ಆಸ್ಟ್ರೇಲಿಯನ್ ಓಪನ್ 2022 – ಆಂಡಿ ಮುರ್ರೆಗೆ ವೈಲ್ಡ್ ಕಾರ್ಡ್ ಎಂಟ್ರಿ
ಬ್ರಿಟನ್ ನ ಆಂಡಿ ಮುರ್ರೆ ಅವರು 2022ರ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಆಡಲಿದ್ದಾರೆ. ಐದು ಬಾರಿ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ರನ್ನರ್ ಆಪ್ ಆಗಿರುವ ಆಂಡಿ ಮುರ್ರೆ ಅವರಿಗೆ ವೈಲ್ಟ್ ಕಾರ್ಡ್ ಮೂಲಕ ಆಡುವ ಅವಕಾಶವನ್ನು ನೀಡಲಾಗಿದೆ. ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಸಂಘಟಕರ ಆಹ್ವಾನವನ್ನು ಮುರ್ರೆ ಅವರು ಸ್ವೀಕರಿಸಿದ್ದಾರೆ.
2019ರಲ್ಲಿ ಆಂಡಿ ಮುರ್ರೆ ಅವರು ಮೆಲ್ಬರ್ನ್ ಪಾರ್ಕ್ ನಲ್ಲಿ ಆಡಿದ್ದರು. ಬಳಿಕ ಎರಡು ಅವಧಿಯಲ್ಲಿ ಆಡಿಲ್ಲ. ಕಳೆದ ಬಾರಿಯೂ ವೈಲ್ಡ್ ಕಾರ್ಡ್ ಮೂಲಕ ಅವಕಾಶ ಸಿಕ್ಕಿದ್ರೂ ಕೋವಿಡ್ ಸೋಂಕಿನಿಂದ ಟೂರ್ನಿಯನ್ನು ಮಿಸ್ ಮಾಡಿಕೊಂಡಿದ್ದರು.
ಆಂಡಿ ಮುರ್ರೆ ಅವರು ಹೋರಾಟಗಾರ. ಟೆನಿಸ್ ಆಟದ ಮೇಲೆ ಆಗಾಧವಾದ ಪ್ರೀತಿಯನ್ನು ಇಟ್ಟುಕೊಂಡಿದ್ದಾರೆ. ಜನವರಿಯಲ್ಲಿ ನಡೆಯಲಿರುವ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಗೆ ಅವರನ್ನು ಆತ್ಮೀಯವಾಗಿ ಸ್ವಾಗತಿಸುತ್ತೇನೆ ಎಂದು ಟೂರ್ನಿಯ ನಿರ್ದೇಶಕ ಕ್ರೆಗ್ ಟಿಲೈ ಟ್ವಿಟ್ ಮಾಡಿದ್ದಾರೆ.
ಅಂದ ಹಾಗೇ ಆಂಡಿ ಮುರ್ರೆ ಅವರು ಮೂರು ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ. ರೋಜರ್ ಫೇಡರರ್, ನಡಾಲ್ ಮತ್ತು ಜಾಕೊವಿಕ್ ಅವರ ಆರ್ಭಟದ ಮುಂದೆ ಮುರ್ರೆ ಮಂಕಾಗಿದ್ರೂ ಟೆನಿಸ್ ಜಗತ್ತಿನಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ.
ಇನ್ನು ಟೂರ್ನಿಯ ಸಂಘಟಕರ ಆಹ್ವಾನವನ್ನು ಸ್ವೀಕರಿಸಿರುವ ಮುರ್ರೆ, ಮೆಲ್ಬರ್ನ್ ಪಾರ್ಕ್ ನಲ್ಲಿ ನನಗೆ ಅನೇಕ ಸ್ಮರಣೀಯ ಕ್ಷಣಗಳನ್ನು ನೀಡಿದೆ. ಕ್ರೆಗ್ ಟೈಲಿ ಅವರಿಗೆ ಕೃತಜ್ಞತೆಗಳು. ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಆಡುವುದನ್ನು ನಾನು ಎದುರು ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ.
ಒಮಿಕ್ರಾನ್ ಆತಂಕದ ನಡುವೆಯೂ ಜನವರಿ 17ರಿಂದ ಆಸ್ಟ್ರೇಲಿಯನ್ ಓಪನ್ ಟೂರ್ನಿ ನಡೆಯಲಿದೆ. ಆದ್ರೆ ರೋಜರ್ ಫೆಡರರ್, ನಡಾಲ್, ಜಾಕೊವಿಕ್ ಟೂರ್ನಿಯಲ್ಲಿ ಆಡೋದು ಅನುಮಾನವಾಗಿದೆ.