ಆರಂಭಿಕ ಬ್ಯಾಟ್ಸಮನ್ ಇಶಾನ್ ಕಿಶನ್(81*) ಸ್ಪೋಟಕ ಬ್ಯಾಟಿಂಗ್ ಹಾಗೂ ನಾಯಕ ರೋಹಿತ್ ಶರ್ಮ(41) ಅವರ ಅದ್ಭುತ ಆಟದಿಂದ ಅಬ್ಬರಿಸಿದ ಮುಂಬೈ ಇಂಡಿಯನ್ಸ್ ಎದುರಾಳಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ 178 ರನ್ಗಳ ಕಠಿಣ ಗುರಿ ನೀಡಿದೆ.
ಇಲ್ಲಿನ ಬ್ರೆಬೋರ್ನ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 177 ರನ್ಗಳಿಸಿತು. ಡೆಲ್ಲಿ ಕ್ಯಾಪಿಟಲ್ಸ್ ಬೌಲಿಂಗ್ ದಾಳಿಯನ್ನು ಧೂಳಿಪಟ ಮಾಡುವ ಮೂಲಕ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಇಶಾನ್ ಕಿಶನ್ ಕೇವಲ 48 ಬಾಲ್ಗಳಲ್ಲಿ 81* (2 ಸಿಕ್ಸರ್, 11 ಬೌಂಡರಿ) ರನ್ಗಳಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು. ಉಳಿದಂತೆ ಮುಂಬೈ ಪರ ರೋಹಿತ್ ಶರ್ಮ(41) ಹಾಗೂ ತಿಲಕ್ ವರ್ಮ(22) ಉತ್ತಮ ಪ್ರದರ್ಶನ ನೀಡಿದರೆ. ಡೆಲ್ಲಿ ಪರ ಕುಲ್ದೀಪ್ ಯಾದವ್(3/18) ಯಶಸ್ವಿ ಬೌಲಿಂಗ್ ಪ್ರದರ್ಶಿಸಿದರು.
ಮುಂಬೈ ಉತ್ತಮ ಆರಂಭ:
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಮುಂಬೈಗೆ ನಾಯಕ ರೋಹಿತ್ ಹಾಗೂ ಇಶಾನ್ ಕಿಶನ್ ಅದ್ಭುತ ಆರಂಭ ಒದಗಿಸಿದರು. ಡೆಲ್ಲಿ ಕ್ಯಾಪಿಟಲ್ಸ್ ಬೌಲರ್ಗಳ ಮೇಲೆ ಪ್ರಾಬಲ್ಯ ಮೆರೆದ ಈ ಜೋಡಿ, ಮೊದಲ ವಿಕೆಟ್ಗೆ 67 ರನ್ಗಳಿಸಿ ಉತ್ತಮ ಅಡಿಪಾಯ ಹಾಕಿಕೊಟ್ಟರು. ಅನುಭವದ ಕೊರತೆ ಎದುರಿಸುತ್ತಿದ್ದ ಡೆಲ್ಲಿ ಬೌಲರ್ಗಳ ಮೇಲೆ ಸವಾರಿ ಮಾಡಿದ ಹಿಟ್ ಮ್ಯಾನ್ ರೋಹಿತ್ ಶರ್ಮ ಕೇವಲ 32 ಬಾಲ್ಗಳಲ್ಲಿ 2 ಸಿಕ್ಸರ್ ಮತ್ತು 4 ಬೌಂಡರಿ ನೆರವಿನಿಂದ 41 ರನ್ಗಳಿಸಿ ನಿರ್ಗಮಿಸಿದರು.
ಮುಂಬೈ ತಂಡದ ಬ್ಯಾಟಿಂಗ್ ಅಸ್ತ್ರವಾಗಿರುವ ಸೂರ್ಯಕುಮಾರ್ ಯಾದವ್ ಅನುಪಸ್ಥಿತಿಯಲ್ಲಿ ತಂಡದಲ್ಲಿ ಸ್ಥಾನ ಪಡೆದ ಅನ್ಮೋಲ್ ಸಿಂಗ್(8) ನಿರೀಕ್ಷಿತ ಆಟವಾಡುವಲ್ಲಿ ವಿಫಲವಾದರು. ಆದರೆ ಚೊಚ್ಚಲ ಐಪಿಎಲ್ ಪಂದ್ಯವಾಡಿದ ತಿಲಕ್ ವರ್ಮ 22(15) ಬಿರುಸಿನ ಬ್ಯಾಟಿಂಗ್ನಿಂದ ಉಪಯುಕ್ತ ಕಾಣಿಗೆ ನೀಡಿ ಹೊರ ನಡೆದರು. ಇವರ ಬೆನ್ನಲ್ಲೇ ಸ್ಟಾರ್ ಆಲ್ರೌಂಡರ್ ಕೈರನ್ ಪೊಲಾರ್ಡ್(3) ಕೂಡ ಬಂದಷ್ಟೇ ವೇಗವಾಗಿ ಪೆವಿಲಿಯನ್ಗೆ ಹಿಂದಿರುಗಿದರು. ಮಧ್ಯಮ ಕ್ರಮಾಂಕದಲ್ಲಿ ಬಂದ ಟಿಮ್ ಡೇವಿಡ್(12) 5ನೇ ವಿಕೆಟ್ಗೆ ಇಶಾನ್ ಕಿಶನ್ ಜೊತೆಗೂಡಿ ಮುರಿಯದ 37 ರನ್ಗಳ ಉತ್ತಮ ಜೊತೆಯಾಟವಾಡಿದರು. ಡೆನಿಯಲ್ ಸ್ಯಾಮ್ಸ್(7*) ರನ್ಗಳಿಸಿದರು.
ಕುಲ್ದೀಪ್ ಸ್ಪಿನ್ ಕಮಾಲ್
ಐಪಿಎಲ್ನಲ್ಲಿ ಹಲವು ಪಂದ್ಯಗಳ ಬಳಿಕ ಬೌಲಿಂಗ್ ಲಯ ಕಂಡುಕೊಂಡ ಕುಲ್ದೀಪ್ ಯಾದವ್ 4 ಓವರ್ಗಳಲ್ಲಿ 18 ರನ್ ನೀಡಿ 3 ವಿಕೆಟ್ ಪಡೆದು ಸ್ಪಿನ್ ಕಮಾಲ್ ಮಾಡಿದರು. ನಿರ್ಣಾಯಕ ಹಂತದಲ್ಲಿ ರೋಹಿತ್ ಶರ್ಮ, ಅನ್ಮೋಲ್ ಪ್ರೀತ್ ಹಾಗೂ ಕೈರನ್ ಪೊಲಾರ್ಡ್ ಅವರುಗಳ ವಿಕೆಟ್ ಪಡೆದ ಎಡಗೈ ಸ್ಪಿನ್ನರ್, ಡೆಲ್ಲಿ ತಂಡಕ್ಕೆ ಅಗತ್ಯ ಸಂದರ್ಭದಲ್ಲಿ ನೆರವಾದರು. ಉಳಿದಂತೆ ಎಡಗೈ ವೇಗಿ ಕಲೀಲ್ ಅಹ್ಮೆದ್ 2/27 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.