2022ರ ಐಪಿಎಲ್ನಲ್ಲಿ ಭರ್ಜರಿ ಆರಂಭ ಕಂಡಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಇದೀಗ ದೊಡ್ಡ ಆಘಾತ ಎದುರಾಗಿದೆ. ಮೊದಲ ಪಂದ್ಯದಲ್ಲಿ ಬಲಿಷ್ಠ ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದು ಶುಭಾರಂಭ ಮಾಡಿರುವ ಡೆಲ್ಲಿ ಪಡೆಗೆ, ಇದೀಗ ವಿದೇಶಿ ಆಟಗಾರರ ಅನುಪಸ್ಥಿತಿಯ ಆತಂಕ ಶುರುವಾಗಿದೆ.
ಐಪಿಎಲ್ನಲ್ಲಿ ಎಲ್ಲಾ ತಂಡಗಳು ದೇಶಿ ಹಾಗೂ ವಿದೇಶಿ ಆಟಗಾರರ ಬಲದೊಂದಿಗೆ ಕಣಕ್ಕಿಳಿಯಲಿವೆ. ಆದರೆ ಆರಂಭಿಕ ಪಂದ್ಯದಲ್ಲೇ ವಿದೇಶಿ ಆಟಗಾರರ ಕೊರತೆ ಎದುರಿಸುತ್ತಿರುವ ಡೆಲ್ಲಿ, ಮುಂಬೈ ಇಂಡಿಯನ್ಸ್ ವಿರುದ್ಧ ಕೇವಲ ಇಬ್ಬರು ವಿದೇಶಿ ಆಟಗಾರರೊಂದಿಗೆ ಕಣಕ್ಕಿಳಿದಿತ್ತು. ಕಿವೀಸ್ನ ಟಿಮ್ ಸೈಫರ್ಟ್ ಹಾಗೂ ವೆಸ್ಟ್ ಇಂಡೀಸ್ನ ರೊವ್ಮನ್ ಪೊವೆಲ್ ಡೆಲ್ಲಿ ಪ್ಲೇಯಿಂಗ್ ಇಲೆವೆನ್ನಲ್ಲಿ ಕಾಣಿಸಿಕೊಂಡಿದ್ದರು.
ಪ್ರಸಕ್ತ ಐಪಿಎಲ್ಗೆ ಬಲಿಷ್ಠ ತಂಡವನ್ನೇ ಕಟ್ಟಿಕೊಂಡಿರುವ ಡೆಲ್ಲಿ ಕ್ಯಾಪಿಟಲ್ಸ್, ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಮುಸ್ತಫಿಜು಼ರ್ ರೆಹಮಾನ್, ಲುಂಗಿ ಎನ್ಗಿಡಿ ಅವರುಗಳು ತಮ್ಮ ರಾಷ್ಟ್ರೀಯ ತಂಡಗಳಲ್ಲಿ ಆಡುತ್ತಿರುವ ಕಾರಣಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನ ಸೇರಿಕೊಂಡಿಲ್ಲ. ಇನ್ನೊಂದೆಡೆ ಡೆಲ್ಲಿ ಪಡೆಯ ಸ್ಟಾರ್ ಬೌಲರ್ ಅನ್ರಿಕ್ ನೊರ್ಟೆಜೆ ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇವೆಲ್ಲದರ ನಡುವೆ ಇದೀಗ ಆಸೀಸ್ ಆಟಗಾರ ಮಿಚೆಲ್ ಮಾರ್ಷ್ ಸಹ ಗಾಯದ ಸಮಸ್ಯೆಗೆ ತುತ್ತಾಗಿದ್ದು, ಐಪಿಎಲ್ ಟೂರ್ನಿಯಿಂದ ಹೊರಗುಳಿಯುವ ಸಾಧ್ಯತೆ ಎದುರಾಗಿದೆ.
ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ವಿದೇಶಿ ಆಟಗಾರರ ಕೊರತೆಯ ಆತಂಕ ಕಾಡುತ್ತಿದೆ. ಒಂದೆಡೆ ವಿದೇಶಿ ಆಟಗಾರರು ತಂಡವನ್ನು ಕೂಡಿಕೊಳ್ಳುವುದನ್ನು ಎದುರು ನೋಡುತ್ತಿರುವ ಡೆಲ್ಲಿ ಮತ್ತೊಂದೆಡೆ ಗಾಯದ ಸಮಸ್ಯೆಗೆ ಸಿಲುಕಿರುವ ವಿದೇಶಿ ಆಟಗಾರರ ಸ್ಥಾನಕ್ಕೆ ಬದಲಿ ಆಟಗಾರರನ್ನಾಗಿ ಯಾರನ್ನು ತಂಡಕ್ಕೆ ಸೇರಿಸಿಕೊಳ್ಳಬೇಕೆಂಬ ಹುಡುಕಾಟದಲ್ಲಿದೆ. ಇದಕ್ಕಾಗಿ ಐಪಿಎಲ್ ಮೆಗಾ ಹರಾಜಿನಲ್ಲಿ ಯಾವುದೇ ತಂಡಕ್ಕೂ ಮಾರಾಟವಾದ ಅನ್ ಸೋಲ್ಡ್ ಆಟಗಾರರಲ್ಲಿ ಯಾರು ಬೆಸ್ಟ್ ಎಂಬ ಕುರಿತು ಡೆಲ್ಲಿ ಲೆಕ್ಕಾಚಾರ ಹಾಕುತ್ತಿದೆ.
ಮೊಸಿಸ್ ಹೆನ್ರಿಕ್ಸ್:
ಗಾಯಾಳು ಮಿಚೆಲ್ ಮಾರ್ಷ್ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ನೆರವಾಗುತ್ತಿದ್ದರು. ಆದರೆ ಅನ್ ಸೋಲ್ಡ್ ಆಟಗಾರರಲ್ಲಿ ಮಿಚೆಲ್ ಮಾರ್ಷ್ ಸ್ಥಾನವನ್ನು ತುಂಬಬಲ್ಲ ಸೂಕ್ತ ಆಟಗಾರನಾಗಿ ಆಸೀಸ್ನ ಮತ್ತೋರ್ವ ಆಟಗಾರ ಮೊಸಿಸ್ ಹೆನ್ರಿಕ್ಸ್ ಉತ್ತಮ ಆಯ್ಕೆಯಾಗಿದ್ದಾರೆ. ಬಿಗ್ ಬ್ಯಾಶ್ನಲ್ಲಿ ಆಡಿರುವ ಅನುಭವ ಹೊಂದಿರುವ ಹೆನ್ಸಿಕ್ಸ್, ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಡೆಲ್ಲಿ ತಂಡಕ್ಕೆ ನೆರವಾಗಲಿದ್ದಾರೆ.
ದಾಸುನ್ ಶನಕ:
ಮಿಚೆಲ್ ಮಾರ್ಷ್ ಸ್ಥಾನವನ್ನು ತುಂಬಬಲ್ಲ ಮತ್ತೋರ್ವ ಆಟಗಾರನಾಗಿ ಶ್ರೀಲಂಕಾದ ದಾಸುನ್ ಶನಕ ಕಾಣಿಸಿಕೊಂಡಿದ್ದಾರೆ. 2021ರಿಂದ ಟಿ20 ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಶನಕ, ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲೂ ಉತ್ತಮ ಪ್ರದರ್ಶನ ನೀಡಿದ್ದರು. ಬ್ಯಾಟಿಂಗ್ ಜೊತೆಗೆ ಬೌಲಿಂಗ್ ನಲ್ಲೂ ತಂಡಕ್ಕೆ ನೆರವಾಗಬಲ್ಲ ಸಾಮರ್ಥ್ಯ ದಾಸುನ್ ಶನಕ ಅವರಿಗಿದೆ.
ಡೇವಿಡ್ ವೈಸ್:
ಸೌತ್ ಆಫ್ರಿಕಾ ತಂಡದ ಡೇವಿಡ್ ವೈಸ್ ಸಹ ಮಿಚೆಲ್ ಮಾರ್ಷ್ ಸ್ಥಾನವನ್ನು ತುಂಬುವ ಆಟಗಾರನಾಗಿದ್ದಾರೆ. ಟಿ20 ಫಿನಿಷರ್ ಆಗಿ ಕಾಣಿಸಿಕೊಂಡಿರುವ ವೈಸ್, ಅಗ್ರ ಕ್ರಮಾಂಕದಲ್ಲಿ ಡೆಲ್ಲಿ ತಂಡದ ಬ್ಯಾಟಿಂಗ್ ವಿಭಾಗಕ್ಕೆ ನೆರವಾಗುವುದು ಕಷ್ಟವಾಗಲಿದೆ.
ಬೆನ್ ಕಟ್ಟಿಂಗ್:
ಟಿ20 ಕ್ರಿಕೆಟ್ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಾ ಬಂದಿರುವ ಬೆನ್ ಕಟ್ಟಿಂಗ್ ಸಹ ಮಿಚೆಲ್ ಮಾರ್ಷ್ ಸ್ಥಾನವನ್ನು ತುಂಬುವ ಆಟಗಾರನಾಗಿದ್ದಾರೆ. ಬ್ಯಾಟಿಂಗ್ನಲ್ಲಿ ಯಾವುದೇ ಕ್ರಮಾಂಕದಲ್ಲೂ ಆಡಬಲ್ಲ ಸಾಮರ್ಥ್ಯ ಹೊಂದಿರುವ ಬೆನ್ ಕಟ್ಟಿಂಗ್ ಅವರನ್ನ 6ನೇ ಬೌಲರ್ ಆಗಿಯೂ ಬಳಸಿಕೊಳ್ಳಬಹುದಾಗಿದೆ.
ತಿಸಾರ ಪೆರೇರಾ:
ಶ್ರೀಲಂಕಾ ತಂಡದ ಅನುಭವಿ ಆಟಗಾರ ತಿಸಾರ ಪೇರೆರಾ ಕೂಡ ಮಿಚೆಲ್ ಮಾರ್ಷ್ ಸ್ಥಾನಕ್ಕೆ ಉತ್ತಮ ಆಯ್ಕೆಯಾಗಿದ್ದಾರೆ. ಟಿ20 ಕ್ರಿಕೆಟ್ನಲ್ಲಿ ಸಾಕಷ್ಟು ಪಂದ್ಯಗಳನ್ನು ಆಡಿರುವ ಅನುಭವ ಹೊಂದಿರುವ ಪೆರೇರಾ, ಕೆಳ ಕ್ರಮಾಂಕದ ಬ್ಯಾಟಿಂಗ್ ಬಲ ತುಂಬಲಿದ್ದಾರೆ. ಬೌಲಿಂಗ್ನಲ್ಲಿ ತಂಡಕ್ಕೆ ಹೆಚ್ಚಾಗಿ ನೆರವಾಗುವ ಸಾಧ್ಯತೆ ಇಲ್ಲದಿದ್ದರು, ಇವರ ಅನುಭವ ಡೆಲ್ಲಿ ತಂಡಕ್ಕೆ ನೆರವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.