ಬ್ಯಾಟಿಂಗ್, ಬೌಲಿಂಗ್ ಜೊತೆಗೆ ಫೀಲ್ಡಿಂಗ್ ನಲ್ಲೂ ಕಮಾಲ್ ಮಾಡಿದ ಲಿಯಾಮ್ ಲಿವಿಂಗ್ ಸ್ಟೋನ್ ಆಲ್ರೌಂಡ್ ಪ್ರದರ್ಶನದ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ 54 ರನ್ ಗಳ ಭರ್ಜರಿ ಗೆಲುವು ಸಾಧಿಸಿತು.
ಇಲ್ಲಿನ ಬ್ರೆಬೌರ್ನ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ 20 ಓವರ್ ಗಳಲ್ಲಿ 180/8 ರನ್ ಗಳ ಉತ್ತಮ ಮೊತ್ತ ಕಲೆಹಾಕಿತು. ಈ ಸವಾಲು ಎದುರಿಸಿದ ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟಿಂಗ್ ವೈಫಲ್ಯಕ್ಕೆ ಸಿಲುಕಿತು. ಪಂಜಾಬ್ ಬೌಲರ್ ಗಳ ಸಾಂಘಿಕ ಆಟಕ್ಕೆ ಶರಣಾದ ಚೆನ್ನೈ, ಶಿವಂ ದುಬೆ 57(30) ಉತ್ತಮ ಬ್ಯಾಟಿಂಗ್ ನಡುವೆಯೂ 126 ರನ್ ಗಳಿಗೆ ಸರ್ವಪತನ ಕಂಡಿತು. ಆ ಮೂಲಕ 54 ರನ್ ಗಳ ಸೋಲು ಕಂಡ ಚೆನ್ನೈ, ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ಹ್ಯಾಟ್ರಿಕ್ ಸೋಲಿನ ಆಘಾತ ಅನುಭವಿಸಿತು.
ಪಂಜಾಬ್ ನೀಡಿದ ಸವಾಲಿನ ಮೊತ್ತ ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್, ಆಘಾತಕಾರಿ ಆರಂಭ ಕಂಡಿತು. ಚೊಚ್ಚಲ ಐಪಿಎಲ್ ಪಂದ್ಯವಾಡಿದ ವೈಭವ್ ಅರೋರ(2-21), ಕಗೀಸೋ ರಬಾಡ(1-28) ಹಾಗೂ ಅರ್ಶ್ ದೀಪ್(1-13) ಎದುರಾಳಿ ತಂಡಕ್ಕೆ ಶಾಕ್ ನೀಡಿದರು. ಚೆನ್ನೈ ಪರ ಆರಂಭಿಕರಾಗಿ ಕಣಕ್ಕಿಳಿದ ರಾಬಿನ್ ಉತ್ತಪ್ಪ(13) ಹಾಗೂ ಋತುರಾಜ್ ಗಾಯಕ್ವಾಡ್(3) ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ನಂತರ ಬಂದ ಮೊಯಿನ್ ಅಲಿ(0) ಹಾಗೂ ನಾಯಕ ರವೀಂದ್ರ ಜಡೇಜಾ(0) ಖಾತೆ ತೆರೆಯುವ ಮೊದಲೇ ಪೆವಿಲಿಯನ್ ಸೇರಿಕೊಂಡರು. ನಂತರ ಬಂದ ಅಂಬಟಿ ರಾಯುಡು(13) ಸಹ ತಂಡಕ್ಕೆ ಆಸರೆ ಆಗಲಿಲ್ಲಿ. ಪರಿಣಾಮ 36 ರನ್ ಗಳಿಗೆ ಪ್ರಮುಖ 5 ವಿಕೆಟ್ ಕಳೆದುಕೊಂಡ ಚೆನ್ನೈ ಸೂಪರ್ ಕಿಂಗ್ಸ್ ತೀವ್ರ ಸಂಕಷ್ಟಕ್ಕೆ ಸಿಲಿಕಿತು.
ಆದರೆ ಈ ಹಂತದಲ್ಲಿ ಜೊತೆಯಾದ ಶಿವಂ ದುಬೆ 57 ರನ್ (30 ಎಸೆತ, 6 ಬೌಂಡರಿ, 3 ಸಿಕ್ಸ್) ಹಾಗೂ ಧೋನಿ 23 ರನ್ (28 ಎಸೆತ, 1 ಬೌಂಡರಿ, 1 ಸಿಕ್ಸ್) ಎಚ್ಚರಿಕೆಯ ಆಟವಾಡಿದರು. ಅಲ್ಲದೇ 6ನೇ ವಿಕೆಟ್ ಜೊತೆಯಾಟದಲ್ಲಿ 62 ರನ್ ಕಲೆಹಾಕಿದ ಈ ಜೋಡಿ ತಂಡಕ್ಕೆ ಚೇತರಿಕೆ ನೀಡಿದರು. ಆದರೆ ಸ್ಪೋಟಕ ಬ್ಯಾಟಿಂಗ್ ಮೂಲಕ ಗೆಲುವಿಗಾಗಿ ಹೋರಾಟ ನಡೆಸುತ್ತಿದ್ದ ಶಿವಂ ದುಬೆ, 14.5ನೇ ಓವರ್ ನಲ್ಲಿ ವಿಕೆಟ್ ಒಪ್ಪಿಸಿ ಹೊರ ನಡೆದರು. ಇದರ ಮರು ಎಸೆತದಲ್ಲೇ ಡ್ವೇನ್ ಬ್ರಾವೋ(0) ಔಟಾದರು. ಒಂದೇ ಓವರ್ ನಲ್ಲಿ ಪ್ರಮುಖ ಎರಡು ವಿಕೆಟ್ ಕಬಳಿಸಿದ ಲಿವಿಂಗ್ ಸ್ಟೋನ್, ಪಂಜಾಬ್ ತಂಡಕ್ಕೆ ಬೌಲಿಂಗ್ ನಲ್ಲೂ ಆಸರೆಯಾದರು.
ಈ ವೇಳೆ ಪರಿಣಾಮಕಾರಿ ಬೌಲಿಂಗ್ ಪ್ರದರ್ಶಿಸಿದ ರಾಹುಲ್ ಚಹರ್(3-25) ಚೆನ್ನೈ ತಂಡದ ಕೆಳ ಕ್ರಮಾಂಕದ ಬ್ಯಾಟ್ಸ್ಮನ್ ಗಳಿಗೆ ಕಡಿವಾಣ ಹಾಕಿದರು. ಧೋನಿ(23), ಪ್ರಿಟೋರಿಯಸ್(8) ಹಾಗೂ ಕ್ರಿಸ್ ಜೋರ್ಡಾನ್(5) ಯಾವುದೇ ಪ್ರತಿರೋಧ ತೋರಲಿಲ್ಲ. ಪರಿಣಾಮ ಚೆನ್ನೈ 126 ರನ್ ಗಳಿಗೆ ತನ್ನ ಹೋರಾಟ ಅಂತ್ಯಗೊಳಿಸಿತು.
*ಲಿವಿಂಗ್ ಸ್ಟೋನ್ ಸ್ಪೋಟಕ ಆಟ*
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್, ಆರಂಭದಲ್ಲೇ ನಾಯಕ ಮಯಾಂಕ್ ಅಗರ್ವಾಲ್(4) ಹಾಗೂ ಬನುಕಾ ರಾಜಪಕ್ಸ(9) ವಿಕೆಟ್ ಕಳೆದುಕೊಂಡು ಆಘಾತ ಕಂಡಿತು. ಆದರೆ ನಂತರ ಜೊತೆಯಾದ ಧವನ್ ಹಾಗೂ ಲಿವಿಂಗ್ಸ್ಟೋನ್, ತಂಡಕ್ಕೆ ಚೇತರಿಕೆ ನೀಡಿದರು. ಜವಾಬ್ದಾರಿಯ ಆಟವಾಡಿದ ಈ ಜೋಡಿ 3ನೇ ವಿಕೆಟ್ಗೆ 95 ರನ್ಗಳ ಅದ್ಭುತ ಜೊತೆಯಾಟದಿಂದ ತಂಡಕ್ಕೆ ಆಸರೆಯಾದರು.
ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಲಿಯಾಮ್ ಲಿವಿಂಗ್ ಸ್ಟೋನ್ 60 ರನ್ (32 ಎಸೆತ, 5 ಬೌಂಡರಿ, 5 ಸಿಕ್ಸ್) ಮೂಲಕ ಅರ್ಧಶತಕ ಸಿಡಿಸಿ ಮಿಂಚಿದರು. ಇವರಿಗೆ ಶಿಖರ್ ಧವನ್(33) ಹಾಗೂ ಚೊಚ್ಚಲ ಐಪಿಎಲ್ ಪಂದ್ಯವಾಡಿದ ಜಿತೇಶ್ ಶರ್ಮ(26) ರನ್ಗಳ ಉಪಯುಕ್ತ ಕಾಣಿಕೆ ನೀಡಿ, ತಂಡಕ್ಕೆ ಆಸರೆಯಾದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಬಂದ ಶಾರೂಕ್ ಖಾನ್(6) ಹಾಗೂ ಒಡಿಯನ್ ಸ್ಮಿತ್(3) ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಅಂತಿಮವಾಗಿ ರಾಹುಲ್ ಚಹರ್(12), ರಬಾಡ(12*) ಅವರುಗಳ ನೆರವಿನಿಂದ ಪಂಜಾಬ್ 180/8 ರನ್ಗಳಿಸಿತು. ಚೆನ್ನೈ ಪರ ಕ್ರಿಸ್ ಜೋರ್ಡಾನ್ ಮತ್ತು ಪ್ರಿಟೋರಿಯಸ್ ತಲಾ 2 ವಿಕೆಟ್ ಪಡೆದರೆ. ಡ್ವೇನ್ ಬ್ರಾವೋ, ಮುಖೇಶ್ ಚೌಧರಿ, ರವೀಂದ್ರ ಜಡೇಜಾ ತಲಾ 1 ವಿಕೆಟ್ ಪಡೆದರು.