ಸನ್ರೈಸರ್ಸ್ ಮತ್ತು ಲಖನೌ ಸೂಪರ್ ಜೈಂಟ್ಸ್ ನಡುವಿನ ಪಂದ್ಯ ಹಲವು ಕಾರಣಗಳಿಂದ ಮಹತ್ವ ಪಡೆದಿದೆ. ಸನ್ ರೈಸರ್ಸ್ ಮೇಲ್ನೋಟಕ್ಕೆ ಅದ್ಭುತ ತಂಡವಾಗಿ ಕಂಡರೂ ಸಾಮರ್ಥ್ಯಕ್ಕೆ ತಕ್ಕ ಆಟ ಆಡಿಲ್ಲ. ಮತ್ತೊಂದು ಕಡೆಯಲ್ಲಿ ಲಖನೌ ತಂಡ ಸತತ 2ನೇ ಗೆಲುವಿನ ಲೆಕ್ಕಾಚಾರ ಮಾಡಿದರೂ ದೌರ್ಬಲ್ಯಗಳನ್ನು ಸರಿಪಡಿಸಿಕೊಳ್ಳಬೇಕಿದೆ.
ಸನ್ ರೈಸರ್ಸ್ ಪ್ಲಾನ್
ಸನ್ ರೈಸರ್ಸ್ ತಂಡಕ್ಕೆ ಸಮಸ್ಯೆ ಸಾಕಷ್ಟಿದೆ. ಮೊದಲ ಪಂದ್ಯದಲ್ಲಿ ಅಂದುಕೊಂಡಿದ್ದು ಯಾವುದೂ ವರ್ಕೌಟ್ ಆಗಲಿಲ್ಲ. ಕೇನ್ ವಿಲಿಯಮ್ಸನ್, ಅಭಿಷೇಕ್ ಶರ್ಮಾ ಮತ್ತು ರಾಹುಲ್ ತ್ರಿಪಾಠಿಯಂತಹ ಟಾಪ್ ಆರ್ಡರ್ ಬ್ಯಾಟ್ಸ್ಮನ್ಗಳಿದ್ದರೂ ಸ್ಪೋಟಕ ಆರಂಭ ಸಿಗಲಿಲ್ಲ. ಹೀಗಾಗಿ 2ನೇ ಪಂದ್ಯದಲ್ಲಿ ಬ್ಯಾಟಿಂಗ್ ಆರ್ಡರ್ ಬದಲಾಗಬಹುದು. ನಿಕೋಲಸ್ ಪೂರನ್ ಮತ್ತು ರೊಮೊರಿಯಾ ಶೆಫರ್ಡ್ ಮಿಂಚಿದರೆ ಸನ್ ರೈಸರ್ಸ್ ನಿರಾಳ. ಏಡಿಯನ್ ಮಾರ್ಕ್ ರಾಂ ವಿದೇಶಿ ಕೋಟಾದ 4ನೇ ಆಟಗಾರ.
ವಾಷಿಂಗ್ಟನ್ ಸುಂದರ್ ಆಲ್ರೌಂಡರ್ ಆಟ ಫಲಿತಾಂಶ ನಿರ್ಣಾಯಕ. ಭುವನೇಶ್ವರ್ ಕುಮಾರ್ ಮತ್ತು ಉಮ್ರನ್ ಮಲಿಕ್ ಹೊಸ ಚೆಂಡು ಹಂಚಿಕೊಂಡರೆ, ಟಿ ನಟರಾಜನ್ ಡೆತ್ ಓವರ್ ಸ್ಪೆಷಲಿಸ್ಟ್. ಇನ್ನೊಂದು ಸ್ಥಾನಕ್ಕಾಗಿ ಕಾರ್ತಿಕ್ ತ್ಯಾಗಿ ಮತ್ತು ಕರ್ನಾಟಕದ ಶ್ರೇಯಸ್ ಗೋಪಾಲ್ ನಡುವೆ ಫೈಟ್ ಇದೆ. ಬ್ಯಾಟಿಂಗ್ ಬಲದ ಲೆಕ್ಕದಲ್ಲಿ ಶ್ರೇಯಸ್ ಸ್ಥಾನ ಪಡೆದರೆ, ಲೆಗ್ ಸ್ಪಿನ್ನರ್ ಕೊರತೆ ನಿಭಾಯಿಸುತ್ತಾರೆ.
ಲಖನೌ ಲೆಕ್ಕ:
ಲಖನೌ ಒಂದು ಪಂದ್ಯ ಗೆದ್ದಿದ್ದರೂ ನಿರಾಳವಾಗಿಲ್ಲ. ಮೊದಲ ಪಂದ್ಯವನ್ನು ಕೊನೆಯ ಓವರ್ನಲ್ಲಿ ಸೋತರೆ, 2ನೇ ಪಂದ್ಯವನ್ನು ಕೊನೆಯ ಓವರ್ನಲ್ಲಿ ಗೆದ್ದಿತ್ತು. ಲಖನೌದ ಬ್ಯಾಟಿಂಗ್ ಲೈನ್ ಅಪ್ ಚೆನ್ನಾಗಿದೆ. ನಾಯಕ ಕೆ.ಎಲ್. ರಾಹುಲ್, ಕ್ವಿಂಟಾನ್ ಡಿ ಕಾಕ್ ಮತ್ತು ಎವಿಲ್ ಲೆವಿಸ್ ತಾಕತ್ತು ಗೊತ್ತಿದೆ. ಮನೀಷ್ ಪಾಂಡರ ಫಾರ್ಮ್ಗೆ ಬಂದರೆ ಲೆಕ್ಕಾಚಾರದಂತೆ ಆಡಬಹುದು. ದೀಪಕ್ ಹೂಡ ಮತ್ತು ಬೇಬಿ ಎಬಿಡಿ ಖ್ಯಾತಿ ಆಯುಷ್ ಬಡೋನಿ ಈಗಾಗಲೇ ಪಂದ್ಯ ಗೆಲ್ಲಿಸಿಕೊಟ್ಟಿದ್ದಾರೆ. ಕೃನಾಲ್ ಪಾಂಡ್ಯ ಆಲ್ರೌಂಡರ್ ಜಾಗ ಭರ್ತಿ ಮಾಡಿದ್ದಾರೆ.
ದುಷ್ಮಂತ್ ಚಾಮಿರಾ ಬದಲು ಜೇಸನ್ ಹೋಲ್ಡರ್ ಜಾಗ ಭರ್ತಿ ಮಾಡಬಹುದು. ಆವೇಶ್ ಖಾನ್, ಆ್ಯಂಡ್ರ್ಯೂ ಟೈ ಫಾಸ್ಟ್ ಬೌಲಿಂಗ್ ಸ್ಪೆಷಲಿಸ್ಟ್ಗಳಾಗದರೆ, ರವಿ ಬಿಷ್ಣೋಯಿ ವಿಕೆಟ್ ಟೇಕಿಂಗ್ ಸ್ಪಿನ್ ಸ್ಪೆಷಲಿಸ್ಟ್.
ಪಿಚ್ ಕಂಡೀಷನ್:
ಡಿ.ವೈ. ಪಾಟೀಲ್ ಕ್ರೀಡಾಂಗಣ ಉಳಿದ ಮೂರು ಮೈದಾನಗಳಿಗಿಂತ ಕೊಂಚ ದೊಡ್ಡದಿದೆ. ಆದರೆ ಕಂಡೀಷನ್ ಬ್ಯಾಟಿಂಗ್ಗೆ ನೆರವು ನೀಡುತ್ತಿದೆ. ಅಷ್ಟೇ ಅಲ್ಲ ಮಂಜು ಫಲಿತಾಂಶದ ಮೇಲೆ ಪ್ರಭಾವ ಬೀರುತ್ತಿದೆ. ಹೀಗಾಗಿ ಟಾಸ್ ಗೆದ್ದವರು ಮೊದಲು ಫೀಲ್ಡಿಂಗ್ ಆರಿಸಿಕೊಳ್ಳುವುದು ಖಚಿತ.