IPL 2022- CSK – ಸಿಎಸ್ ಕೆ ತಂಡದ ನೂತನ ಸಾರಥಿಯಾಗ್ತಾರಾ ರುತುರಾಜ್ ಗಾಯಕ್ವಾಡ್…?

15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಕಳಪೆ ಪ್ರದರ್ಶನ ನೀಡಿದೆ. ಐಪಿಎಲ್ ಇತಿಹಾಸದಲ್ಲೇ ಸಿಎಸ್ ಕೆ ತಂಡ ಈ ರೀತಿ ಕಳಪೆ ಪ್ರದರ್ಶನ ನೀಡಿರುವುದು ಇದು ಎರಡನೇ ಬಾರಿ.
ಅದೇನೇ ಇರಲಿ, ಸಿಎಸ್ ಕೆ ತಂಡ ಈ ಬಾರಿಯ ಟೂರ್ನಿಯ ಆರಂಭದಲ್ಲೇ ಎಡವಟ್ಟು ಮಾಡಿಕೊಂಡಿತ್ತು. ಟೂರ್ನಿ ಶುರುವಾಗುವುದಕ್ಕಿಂತ ಎರಡು ದಿನಗಳ ಹಿಂದೆಯಷ್ಟೇ ರವೀಂದ್ರ ಜಡೇಜಾ ಅವರನ್ನು ನಾಯಕನ್ನಾಗಿ ಘೋಷಣೆ ಮಾಡಿತ್ತು.
ಇದು ಪೂರ್ವ ನಿಗದಿತ ಪ್ಲಾನ್ ಆಗಿದ್ರೂ ಕೊನೆಯ ಕ್ಷಣದಲ್ಲಿ ರವೀಂದ್ರ ಜಡೇಜಾ ಅವರನ್ನು ನಾಯಕನ್ನಾಗಿ ಮಾಡಿರುವುದು ಇಡೀ ತಂಡದಲ್ಲೇ ಗೊಂದಲಕ್ಕೂ ಕಾರಣವಾಗಿತ್ತು. ನಂತರ ಸಾಲು ಸಾಲು ಸೋಲುಗಳಿಂದ ರವೀಂದ್ರ ಜಡೇಜಾ ಅವರ ವೈಯಕ್ತಿಕ ಆಟದ ಮೇಲೂ ಪರಿಣಾಮ ಬೀರಿತ್ತು. ಕೊನೆಗೆ ರವೀಂದ್ರ ಜಡೇಜಾ ಅವರು ನಾಯಕತ್ವವನ್ನು ತ್ಯಜಿಸಿದಾಗ ಮತ್ತೆ ಮಹೇಂದ್ರ ಸಿಂಗ್ ಧೋನಿಗೆ ತಂಡದ ಸಾರಥ್ಯವನ್ನು ವಹಿಸಲಾಗಿತ್ತು.
ಇದೀಗ ಸಿಎಸ್ ಕೆ ತಂಡದ ಭವಿಷ್ಯದ ನಾಯಕ ಯಾರು ಅನ್ನೋ ಪ್ರಶ್ನೆ ಈಗ ಎದುರಾಗಿದೆ. ಯಾಕಂದ್ರೆ ಹಾಲಿ ನಾಯಕ ಮಹೇಂದ್ರ ಸಿಂಗ್ ಧೋನಿ ಮುಂದಿನ ಐಪಿಎಲ್ ನಲ್ಲಿ ಆಡ್ತಾರೋ ಇಲ್ವೋ ಅನ್ನೋದನ್ನು ಅವರೇ ಹೇಳಬೇಕು. ಕೊನೆಯ ಕ್ಷಣದಲ್ಲಿ ನಿರ್ಧಾರ ತೆಗೆದುಕೊಳ್ಳುವ ಧೋನಿಯ ಮನಸ್ಥಿತಿಯನ್ನು ಅರಿತುಕೊಳ್ಳುವುದು ಕೂಡ ಕಷ್ಟ.
ಹೀಗಾಗಿ ಧೋನಿಯಂತೆ ಸಿಎಸ್ ಕೆ ತಂಡವನ್ನು ಸುದೀರ್ಘ ಅವಧಿಗೆ ಯಾರು ಮುನ್ನಡೆಸುತ್ತಾರೆ ಅನ್ನೋ ಪ್ರಶ್ನೆ ಕೂಡ ಎದುರಾಗಿದೆ.

ಈ ಪ್ರಶ್ನೆಗೆ ಉತ್ತರ ಕೂಡ ಸಿಎಸ್ ಕೆ ತಂಡದಲ್ಲಿ ಸಿಗುವುದಿಲ್ಲ. ತಂಡದಲ್ಲಿರುವ ಬಹುತೇಕ ಆಟಗಾರರು ಸೀನಿಯರ್ಸ್. ಎಲ್ಲರೂ ಕೂಡ 30 ವಯಸ್ಸು ದಾಟಿದವರು. ಇರುವುದರಲ್ಲಿ ಯುವ ಆಟಗಾರ ಅಂದ್ರೆ ಅದು ರುತುರಾಜ್ ಗಾಯಕ್ವಾಡ್. ಸದ್ಯ ರುತುರಾಜ್ ಗಾಯಕ್ವಾಡ್ ಅವರಿಗೆ 25ರ ಹರೆಯ. ಹೀಗಾಗಿ ಕನಿಷ್ಠ ಮುಂದಿನ ಏಳೆಂಟು ವರ್ಷಗಳ ಕಾಲ ರುತುರಾಜ್ ಗಾಯಕ್ವಾಡ್ ಅವರಿಗೆ ತಂಡವನ್ನು ಮುನ್ನಡೆಸುವ ಅವಕಾಶವೂ ಇದೆ. ಇನ್ನು ಹೊರಗಿನ ಆಟಗಾರರನ್ನು ಖರೀದಿ ಮಾಡಿ ತಂಡದ ನಾಯಕತ್ವ ವಹಿಸುವ ಪ್ಲಾನ್ ಸಿಎಸ್ ಕೆ ತಂಡಕ್ಕಿದ್ರೂ ಅಂತಹ ಆಟಗಾರರು ಸಿಗೋದು ಕೂಡ ಕಷ್ಟ. ವಿದೇಶಿ ಆಟಗಾರರಿಗೆ ಸಿಎಸ್ ಕೆ ತಂಡ ನಾಯಕತ್ವ ನೀಡುವುದು ಕೂಡ ಅನುಮಾನವಾಗಿದೆ. ಹೀಗಾಗಿ ಸಿಎಸ್ ಕೆ ತಂಡಕ್ಕಿರುವ ಏಕೈಕ ಆಟಗಾರ ಅಂದ್ರೆ ರುತುರಾಜ್ ಗಾಯಕ್ವಾಡ್. IPL 2022- CSK – Ruturaj Gaikwad has shown glimpses of being a good leader
ಅಂದ ಹಾಗೇ ಟೀಮ್ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಕೂಡ ರುತುರಾಜ್ ಗಾಯಕ್ವಾಡ್ ಅವರಿಗೆ ಸಿಎಸ್ ಕೆ ತಂಡ ನಾಯಕತ್ವದ ಪಟ್ಟ ನೀಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಸೆಹ್ವಾಗ್ ಈ ರೀತಿ ಹೇಳುವುದಕ್ಕೆ ಕಾರಣವೂ ಇದೆ. ರುತುರಾಜ್ ಗಾಯಕ್ವಾಡ್ ಅವರು ಮಹಾರಾಷ್ಟ್ರ ತಂಡದ ನಾಯಕನಾಗಿದ್ದಾರೆ. ನಾಯಕನಾಗಿ ಪಂದ್ಯವನ್ನು ಯಾವ ರೀತಿ ಹತೋಟಿಯಲ್ಲಿಟ್ಟುಕೊಳ್ಳಬೇಕು ಎಂಬುದು ಕೂಡ ಗೊತ್ತಿದೆ. ಅಲ್ಲದೆ ರುತುರಾಜ್ ಗಾಯಕ್ವಾಡ್ ತಾಳ್ಮೆಯಿಂದಲೇ ಇರುತ್ತಾರೆ. ಶತಕ ದಾಖಲಿಸಲಿ, ಅಥವಾ ಸೊನ್ನೆಗೆ ಔಟಾಗಲಿ.. ಅವರ ಹಾವಭಾವಗಳಲ್ಲಿ ಯಾವುದೇ ವ್ಯತ್ಯಾಸಗಳು ಇರುವುದಿಲ್ಲ. ಕೂಲ್ ಆಗಿಯೇ ಇರುತ್ತಾರೆ ಎಂದು ಸೆಹ್ವಾಗ್ ಹೇಳಿದ್ದಾರೆ.

ಸಿಎಸ್ ಕೆ ತಂಡದ ಹಾಲಿ ನಾಯಕ ಮಹೇಂದ್ರ ಸಿಂಗ್ ಧೋನಿ ಕೂಡ ಕೂಲ್ ಆಗಿರುತ್ತಾರೆ. ಕೆಲವೊಂದು ಅಚ್ಚರಿಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಜೊತೆಗೆ ಅದೃಷ್ಟ ಕೂಡ ಅವರಿಗೆ ಸಾಥ್ ನೀಡಿದೆ. ಹೀಗಾಗಿ ಅವರು ಯಶ ಸಾಧಿಸಿದ್ದಾರೆ.
ಅದೇ ರೀತಿ ರುತುರಾಜ್ ಕೂಡ ಕೂಲ್ ಆಗಿದ್ದಾರೆ. ಬ್ಯಾಟಿಂಗ್ ನಲ್ಲೂ ಸ್ಥಿರತೆ ಇದೆ. ಕೂಲ್ ಆಗಿಯೇ ತಂಡವನ್ನು ಮುನ್ನಡೆಸುವ ಕಲೆ ಅವರಿಗೆ ಗೊತ್ತಿದೆ. ಆದ್ರೆ ಧೋನಿಯಂತೆ ಅದೃಷ್ಟವೊಂದು ಅವರ ಕೈ ಹಿಡಿದ್ರೆ ರುತುರಾಜ್ ಗಾಯಕ್ವಾಡ್ ಕೂಡ ಸಿಎಸ್ ಕೆ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಬಹುದು. ಇದು ನನ್ನ ಅಭಿಪ್ರಾಯ. ಆಯ್ಕೆ ಸಿಎಸ್ ಕೆ ಟೀಮ್ ಮ್ಯಾನೇಜ್ ಮೆಂಟ್‍ನದ್ದು ಎಂದು ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.
ಒಟ್ಟಿನಲ್ಲಿ ಮುಂದಿನ ಐಪಿಎಲ್ ನಲ್ಲಿ ಧೋನಿ ಆಡಲಿ, ಬಿಡಲಿ, ತಂಡಕ್ಕೆ ನೂತನ ಸಾರಥಿಯಂತೂ ಆಯ್ಕೆಯಾಗಿಯೇ ಆಯ್ಕೆಯಾಗುತ್ತಾನೆ. ಆದ್ರೆ ಸಿಎಸ್ ಕೆ ತಂಡ ನಾಯಕನ ಆಯ್ಕೆಯನ್ನು ಮೊದಲೇ ಘೋಷಣೆ ಮಾಡಬೇಕು. ಅದನ್ನು ಬಿಟ್ಟು ಸಪ್ರೈಸ್ ಕೊಡಲು ಹೋಗಿ ಕೈ ಸುಟ್ಟುಕೊಳ್ಳುವುದು ಬೇಡ. ಒಂದು ವೇಳೆ ಹಾಗೇ ಮಾಡಿದ್ರೆ ರವೀಂದ್ರ ಜಡೇಜಾಗೆ ಆದ ಸ್ಥಿತಿಯೇ ಆಗಬಹುದು. ಯಾವುದಕ್ಕೂ ಇರಲಿ ಎಚ್ಚರ..!