ಐಪಿಎಲ್ 2022 ಟೂರ್ನಿಗೆ ಒಮಿಕ್ರಾನ್ ಭೀತಿ…?
15ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಬಿಸಿಸಿಐ ಪ್ಲಾನ್ ಮಾಡಿಕೊಳ್ಳುತ್ತಿದೆ. ಈಗಾಗಲೇ ಹೆಚ್ಚುವರಿ ಎರಡು ತಂಡಗಳನ್ನು ಸೇರಿಸಿಕೊಂಡಿರುವ ಬಿಸಿಸಿಐ ಇದೀಗ ಐಪಿಎಲ್ ಹರಾಜಿಗೂ ಮುಹೂರ್ತ ಫಿಕ್ಸ್ ಮಾಡಿಕೊಂಡಿದೆ.
ಈ ನಡುವೆ, ಬಿಸಿಸಿಐಗೆ ದೊಡ್ಡ ಚಿಂತೆಯನ್ನುಂಟು ಮಾಡಿರೋದು ಒಮಿಕ್ರಾನ್ ಸೋಂಕು. ಕೋವಿಡ್ 19 ಸೋಂಕಿನ ರೂಪಾಂತರಿ ಸೋಂಕು ಒಮಿಕ್ರಾನ್ ಅಟ್ಟ ಹಾಸ ಶುರುವಾಗಿಬಿಟ್ಟಿದೆ. ಈಗಾಗಲೇ ಫೆಬ್ರವರಿಯಲ್ಲಿ ಮೂರನೇ ಆಲೆ ಬರುತ್ತೆ ಅನ್ನೋ ಮಾತುಗಳು ಕೇಳಿಬರುತ್ತಿವೆ. ಅಲ್ಲದೆ ಒಮಿಕ್ರಾನ್ ಸೋಂಕಿನ ಸಂಖ್ಯೆ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಈ ನಡುವೆ ಬಿಸಿಸಿಐ ಪರ್ಯಾಯವಾಗಿ ಪ್ಲಾನ್ ಮಾಡಿಕೊಳ್ಳುತ್ತಿದೆ. ಯಾಕಂದ್ರೆ ಕಳೆದ ಬಾರಿ ಭಾರತದಲ್ಲಿ ಐಪಿಎಲ್ ಟೂರ್ನಿಯನ್ನು ಆಯೋಜನೆ ಮಾಡಿ, ಕೋವಿಡ್ ಸೋಂಕು ಹೆಚ್ಚಾದ ಕಾರಣ ಮತ್ತೆ ಯುಎಇಗೆ ಶಿಫ್ಟ್ ಮಾಡಲಾಗಿತ್ತು.
ಈ ಹಿನ್ನಲೆಯಲ್ಲಿ 2022ರ ಐಪಿಎಲ್ ಟೂರ್ನಿಗೆ ಬಿಸಿಸಿಐ ಈಗಿನಿಂದಲೇ ಪ್ಲಾನ್ ಮಾಡಿಕೊಳ್ಳುತ್ತಿದೆ. ಈ ಬಗ್ಗೆ ಮುಂದಿನ ತಿಂಗಳು ಐಪಿಎಲ್ ಫ್ರಾಂಚೈಸಿ ಮಾಲೀಕರ ಜೊತೆ ಚರ್ಚೆ ಕೂಡ ನಡೆಸಲಾಗುತ್ತದೆ. 15ನೇ ಆವೃತ್ತಿಯ ಟೂರ್ನಿಯನ್ನು ಭಾರತದಲ್ಲೇ ಆಯೋಜಿಸಬೇಕೋ ಅಥವಾ ಯುಎಇಗೆ ಶಿಫ್ಟ್ ಮಾಡಬೇಕು ಎಂಬುದನ್ನು ಫೆಬ್ರವರಿ ಅಂತ್ಯದೊಳಗೆ ತೀರ್ಮಾನ ಮಾಡಲೇಬೇಕಾಗುತ್ತದೆ.
ಈಗಿನ ವೇಳಾಪಟ್ಟಿಯ ಪ್ರಕಾರ ಏಪ್ರಿಲ್ ಮತ್ತು ಮೇ ನಲ್ಲಿ ನಡೆಸಲು ಬಿಸಿಸಿಐ ಯೋಜನೆ ಹಾಕಿ ಕೊಂಡಿತ್ತು. ಏಪ್ರಿಲ್ 2ರಿಂದ ಚೆನ್ನೈ ನಲ್ಲಿ ಮೊದಲ ಪಂದ್ಯ ನಡೆಸಲು ಬಿಸಿಸಿಐ ಪ್ಲಾನ್ ಮಾಡಿಕೊಂಡಿದೆ.
ಆದರೆ 2022ರ ಐಪಿಎಲ್ ಟೂರ್ನಿಗೆ ಒಮಿಕ್ರಾನ್ ಆಂತಕ ಎದುರಾಗಿದೆ. ಹೀಗಾಗಿ ಮತ್ತೆ ಐಪಿಎಲ್ ಯುಎಇಗೆ ಶಿಫ್ಟ್ ಆದ್ರೂ ಅಚ್ಚರಿ ಪಡಬೇಕಾಗಿಲ್ಲ.
ಅಂದ ಹಾಗೇ ಮುಂದಿನ ಬಾರಿ ಐಪಿಎಲ್ ನಲ್ಲಿ ಒಟ್ಟು ಹತ್ತು ತಂಡಗಳು ಸ್ಪರ್ಧೆ ಮಾಡಲಿವೆ. ಆರ್ ಸಿಬಿ, ಎಸ್ ಆರ್ ಎಚ್, ಚೆನ್ನೈ ಸೂಪರ್ ಕಿಂಗ್ಸ್, ರಾಜಸ್ತಾನ ರಾಯಲ್ಸ್, ಮುಂಬೈ ಇಂಡಿಯನ್ಸ್, ಕೆಕೆಆರ್, ಡೆಲ್ಲಿ ಕ್ಯಾಪಿಟಲ್ಸ್, ಪಂಜಾಬ್ ಕಿಂಗ್ಸ್ ಜೊತೆ ಲಕ್ನೋ ಮತ್ತು ಅಹಮದಾಬಾದ್ ತಂಡಗಳು ಸೇರಿಕೊಂಡಿವೆ.