ವಿಶ್ವಕಪ್ ನಲ್ಲಿ ಸ್ಥಾನ ಪಡೆಯುವುದು ಪ್ರತಿಯೊಬ್ಬ ಆಟಗಾರನ ಕನಸು. ಒಂದು ಕುಟುಂಬದ ಸದಸ್ಯ ವಿಶ್ವಕಪ್ ನಲ್ಲಿ ಸ್ಥಾನ ಪಡೆದರೆ, ಮನೆಯವರಿಗೆ ಆಗುವು ಸಂತಸ ಹೇಳತಿರದು. ಅದರಲ್ಲೂ ತಮ್ಮ ಮನೆಯ ಶೋಕೇಸ್ ನಲ್ಲಿ ವಿಶ್ವಕಪ್ ನ ಸರಣಿ ಶ್ರೇಷ್ಠ ಪ್ರಶಸ್ತಿ ಇದ್ದರೆ, ಅದರ ಖದರ್ ಬೇರೆ. ಈಗ ನಾವು ಹೇಳಲು ಹೊರಟಿರುವ ದಂಪತಿ ಕ್ರಿಕೆಟ್ ಆಟಗಾರರು. ಅಷ್ಟೇ ಅಲ್ಲ ಇಬ್ಬರೂ ವಿಶ್ವಕಪ್ ನಲ್ಲಿ ಭರ್ಜರಿ ಪ್ರದರ್ಶನ ನೀಡಿ ಗಮನ ಸೆಳೆದವರೆ. ಅಲ್ಲದೆ ಇಬ್ಬರೂ ವಿಶ್ವಕಪ್ ವಿಜೇತ ತಂಡದ ಸದಸ್ಯರು.
ಈ ಅಪರೂಪದ ಸಾಧನೆ ಮಾಡಿರುವುದು ಬೇರೆ ಯಾರೂ ಅಲ್ಲ, ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಹಾಗೂ ಅವರ ಪತ್ನಿ ಅಲಿಸ್ಸಾ ಹೀಲಿ. ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ಪತಿ-ಪತ್ನಿ ಇಬ್ಬರೂ ವಿಶ್ವಕಪ್ನಲ್ಲಿ ಸರಣಿ ಶ್ರೇಷ್ಠ ಆಟಗಾರರಾಗಿ ಆಯ್ಕೆಯಾಗಿದ್ದಾರೆ. ಭಾನುವಾರ ಕೊನೆಗೊಂಡ ಮಹಿಳಾ ವಿಶ್ವಕಪ್ನಲ್ಲಿ ಹೀಲಿ ಟೂರ್ನಿಯ ಆಟಗಾರ್ತಿ ಎನಿಸಿಕೊಂಡರು. ಭಾನುವಾರ ಕ್ರೈಸ್ಟ್ಚರ್ಚ್ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಅಲಿಸ್ಸಾ ಹೀಲಿ 170 ರನ್ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಅವರ ಅಮೋಘ ಆಟದ ಬಲದಿಂದ ಇವರಿಗೆ ಪಂದ್ಯ ಶ್ರೇಷ್ಠ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿಗಳು ಸಂದಿವೆ.
ಈ ವಿಶ್ವಕಪ್ನ 9 ಪಂದ್ಯಗಳಲ್ಲಿ ಹೀಲಿ ಎರಡು ಶತಕಗಳನ್ನು ಗಳಿಸಿದ್ದಾರೆ. ಪ್ರಸಕ್ತ ಟೂರ್ನಿಯಲ್ಲಿ ಹೀಲಿ 56.56 ಸರಾಸರಿಯಲ್ಲಿ 509 ರನ್ ಕಲೆ ಹಾಕಿದ್ದಾರೆ. ಈ ಮೂಲಕ ಒಂದು ಋತುವಿನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿ ಎನಿಸಿಕೊಂಡಿದ್ದಾರೆ. ಅವರು ನ್ಯೂಜಿಲೆಂಡ್ನ ಡೆಬ್ಬಿ ಹಾಕ್ಲೆ ಅವರ 25 ವರ್ಷಗಳ ಹಳೆಯ ದಾಖಲೆಯನ್ನು ಮುರಿದರು ಮತ್ತು ಪಂದ್ಯಾವಳಿಯ ಒಂದು ಋತುವಿನಲ್ಲಿ 500 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ ಮೊದಲ ಮಹಿಳಾ ಆಟಗಾರ್ತಿ ಎಂಬ ಹಿರಿಮೆಗೆ ಪಾತ್ರರಾದರು.
ಹೀಲಿ ಅವರ ಪತಿ ಮತ್ತು ಕ್ರಿಕೆಟಿಗ ಮಿಚೆಲ್ ಸ್ಟಾರ್ಕ್ 2015 ರ ಏಕದಿನ ವಿಶ್ವಕಪ್ನ 8 ಪಂದ್ಯಗಳಲ್ಲಿ 22 ವಿಕೆಟ್ಗಳೊಂದಿಗೆ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಗೆದ್ದರು. ವಿಶ್ವಕಪ್ ಪ್ರಶಸ್ತಿ ಗೆದ್ದ ಮೊದಲ ಪತಿ-ಪತ್ನಿ ಜೋಡಿ ಇದಾಗಿದೆ. ಇದರೊಂದಿಗೆ ಮಹಿಳಾ ಮತ್ತು ಪುರುಷರ ವಿಶ್ವಕಪ್ ಫೈನಲ್ನಲ್ಲಿ 150 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಹೀಲಿ ಪಾತ್ರರಾದರು.
ಆಸ್ಟ್ರೇಲಿಯಾ-ನ್ಯೂಜಿಲೆಂಡ್ನಲ್ಲಿ ನಡೆದ 2015 ರ ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಸ್ಟಾರ್ಕ್ ಪ್ರಮುಖ ಪಾತ್ರ ವಹಿಸಿದ್ದರು. ಏಳು ವರ್ಷಗಳ ನಂತರ, ಅವರ ಪತ್ನಿ ಹೀಲಿ ಕೂಡ ತಮ್ಮ ತಂಡಕ್ಕೆ ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಗೆದ್ದರು. ಸ್ಟಾರ್ಕ್ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಕಬಳಿಸುವ ಕೆಲಸವನ್ನು ಮಾಡಿದರು.