಮಾನಿಗಳ ಬಳಗವನ್ನು ಆರ್ ಸಿಬಿ ಹೊಂದಿದೆ.
ಈ ನಡುವೆ, ಎಲಿಮಿನೇಟರ್ ಪಂದ್ಯಕ್ಕೆ ಮುನ್ನ ಆರ್ ಸಿಬಿ ತಂಡಕ್ಕೆ ಭಾರೀ ಆಘಾತಕಾರಿಯೊಂದು ಸುದ್ದಿ ಹೊರಬಿದ್ದಿದೆ. ಅದು ತಂಡದ ಟ್ರಂಪ್ ಕಾರ್ಡ್ ಬೌಲರ್ ಹರ್ಷೆಲ್ ಪಟೇಲ್ ಅವರು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಕಣಕ್ಕಿಳಿಯುತ್ತಾರೋ ಇಲ್ವೋ ಅನ್ನೋದು ಇನ್ನೂ ನಿಗೂಢವಾಗಿದೆ. IPL 2022- RCB – Harshal Patel – Will RCB’s Harshal Patel play Eliminator vs LSG?
ಹೌದು, ಹರ್ಷೆಲ್ ಪಟೇಲ್ ಅವರು ಗಾಯಗೊಂಡಿರುವುದು ಗೊತ್ತಿರುವ ವಿಚಾರವೇ. ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದ ವೇಳೆ ಕ್ಯಾಚ್ ಹಿಡಿಯುವಾಗ ಹರ್ಷೆಲ್ ಪಟೇಲ್ ಅವರು ಕೈಗೆ ಗಾಯ ಮಾಡಿಕೊಂಡಿದ್ದರು. ಅಲ್ಲದೆ ಕೈಗೆ ಹೊಲಿಗೆ ಕೂಡ ಹಾಕಲಾಗಿದೆ ಎಂದು ಸ್ವತಃ ಹರ್ಷೆಲ್ ಪಟೇಲ್ ಅವರೇ ಹೇಳಿಕೊಂಡಿದ್ದರು.

ಇದೀಗ ಹರ್ಷೆಲ್ ಪಟೇಲ್ ಅವರು ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಅಲ್ಲದೆ ಆರ್ ಸಿಬಿ ತರಬೇತಿ ಶಿಬಿರದಲ್ಲೂ ಭಾಗಿಯಾಗಿದ್ದಾರೆ. ಹಾಗಂತ ಹರ್ಷೆಲ್ ಪಟೇಲ್ ಅವರ ಗಾಯದ ಬಗ್ಗೆ ಆರ್ ಸಿಬಿ ಟೀಮ್ ಮ್ಯಾನೇಜ್ ಮೆಂಟ್ ಇನ್ನೂ ಸ್ಪಷ್ಟನೆ ನೀಡಿಲ್ಲ.
ಹರ್ಷೆಲ್ ಪಟೇಲ್ ಅವರು ಆರ್ ಸಿಬಿ ತಂಡದ ಪ್ರಮುಖ ಬೌಲರ್. ಒಂದು ವೇಳೆ ಹರ್ಷೆಲ್ ಪಟೇಲ್ ಅವರು ಅಲಭ್ಯರಾದ್ರೆ, ಸಿದ್ಧಾರ್ಥ್ ಕೌಲ್ ಅಥವಾ ಆಕಾಶ್ ದೀಪ್ ಅವರು 11ರ ಬಳಗದಲ್ಲಿ ಕಾಣಿಸಿಕೊಳ್ಳಬಹುದು.
ಕಳೆದ ಆವೃತ್ತಿಯಲ್ಲಿ ಹರ್ಷೆಲ್ ಪಟೇಲ್ ಅವರು ಅದ್ಭುತವಾದ ಬೌಲಿಂಗ್ ಪ್ರದರ್ಶನ ನೀಡಿದ್ದರು. 15 ಪಂದ್ಯಗಳಲ್ಲಿ 32 ವಿಕೆಟ್ ಗಳನ್ನು ಕಬಳಿಸಿದ್ದರು. ಆದ್ರೆ ಈ ಬಾರಿ ಸ್ವಲ್ಪ ದುಬಾರಿಯಾದ್ರೂ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸದ್ಯ ಆಡಿರುವ 14 ಪಂದ್ಯಗಳಲ್ಲಿ 18 ವಿಕೆಟ್ ಗಳನ್ನು ಉರುಳಿಸಿದ್ದಾರೆ.
ಒಟ್ಟಿನಲ್ಲಿ ಹರ್ಷೆಲ್ ಪಟೇಲ್ ಅವರ ಗಾಯ ಆರ್ ಸಿಬಿ ತಂಡಕ್ಕೆ ಚಿಂತೆಯನ್ನುಂಟು ಮಾಡಿದೆ. ಆದ್ರೆ ಅಭ್ಯಾಸ ಶಿಬಿರದಲ್ಲಿ ಕಾಣಿಸಿಕೊಂಡಿರುವುದರಿಂದ ಹರ್ಷೆಲ್ ಪಟೇಲ್ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಆಡ್ತಾರೆ ಅನ್ನೋ ನಂಬಿಕೆಯೂ ಇದೆ.