IPL 2022- Punjab Kings – ಕುಂಬ್ಳೆ ಹಠಾವೋ.. ಟೀಮ್ ಬಚಾವೋ..!

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ಗೆಲ್ಲಬಹುದಾಗಿದ್ದ ಪಂದ್ಯವನ್ನು ಸೋತಿದೆ. ಹೀಗಾಗಿ ಪಂಜಾಬ್ ಕಿಂಗ್ಸ್ ತಂಡದ ಪ್ಲೇ ಆಫ್ ಕನಸು ಕೂಡ ಬಹುತೇಕ ಭಗ್ನಗೊಂಡಿದೆ. ಬ್ಯಾಟ್ಸ್ ಮೆನ್ ಗಳ ವೈಫಲ್ಯದಿಂದಾಗಿ ಪಂಜಾಬ್ ಕಿಂಗ್ಸ್ ತಂಡದ ಸೋತಿದೆ ಎಂಬುದು ಎಷ್ಟು ಸತ್ಯವೋ.. ಡೆಲ್ಲಿ ಕ್ಯಾಪಿಟಲ್ಸ್ ಬೌಲರ್ ಗಳು ಅದ್ಭುತವಾದ ಬೌಲಿಂಗ್ ಪ್ರದರ್ಶನ ನೀಡಿದ್ದರು ಎಂಬುದು ಕೂಡ ಅಷ್ಟೇ ನಿಜ.
ಪಂದ್ಯ ಅಂದ್ರೆ ಸೋಲು ಗೆಲುವು ಇದ್ದದ್ದೇ. ಆದ್ರೆ ಹೇಗೆ ಗೆದ್ರು, ಹೇಗೆ ಸೋತ್ರೂ ಎಂಬುದು ಕೂಡ ಮುಖ್ಯವಾಗಿರುತ್ತದೆ. 159 ರನ್ ಗಳ ಸವಾಲನ್ನು ಬೆನ್ನಟ್ಟುವುದು ಪಂಜಾಬ್ ಕಿಂಗ್ಸ್ ತಂಡಕ್ಕೆ ದೊಡ್ಡ ಸವಾಲು ಏನು ಆಗಿರಲಿಲ್ಲ. ಯಾಕಂದ್ರೆ, ತಂಡದಲ್ಲಿ ಸ್ಟಾರ್ ಬ್ಯಾಟ್ಸ್ ಮೆನ್ ಗಳಾದ ಶಿಖರ್ ಧವನ್, ನಾಯಕ ಮಯಾಂಕ್ ಅಗರ್ ವಾಲ್, ಜಾನಿ ಬೇರ್ ಸ್ಟೋವ್ ಮತ್ತು ಲಿವಿಂಗ್ಸ್ಟೋನ್ ನಂತಹ ಅಪಾಯಕಾರಿ ಬ್ಯಾಟ್ಸ್ ಮೆನ್ ಗಳಿದ್ರು. ಆದ್ರೂ ಪಂಜಾಬ್ ಕಿಂಗ್ಸ್ ತಂಡ 17 ರನ್ ಗಳಿಂದ ಸೋಲು ಅನುಭವಿಸಿತ್ತು.
ಪಂಜಾಬ್ ಕಿಂಗ್ಸ್ ತಂಡದ ಆರಂಭದ ಅಬ್ಬರ ನೋಡಿದ್ರೆ ಸುಲಭವಾಗಿ ಪಂದ್ಯ ಗೆಲ್ಲುತ್ತೆ ಅಂತ ಎಲ್ಲರೂ ಅಂದುಕೊಂಡಿದ್ದರು. ಆದ್ರೆ 5ರಿಂದ 10 ಓವರ್ ತನಕ ಡೆಲ್ಲಿ ಬೌಲರ್ ಗಳು ಪಂಜಾಬ್ ತಂಡದ ಕೈಯಿಂದ ಗೆಲುವನ್ನು ಕಸಿದುಕೊಂಡ್ರು. ಪ್ರಮುಖ ಬ್ಯಾಟರ್ ಗಳು ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಪರೇಡು ನಡೆಸಿದಾಗ ಪಂಜಾಬ್ ಕಿಂಗ್ಸ್ ತಂಡದ ಪ್ಲೇ ಆಫ್ ಕನಸು ಕೂಡ ಕಮರಿ ಹೋಗುತ್ತಿತ್ತು.

ಇದೀಗ ತಂಡದ ಸೋಲಿಗೆ ಹೊಣೆ ಯಾರು..? ಬ್ಯಾಟ್ಸ್ ಮೆನ್ ಗಳ ವೈಫಲ್ಯವಾದ್ರೂ ಸೋಲಿಗೆ ಹೊಣೆ ನಾಯಕ ಮಯಾಂಕ್ ಅಗರ್ ವಾಲ್ ಮತ್ತು ಕೋಚ್ ಅನಿಲ್ ಕುಂಬ್ಳೆ.
ಈ ಬಾರಿಯ ಐಪಿಎಲ್ ನಲ್ಲಿ ಮಯಾಂಕ್ ಅಗರ್ ವಾಲ್ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಲಿಲ್ಲ. ಆದ್ರೂ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದರು. ಆದ್ರೆ ಮಹತ್ವದ ಪಂದ್ಯದಲ್ಲಿ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ವಿಫಲರಾದ್ರು.
ಇನ್ನೊಂದೆಡೆ ಪಂಜಾಬ್ ಕಿಂಗ್ಸ್ ತಂಡದ ಹೀನಾಯ ಪ್ರದರ್ಶನಕ್ಕೆ ಹೆಡ್ ಕೋಚ್ ಅನಿಲ್ ಕುಂಬ್ಳೆ ತಲೆದಂಡ ಆಗುವ ಸಾಧ್ಯತೆಗಳಿವೆ. ಈಗಾಗಲೇ ಟ್ವಿಟರ್ ನಲ್ಲಿ ಪಂಜಾಬ್ ಕಿಂಗ್ಸ್ ಅಭಿಮಾನಿಗಳು ಹೆಡ್ ಕೋಚ್ ಅನಿಲ್ ಕುಂಬ್ಳೆ ವಿರುದ್ಧ ಟೀಕೆ ಮಾಡುತ್ತಿದ್ದಾರೆ.
ತಂಡದ ಹೀನಾಯ ಪ್ರದರ್ಶನಕ್ಕೆ ಪ್ರಮುಖ ಕಾರಣ ಹೆಡ್ ಕೋಚ್ ಅನಿಲ್ ಕುಂಬ್ಳೆ ಎಂದು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ. ಹಾಗೇ ಕುಂಬ್ಳೆ ಹಠಾವೋ…ಟೀಮ್ ಬಚಾವೋ ಅಂತನೂ ಬರೆದುಕೊಂಡಿದ್ದಾರೆ.
ಕುಂಬ್ಳೆ ಸಾಬ್ ದಯವಿಟ್ಟು ಹೆಡ್ ಕೋಚ್ ಹುದ್ದೆಗೆ ರಾಜಿನಾಮೆ ನೀಡಿ ಎಂದು ಇನ್ನೊಬ್ಬ ಅಭಿಮಾನಿ ಟ್ವಿಟ್ ಮಾಡಿದ್ರೆ, ಕುಂಬ್ಳೆ ಟೀಮ್ ಕೊಹ್ಲಿ ಟೀಮ್ ಅನ್ನು ಮಾತ್ರ ಸೋಲಿಸುತ್ತದೆ ಎಂದು ಬರೆದುಕೊಂಡಿದ್ದಾರೆ. IPL 2022- Punjab Kings -Get rid of Anil Kumble’: Twitterati vents anger on PBKS

ಹಾಗೇ ವಿರಾಟ್ ಕೊಹ್ಲಿ ಐಸಿಸಿ ಪ್ರಶಸ್ತಿ ಗೆದ್ದಿಲ್ಲ ಅಂತ ಟೀಕೆ ಮಾಡುತ್ತೇವೆ. ಅದೇ ರೀತಿ ಅನಿಲ್ ಕುಂಬ್ಳೆ ಇಷ್ಟು ಒಳ್ಳೆಯ ಟೀಮ್ ಇದ್ರೂ ಕೂಡ ತಂಡವನ್ನು ಪ್ಲೇ ಆಫ್ ಎಂಟ್ರಿ ಪಡೆಯಲು ಸಾಧ್ಯವಾಗುತ್ತಿಲ್ಲ. ಅನಿಲ್ ಕುಂಬ್ಳೆಗೆ ರಕ್ಷಣೆ ನೀಡಲಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ.
ಹಾಗೇ ನೋಡಿದ್ರೆ ಅನಿಲ್ ಕುಂಬ್ಳೆ ಪಂಜಾಬ್ ಕಿಂಗ್ಸ್ ತಂಡದ ಹೆಡ್ ಕೋಚ್ ಆದ ನಂತರ ಬಲಿಷ್ಠ ತಂಡವನ್ನೇ ಕಟ್ಟಿದ್ದಾರೆ. ಅದರಲ್ಲೂ ಈ ಬಾರಿ ಲೆಕ್ಕಚಾರ ಹಾಕಿಕೊಂಡೇ ಆಟಗಾರರನ್ನು ಕೂಡ ಖರೀದಿ ಮಾಡಿದ್ದಾರೆ. ಹೆಡ್ ಕೋಚ್ ಅನಿಲ್ ಕುಂಬ್ಳೆ ಪ್ಲಾನ್ ನಂತೆ ಫ್ರಾಂಚೈಸಿ ಮಾಲೀಕರು ಕೂಡ ಸಾಥ್ ನೀಡಿದ್ದಾರೆ.
ಆದ್ರೆ ತಂಡದ ಆಟಗಾರರು ಸಂಘಟಿತ ಆಟವನ್ನು ಆಡಲಿಲ್ಲ. ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡು ವಿಭಾಗದಲ್ಲೂ ಉತ್ತಮ ಆಟಗಾರರು ಇದ್ರೂ ಮಹತ್ವದ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದ್ದಾರೆ.
ಹಾಗಂತ ತಂಡದ ಕಳಪೆ ಪ್ರದರ್ಶನಕ್ಕೆ ಹೆಡ್ ಕೋಚ್ ಕಾರಣ ಎಂದು ಹೇಳುವಂಗಿಲ್ಲ. ತಂಡದ ಗೇಮ್ ಪ್ಲಾನ್ ಮತ್ತು ಆಟಗಾರರ ತಪ್ಪುಗಳನ್ನು ಸರಿಪಡಿಸಿಕೊಳ್ಳುವುದು ಹೆಡ್ ಕೋಚ್ ಕೆಲಸ.ಆದ್ರೆ ಮೈದಾನದಲ್ಲಿ ಆಟವಾಡುವುದು ಆಟಗಾರರ ಜವಾಬ್ದಾರಿ. ಹೀಗಾಗಿ ಪಂಜಾಬ್ ಕಿಂಗ್ಸ್ ತಂಡದ ಸೋಲಿಗೆ ಹೆಡ್ ಕೋಚ್ ಅನಿಲ್ ಕುಂಬ್ಳೆ ಅವರನ್ನು ಟೀಕೆ ಮಾಡೋದು ಎಷ್ಟರ ಮಟ್ಟಿಗೆ ಸರಿ ಅನ್ನೊದೇ ಪ್ರಶ್ನೆಯಾಗಿದೆ.