ಕ್ರಿಕೆಟ್ ಜಗತ್ತಿನ ದಾಖಲೆಗಳ ಸರದಾರ, ಟೀಂ ಇಂಡಿಯಾದ ಸರ್ವಶ್ರೇಷ್ಠ ಕ್ರಿಕೆಟರ್ ಎನಿಸಿರುವ ಮಹೇಂದ್ರ ಸಿಂಗ್ ಧೋನಿ, ಇದೀಗ ತಮ್ಮ ಸಾಧನೆಯ ಮುಕುಟಕ್ಕೆ ಮತ್ತೊಂದು ಗರಿ ಸೇರಿಸಿದ್ದಾರೆ.
ಶ್ರೇಷ್ಠ ಬ್ಯಾಟಿಂಗ್ ಮೂಲಕ ಕ್ರಿಕೆಟ್ ಜಗತ್ತಿನಲ್ಲಿ ಛಾಪು ಮೂಡಿಸಿರುವ ದಿಗ್ಗಜ ಕ್ರಿಕೆಟಿಗ, ಟಿ20 ಕ್ರಿಕೆಟ್ನಲ್ಲಿ 7000 ರನ್ಗಳನ್ನು ದಾಖಲಿಸಿದ ಮೊದಲ ಭಾರತೀಯ ವಿಕೆಟ್ ಕೀಪರ್ ಎಂಬ ಹಿರಿಮೆಗೆ ಭಾಜನರಾಗಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ನಾಯಕ ಧೋನಿ, ಮುಂಬೈನ ಬ್ರೆಬೌರ್ನ್ ಮೈದಾನದಲ್ಲಿ ಗುರುವಾರ ನಡೆದ ಐಪಿಎಲ್ 2022ರ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ. ಟಿ20 ಕ್ರಿಕೆಟ್ನಲ್ಲಿ 7 ಸಾವಿರ ರನ್ ಪೂರೈಸಲು ಎಂ.ಎಸ್. ಧೋನಿ ಅವರಿಗೆ 15 ರನ್ಗಳ ಅಗತ್ಯವಿತ್ತು. ಲಕ್ನೋ ವಿರುದ್ಧ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಧೋನಿ, 6 ಬಾಲ್ಗಳಲ್ಲಿ 16* ರನ್ ಸಿಡಿಸುವ ಮೂಲಕ ಟಿ20 ಕ್ರಿಕೆಟ್ನಲ್ಲಿ 7000 ರನ್ಗಳ ಗಡಿದಾಟಿದರು.
ಈ ಸಾಧನೆಯೊಂದಿಗೆ ಟಿ20 ಕ್ರಿಕೆಟ್ನಲ್ಲಿ 7000 ರನ್ಗಳನ್ನು ಪೂರೈಸಿದ ಭಾರತದ 6ನೇ ಆಟಗಾರ ಎಂಬ ಹಿರಿಮೆಗೆ ಧೋನಿ ಭಾಜನರಾದರು. ಧೋನಿ ಅವರಿಗೂ ಮುನ್ನ ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ, ಹಾಲಿ ಕ್ಯಾಪ್ಟನ್ ರೋಹಿತ್ ಶರ್ಮ, ಸುರೇಶ್ ರೈನಾ, ಶಿಖರ್ ಧವನ್ ಹಾಗೂ ಸಿಎಸ್ಕೆ ತಂಡದ ಸಹ ಆಟಗಾರ ರಾಬಿನ್ ಉತ್ತಪ್ಪ ಅವರುಗಳು ಈಗಾಗಲೇ ಚುಟುಕು ಕ್ರಿಕೆಟ್ನಲ್ಲಿ 7000 ರನ್ಗಳ ಗಡಿದಾಟಿದ್ದಾರೆ.
ಪ್ರಸಕ್ತ ಐಪಿಎಲ್ನಲ್ಲಿ ನಾಯಕತ್ವದ ಜವಾಬ್ದಾರಿಯಿಂದ ಕೆಳಗಿಳಿದಿರುವ ಎಂ.ಎಸ್. ಧೋನಿ, ತಮ್ಮ ಹಳೆಯ ಬ್ಯಾಟಿಂಗ್ ಖದರ್ ತೋರುತ್ತಿದ್ದಾರೆ. ಕೆಕೆಆರ್ ವಿರುದ್ಧ ನಡೆದ 15ನೇ ಆವೃತ್ತಿಯ ಐಪಿಎಲ್ನ ಉದ್ಘಾಟನಾ ಪಂದ್ಯದಲ್ಲಿ ಅಬ್ಬರಿಸಿದ್ದ ಧೋನಿ, 38 ಬಾಲ್ಗಳಲ್ಲಿ ಅಜೇಯ 50 ರನ್ಗಳಿಸಿ ಮಿಂಚಿದ್ದರು. ಧೋನಿ ಅವರ ಈ ಇನ್ನಿಂಗ್ಸ್ನಲ್ಲಿ 7 ಬೌಂಡರಿ ಮತ್ತು ಒಂದು ಸಿಕ್ಸರ್ ಒಳಗೊಂಡಿತ್ತು.
ಟಿ20ಯಲ್ಲಿ ಹೆಚ್ಚು ರನ್ಗಳಿಸಿದ ಭಾರತೀಯ ಆಟಗಾರರು:
ವಿರಾಟ್ ಕೊಹ್ಲಿ – 10,326 ರನ್ಗಳು
ರೋಹಿತ್ ಶರ್ಮ – 9,936 ರನ್ಗಳು
ಸುರೇಶ್ ರೈನಾ – 8,654 ರನ್ಗಳು
ಶಿಖರ್ ಧವನ್ – 8,818 ರನ್ಗಳು
ರಾಬಿನ್ ಉತ್ತಪ್ಪ – 7,120 ರನ್ಗಳು
ಎಂ.ಎಸ್. ಧೋನಿ – 7,001 ರನ್ಗಳು