IPL 2022- ಆರ್ ಸಿಬಿ ತಂಡಕ್ಕೆ ಸಿಗಲಿದೆ ಮ್ಯಾಕ್ಸ್ ವೆಲ್ ಬಲ..!

15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿರೀಕ್ಷೆಗೂ ಮೀರಿದ ಪ್ರದರ್ಶನವನ್ನು ನೀಡುತ್ತಿದೆ. ಈಗಾಗಲೇ ಆಡಿರುವ ಮೂರು ಪಂದ್ಯಗಳಲ್ಲಿ ಎರಡು ಪಂದ್ಯಗಳನ್ನು ಗೆದ್ದುಕೊಂಡಿದೆ. ಒಂದು ಪಂದ್ಯವನ್ನು ಸೋತಿದೆ.
ಇನ್ನು ರಾಜಸ್ತಾನ ರಾಯಲ್ಸ್ ವಿರುದ್ಧದ ಪಂದ್ಯದ ನಂತರ ಆರ್ ಸಿಬಿ ಆಟಗಾರರ ಆತ್ಮವಿಶ್ವಾಸ ಕೂಡ ಹೆಚ್ಚಿದೆ. ಸೋಲಿನ ಭೀತಿಗೆ ಸಿಲುಕಿದ್ದ ಸಮಯದಲ್ಲಿ ಸಮಯೋಚಿತ ಆಟವನ್ನಾಡಿದ್ದ ದಿನೇಶ್ ಕಾರ್ತಿಕ್ ಮತ್ತು ಶಹಬಾಝ್ ಅಹಮ್ಮದ್ ತಂಡದ ಗೆಲುವಿನ ರೂವಾರಿಗಳಾದ್ರು.
ಈ ನಡುವೆ, ಆರ್ ಸಿಬಿ ತಂಡ ಮುಂದಿನ ಪಂದ್ಯಕ್ಕೆ ಅಣಿಯಾಗುತ್ತಿದೆ. ಏಪ್ರಿಲ್ 9ರಂದು ಆರ್ ಸಿಬಿ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಹೋರಾಟ ನಡೆಸಲಿವೆ.
ಈ ಪಂದ್ಯಕ್ಕೆ ಆರ್ ಸಿಬಿ ತಂಡದಲ್ಲಿ ಕೆಲವೊಂದು ಬದಲಾವಣೆಗಳು ಆಗಲಿವೆ. ತಂಡದ ಸ್ಟಾರ್ ಆಟಗಾರ ಗ್ಲೇನ್ ಮ್ಯಾಕ್ಸ್ ವೆಲ್ 11ರ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಈಗಾಗಲೇ ಗ್ಲೇನ್ ಮ್ಯಾಕ್ಸ್ ವೆಲ್ ಅವರು ಕ್ವಾರಂಟೈನ್ ಅವಧಿಯನ್ನು ಮುಗಿಸಿದ್ದಾರೆ. ಆದ್ರೆ ಕ್ರಿಕೆಟ್ ಆಸ್ಟ್ರೇಲಿಯಾದ ಆದೇಶದ ಹಿನ್ನೆಲೆಯಲ್ಲಿ ಅವರು ರಾಜಸ್ತಾನ ರಾಯಲ್ಸ್ ವಿರುದ್ಧ ಕಣಕ್ಕಿಳಿಯಲಿಲ್ಲ. ಆಸ್ಟ್ರೇಲಿಯಾ ತಂಡ ಪಾಕ್ ಪ್ರವಾಸದಲ್ಲಿದೆ. ಹೀಗಾಗಿ ಗುತ್ತಿಗೆ ಒಪ್ಪಂದ ಮಾಡಿಕೊಂಡ ಆಟಗಾರರು ಪಾಕ್ ಪ್ರವಾಸ ಮುಗಿದ ನಂತರ ಐಪಿಎಲ್ ನಲ್ಲಿ ಆಡಬೇಕು ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಾಕೀತು ಮಾಡಿತ್ತು. ಹೀಗಾಗಿ ಗ್ಲೇನ್ ಮ್ಯಾಕ್ಸ್ ವೆಲ್ ಆರ್ ಸಿಬಿ ತಂಡವನ್ನು ಸೇರಿಕೊಂಡ್ರೂ ಮೂರನೇ ಪಂದ್ಯವನ್ನು ಆಡಲಿಲ್ಲ. IPL 2022 – RCB Glenn Maxwell will be available against MI on April 9
ಇನ್ನು ಗ್ಲೇನ್ ಮ್ಯಾಕ್ಸ್ ವೆಲ್ ಅವರ ಆಗಮನದಿಂದ ಆರ್ ಸಿಬಿ ತಂಡಕ್ಕೆ ಹೆಚ್ಚಿನ ಬಲ ಬಂದಿದೆ. ಆಲ್ ರೌಂಡರ್ ಆಗಿರುವ ಗ್ಲೇನ್ ಮ್ಯಾಕ್ಸ್ ವೆಲ್ ನಾಲ್ಕನೇ ಕ್ರಮಾಂಕದಲ್ಲಿ ಆಡುವ ಸಾಧ್ಯತೆ ಇದೆ. ಡೆವಿಡ್ ವಿಲ್ಲೆ ಅವರು 11ರ ಬಳಗದಿಂದ ಹೊರಗುಳಿಯಬೇಕಾಗುತ್ತದೆ.
ಗ್ಲೇನ್ ಮ್ಯಾಕ್ಸ್ ವೆಲ್ ಅವರು 2021ರ ಐಪಿಎಲ್ ನಲ್ಲಿ ಆರ್ ಸಿಬಿ ತಂಡವನ್ನು ಸೇರಿಕೊಂಡಿದ್ದರು. ಆರ್ ಸಿಬಿ ತಂಡದ ಪರ ಮ್ಯಾಕ್ಸ್ ವೆಲ್ ಶ್ರೇಷ್ಠ ಪ್ರದರ್ಶನ ನೀಡಿದ್ದರು. ಹೀಗಾಗಿ ಗ್ಲೇನ್ ಮ್ಯಾಕ್ಸ್ ವೆಲ್ ಅವರನ್ನು ಆರ್ ಸಿಬಿ ತಂಡ 2022ರ ಐಪಿಎಲ್ ಟೂರ್ನಿಗೆ ರಿಟೇನ್ ಮಾಡಿಕೊಂಡಿತ್ತು. ಇನ್ನೊಂದೆಡೆ ಮ್ಯಾಕ್ಸ್ ವೆಲ್ ಅವರು ಐಪಿಎಲ್ ಆರಂಭಕ್ಕೆ ಮುನ್ನವೇ ಭಾರತೀಯ ಮೂಲದ ವಿನಿ ರಾಮನ್ ಅವರನ್ನು ಮದುವೆಯಾಗಿದ್ದರು. ಇದೀಗ ಮದುವೆ ಶಾಸ್ತ್ರ ಮುಗಿಸಿಕೊಂಡು ಆರ್ ಸಿಬಿ ತಂಡವನ್ನು ಸೇರಿಕೊಂಡಿದ್ದಾರೆ.