ಕ್ರಿಕೆಟ್ ಅಭಿಮಾನಿಗಳಿಗೆ ಭರ್ಜರಿ ರಸದೌತಣ ನೀಡುತ್ತಿರುವ 15ನೇ ಆವೃತ್ತಿಯ ಐಪಿಎಲ್ ಟೂರ್ನಿ ಅದ್ಭುತ ಆರಂಭ ಕಂಡಿದೆ. ಬ್ಯಾಟ್ಸಮನ್ಗಳು ಹಾಗೂ ಬೌಲರ್ಗಳ ಪೈಪೋಟಿಯ ಕಾಳಗಕ್ಕೆ ವೇದಿಕೆಯಾಗಿರುವ ಚುಟುಕು ಕ್ರಿಕೆಟ್ ಮಹಾಸಮರದಲ್ಲಿ ಯುವ ಆಟಗಾರ ಆಯುಷ್ ಬಡೋನಿ, ತಮ್ಮ ಟ್ಯಾಲೆಂಟ್ನಿಂದ ಗಮನ ಸೆಳೆದಿದ್ದಾರೆ.
ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೊದಲ ಪಂದ್ಯದಲ್ಲೇ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ಬಡೋನಿ, ಇಂಡಿಯನ್ ಪ್ರೀಮಿಯರ್ ಲೀಗ್ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಗುಜರಾತ್ ಟೈಟನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ 5ನೇ ಓವರ್ನಲ್ಲೇ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಯುವ ಬ್ಯಾಟ್ಸ್ಮನ್, ತಮಗೆ ದೊರೆತ ಅವಕಾಶವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡಿದ್ದಾರೆ.
ಚೊಚ್ಚಲ ಐಪಿಎಲ್ ಪಂದ್ಯವಾಡಿದ 22 ವರ್ಷದ ಆಯುಷ್ ಬಡೋನಿ, ಟಿ20 ಕ್ರಿಕೆಟ್ನಲ್ಲಿ ಹೆಚ್ಚಿನ ಅನುಭವ ಇಲ್ಲದಿದ್ದರೂ, ವಿಶ್ವ ಕ್ರಿಕೆಟ್ನ ಸರ್ವಶ್ರೇಷ್ಠ ಬೌಲರ್ಗಳಾದ ಮೊಹಮ್ಮದ್ ಶಮಿ, ಲೂಕ್ಕಿ ಫೆರ್ಗುಸನ್, ರಶೀದ್ ಖಾನ್ ಹಾಗೂ ಹಾರ್ದಿಕ್ ಪಾಂಡ್ಯ ಬೌಲಿಂಗ್ ದಾಳಿಯನ್ನ ಸಮರ್ಥವಾಗಿ ಎದುರಿಸಿದರು. ಯಾವುದೇ ಆತಂಕವಿಲ್ಲದೆ ಬ್ಯಾಟಿಂಗ್ ಮಾಡಿದ ಬಡೋನಿ, ಕೇವಲ 41 ಬಾಲ್ಗಳಲ್ಲಿ54 ರನ್ಗಳಿಸಿ ಮೊದಲ ಐಪಿಎಲ್ ಪಂದ್ಯದಲ್ಲೇ ಅರ್ಧಶತಕ ಬಾರಿಸಿ ಮಿಂಚಿದರು.
“ಬೇಬಿ ಎಬಿ” ಎಂದ ನಾಯಕ
ತಮ್ಮ ಅದ್ಭುತ ಬ್ಯಾಟಿಂಗ್ನಿಂದ ಗಮನ ಸೆಳೆದ ಆಯುಷ್ ಬಡೋನಿ ಆಟವನ್ನ ಲಕ್ನೋ ತಂಡದ ನಾಯಕ ಕೆ.ಎಲ್. ರಾಹುಲ್ ಫುಲ್ ಮಾರ್ಕ್ಸ್ ನೀಡಿದ್ದಾರೆ. ಪಂದ್ಯದ ಬಳಿಕ ಮಾತನಾಡಿದ ರಾಹುಲ್, ಯುವ ಆಟಗಾರನ ಬ್ಯಾಟಿಂಗ್ ಟ್ಯಾಲೆಂಟ್ ಕೊಂಡಾಡಿದ್ದು, ಆಯುಷ್ ಬಡೋನಿ ನಮ್ಮ ಟೀಮ್ನ “ಬೇಬಿ ಎಬಿ” ಎಂದು ಬಣ್ಣಿಸಿದ್ದಾರೆ. ಈತ 360 ಡಿಗ್ರಿ ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದು, ಆತನ ಪ್ರದರ್ಶನದ ಬಗ್ಗೆ ನನಗೆ ಮೆಚ್ಚುಗೆ ಇದ್ದು, ನೆಟ್ಸ್ ಅಭ್ಯಾಸದ ಸಂದರ್ಭದಲ್ಲೇ ಆತ ಗಮನ ಸೆಳೆದಿದ್ದ ಎಂದಿದ್ದಾರೆ.
ಬಡೋನಿ ದೇಶಿ ಕ್ರಿಕೆಟ್ ಟ್ಯಾಲೆಂಟ್
ಐಪಿಎಲ್ನ ತನ್ನ ಮೊದಲ ಪಂದ್ಯದಲ್ಲೇ ಮಿಂಚಿರುವ ಆಯುಷ್ ಬಡೋನಿ, ದೇಶಿ ಕ್ರಿಕೆಟ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. 2018ರಲ್ಲಿ ಅಂಡರ್-19 ವಿಶ್ವಕಪ್ ಆಡುವ ಅವಕಾಶ ಕಳೆದುಕೊಂಡಿದ್ದ ಬಡೋನಿ, ಅಂಡರ್-23 ಟೂರ್ನಿಯಲ್ಲಿ ದೆಹಲಿ ಪರ ಅತ್ಯಧಿಕ ರನ್ಗಳಿಸಿದ ಆಟಗಾರ ಎನಿಸಿದ್ದರು. 2019-20ನೇ ಸಾಲಿನಲ್ಲಿ 55.57ರ ಸರಾಸರಿಯಲ್ಲಿ 389 ರನ್ಗಳಿಸಿ ಕಮಾಲ್ ಮಾಡಿದ್ದರು. ಈ ಯುವ ಆಟಗಾರನ ಟ್ಯಾಲೆಂಟ್ ಗುರುತಿಸಿದ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಗೌತಮ್ ಗಂಭೀರ್, 2022ರ ಐಪಿಎಲ್ ಮೆಗಾ ಹರಾಜಿನಲ್ಲಿ ಬೇಸ್ ಪ್ರೈಸ್ 20 ಲಕ್ಷ ರೂ. ಮೊತ್ತಕ್ಕೆ ಲಕ್ನೋ ತಂಡಕ್ಕೆ ಸೇರಿದರು.