ಪ್ರತಿಬಾರಿ ಐಪಿಎಲ್ ಪಂದ್ಯಾವಳಿಗಳು ಹಾಗೂ ಪಂದ್ಯಗಳಲ್ಲಿ ಒಂದಿಲ್ಲೊಂದು ಹೊಸ ದಾಖಲೆ, ಮೈಲಿಗಲ್ಲುಗಳು ಸೃಷ್ಟಿಯಾಗುತ್ತಲೇ ಇರುತ್ತದೆ. ಅದರಂತೆ ಇಂದು ನಡೆಯುವ ಐಪಿಎಲ್ ಟೂರ್ನಿಯ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳ ನಡುವಿನ ಪಂದ್ಯದಲ್ಲಿ ಹಲವು ಮೈಲುಗಲ್ಲುಗಳಿಗೆ ಸಾಕ್ಷಿಯಾಗಲಿದೆ.
ಉಮೇಶ್ ಯಾದವ್:
ಐಪಿಎಲ್ 2022ರಲ್ಲಿ ಭರ್ಜರಿ ಫಾರ್ಮ್ನಲ್ಲಿರುವ ಉಮೇಶ್ ಯಾದವ್, ಇಂದು ತಮ್ಮ 50ನೇ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ. 15ನೇ ಆವೃತ್ತಿಯಲ್ಲಿ ಅದ್ಭುತ ಫಾರ್ಮ್ನಲ್ಲಿರುವ ಉಮೇಶ್ ಯಾದವ್ ಈ ಬಾರಿ ಆಡಿರುವ ಎರಡು ಪಂದ್ಯದಲ್ಲಿ 5 ವಿಕೆಟ್ ಪಡೆದು ಮಿಂಚಿದ್ದಾರೆ.
ಶ್ರೇಯಸ್ ಅಯ್ಯರ್:
ಕೆಕೆಆರ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಇಂದಿನ ಪಂದ್ಯದಲ್ಲಿ 1 ಬೌಂಡರಿ ದಾಖಲಿಸಿದರೆ ಐಪಿಎಲ್ನಲ್ಲಿ 200ನೇ ಬೌಂಡರಿ ಗಡಿದಾಟಲಿದ್ದಾರೆ.
ಕಗೀಸೋ ರಬಾಡ:
ಸೌತ್ ಆಫ್ರಿಕನ್ ಸ್ಪೀಡ್ ಸ್ಟಾರ್ ಕಗೀಸೋ ರಬಾಡ, ಇಂದು ನಡೆಯುವ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವ ನಿರೀಕ್ಷೆಯಲ್ಲಿದ್ದಾರೆ. ಇಂದಿನ ಪಂದ್ಯದಲ್ಲಿ ರಬಾಡ ಒಂದು ಕ್ಯಾಚ್ ಹಿಡಿದರೆ ಟಿ20 ಕ್ರಿಕೆಟ್ನಲ್ಲಿ 50 ಕ್ಯಾಚ್ ಪೂರೈಸಲಿದ್ದಾರೆ.
ಟಿಮ್ ಸೌತಿ:
ಕೆಕೆಆರ್ ತಂಡದ ಪ್ರಮುಖ ವೇಗದ ಬೌಲರ್ ಟಿಮ್ ಸೌತಿ, ಇಂದಿನ ಪಂದ್ಯದಲ್ಲಿ 2 ವಿಕೆಟ್ ಪಡೆದರೆ ಟಿ20 ಕ್ರಿಕೆಟ್ನಲ್ಲಿ 250 ವಿಕೆಟ್ ಪಡೆದ ಸಾಧನೆ ಮಾಡಲಿದ್ದಾರೆ.
ಸುನೀಲ್ ನರೈನ್:
ಕೊಲ್ಕತ್ತಾ ತಂಡದ ಸ್ಪಿನ್ ಮಾಂತ್ರಿಕ ಸುನೀಲ್ ನರೈನ್, ಐಪಿಎಲ್ನಲ್ಲಿ ಸಾವಿರ ರನ್ಗಳ ಹೊಸ್ತಿಲ್ಲಿದ್ದಾರೆ. ಬೌಲಿಂಗ್ ಜೊತೆಗೆ ಬ್ಯಾಟಿಂಗ್ನಲ್ಲೂ ಕಮಾಲ್ ಮಾಡಬಲ್ಲ ನರೈನ್, ಇಂದಿನ ಪಂದ್ಯದಲ್ಲಿ 34 ರನ್ಗಳಿಸಿದರೆ, ಐಪಿಎಲ್ನಲ್ಲಿ 1 ಸಾವಿರ ರನ್ಗಳನ್ನು ಪೂರೈಸಲಿದ್ದಾರೆ.
ಮಯಾಂಕ್ ಅಗರ್ವಾಲ್:
ಪಂಜಾಬ್ ಕಿಂಗ್ಸ್ ನಾಯಕತ್ವದ ಹೊಣೆ ಹೊತ್ತಿರುವ ಕನ್ನಡಿಗ ಮಯಾಂಕ್ ಅಗರ್ವಾಲ್ ಟಿ20 ಕ್ರಿಕೆಟ್ನಲ್ಇ 4 ಸಾವಿರ ರನ್ಗಳ ಹೊಸ್ತಿಲಲ್ಲಿದ್ದು, ಇದಕ್ಕಾಗಿ ಮಯಾಂಕ್ ಅವರಿಗೆ 51 ರನ್ಗಳ ಅಗತ್ಯವಿದೆ.
ಅಜಿಂಕ್ಯಾ ರಹಾನೆ:
ಕೆಕೆಆರ್ ತಂಡದ ಆರಂಭಿಕ ಬ್ಯಾಟ್ಸ್ಮನ್ ಆಗಿ ಯಶಸ್ಸು ಕಾಣುತ್ತಿರುವ ಅಜಿಂಕ್ಯಾ ರಹಾನೆ, ಐಪಿಎಲ್ನಲ್ಲಿ 4000 ರನ್ಗಳ ಹೊಸ್ತಿಲಲ್ಲಿದ್ದಾರೆ. ಇಂದಿನ ಪಂದ್ಯದಲ್ಲಿ ರಹಾನೆ 6 ರನ್ಗಳನ್ನು ಗಳಿಸಿದರೆ, 4 ಸಾವಿರ ರನ್ ಗಡಿದಾಟಲಿದ್ದಾರೆ.
ಶಿಖರ್ ಧವನ್:
ಪ್ರಸಕ್ತ ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ಆರಂಭಿಕ ಬ್ಯಾಟ್ಸ್ಮನ್ ಆಗಿ ಆಡುತ್ತಿರುವ ಶಿಖರ್ ಧವನ್, ಟಿ20 ಕ್ರಿಕೆಟ್ನಲ್ಲಿ 1 ಸಾವಿರ ಬೌಂಡರಿಯ ಸನಿಹದಲ್ಲಿದ್ದಾರೆ. ಇಂದಿನ ಪಂದ್ಯದಲ್ಲಿ ಧವನ್, 8 ಬೌಂಡರಿ ಬಾರಿಸಿದರೆ ಟಿ20 ಕ್ರಿಕೆಟ್ನಲ್ಲಿ ಒಂದು ಸಾವಿರ ಬೌಂಡರಿ ಬಾರಿಸಿದ ಕೀರ್ತಿ ತನ್ನದಾಗಿಸಿಕೊಳ್ಳಲಿದ್ದಾರೆ.