IPL 2022- Match No 64- ಡೆಲ್ಲಿ ಕ್ಯಾಪಿಟಲ್ಸ್ Vs ಪಂಜಾಬ್ ಕಿಂಗ್ಸ್ – ಅಂಕಿ ಅಂಶಗಳ ಬಲ ಯಾರಿಗೆ ಜಾಸ್ತಿ..?

15ನೇ ಆವೃತ್ತಿಯ ಐಪಿಎಲ್ ಟೂರ್ನಿಯ 64ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಮುಂಬೈನ ಡಿ.ವೈ. ಪಾಟೀಲ್ ಅಂಗಣದಲ್ಲಿ ಕಾದಾಟ ನಡೆಸಲಿವೆ.
ಈ ಪಂದ್ಯದಲ್ಲಿ ಉಭಯ ತಂಡಗಳು ಗೆಲುವನ್ನೇ ಎದುರು ನೋಡುತ್ತಿವೆ. ಅಲ್ಲದೆ ಗೆಲುವು ಕೂಡ ಅನಿವಾರ್ಯವಾಗಿದೆ. ಫ್ಲೇ ಆಫ್ ಪ್ರವೇಶವನ್ನು ಅದೃಷ್ಟದ ಮೂಲಕ ಪಡೆಯಬೇಕಾದ್ರೆ ಈ ಪಂದ್ಯದಲ್ಲಿ ಗೆಲುವು ಸಾಧಿಸಲೇಬೇಕಿದೆ.
ಈಗಾಗಲೇ ಉಭಯ ತಂಡಗಳು ಬಹಳಷ್ಟು ಲೆಕ್ಕಚಾರಗಳನ್ನು ಹಾಕಿಕೊಂಡಿವೆ. ಇಲ್ಲಿ ಪಂದ್ಯ ಗೆದ್ರೆ ಮಾತ್ರ ಸಾಕಾಗುವುದಿಲ್ಲ. ಜೊತೆಗೆ ಉತ್ತಮ ರನ್ ಧಾರಣೆಯೂ ಬೇಕಾಗುತ್ತದೆ. ಹೀಗಾಗಿ ಬೃಹತ್ ಅಂತರದಿಂದ ಗೆಲ್ಲಲು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಮಾಸ್ಟರ್ ಪ್ಲಾನ್ ಕೂಡ ಮಾಡಿಕೊಂಡಿವೆ.
ಈ ಹಿಂದಿನ ಪಂದ್ಯದಲ್ಲಿ ಡೆಲ್ಲಿ ಮತ್ತು ಪಂಜಾಬ್ ಗೆಲುವನ್ನು ಸಾಧಿಸುತ್ತಿರುವುದರಿಂದ ಆತ್ಮವಿಶ್ವಾಸದಿಂದ ಬೀಗುತ್ತಿದೆ. ಆಟಗಾರರು ಈ ಹಿಂದಿನ ತಪ್ಪುಗಳನ್ನು ಸರಿಪಡಿಸಿಕೊಂಡು ಹೊಸ ಹುರಪಿನೊಂದಿಗೆ ಆಡಲಿದ್ದಾರೆ. ಮುಖ್ಯವಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಅಪಾಯಕಾರಿ ಆರಂಭಿಕ ಪೃಥ್ವಿ ಶಾ ಅವರ ಅಲಭ್ಯತೆ ಕಾಡಬಹುದು. ಹೀಗಾಗಿ ಇಂದಿನ ಪಂದ್ಯಕ್ಕೆ ಯಶ್ ಧೂಲ್ ಆರಂಭಿಕನಾಗಿ ಕಣಕ್ಕಿಳಿಯುವ ಸಾಧ್ಯತೆಗಳಿವೆ.
ಇನ್ನು ತಂಡಗಳ ಈ ಹಿಂದಿನ ಅಂಕಿ ಅಂಶಗಳ ದಾಖಲೆಗಳನ್ನು ನೋಡಿದಾಗ ಉಭಯ ತಂಡಗಳು ಆಲ್ ಮೋಸ್ಟ್ ಸಮಬಲದ ಹೋರಾಟವನ್ನೇ ನೀಡಿದೆ. ಓವರ್ ಆಲ್ ಮ್ಯಾಚ್ ನ ಅಂಕಿ ಅಂಶಗಳಲ್ಲಿ ಪಂಜಾಬ್ ಕಿಂಗ್ಸ್ ಮೇಲುಗೈ ಸಾಧಿಸಿದ್ರೆ, ಇತ್ತೀಚಿನ ಅಂಕಿ ಅಂಶಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಸಂಪೂರ್ಣವಾಗಿ ಮೇಲುಗೈ ಸಾಧಿಸಿದೆ.

ಇಲ್ಲಿಯವರೆಗೆ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಒಟ್ಟು 29 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ 15 ಪಂದ್ಯಗಳನ್ನು ಪಂಜಾಬ್ ಕಿಂಗ್ಸ್ ತಂಡ ಗೆದ್ದುಕೊಂಡಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡ 14 ಪಂದ್ಯಗಳಲ್ಲಿ ಜಯ ಸಾಧಿಸಿದೆ.
ಇನ್ನು ಕಳೆದ ಐದು ಪಂದ್ಯಗಳ ಅಂಕಿ ಅಂಶಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪ್ರಾಬಲ್ಯ ಸಾಧಿಸಿದೆ. ಐದು ಪಂದ್ಯಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನಾಲ್ಕು ಪಂದ್ಯಗಳನ್ನು ಗೆದ್ದುಕೊಂಡ್ರೆ, ಪಂಜಾಬ್ ಕಿಂಗ್ಸ್ ಕೇವಲ ಒಂದು ಪಂದ್ಯವನ್ನು ಮಾತ್ರ ಗೆದ್ದಿದೆ.
ಹಾಗೇ 2021ರ ಐಪಿಎಲ್ ನ ಎರಡೂ ಪಂದ್ಯಗಳನ್ನು ಕೂಡ ಡೆಲ್ಲಿ ಕ್ಯಾಪಿಟಲ್ಸ್ ಗೆದ್ದುಕೊಂಡಿದೆ. 2022ರ ಐಪಿಎಲ್ ಟೂರ್ನಿಯ ಮೊದಲ ಪಂದ್ಯವನ್ನು ಕೂಡ ಡೆಲ್ಲಿ ಕ್ಯಾಪಿಟಲ್ಸ್ ಗೆದ್ದಿದೆ. ಇದೀಗ ಈ ಆವೃತ್ತಿಯಯಲ್ಲಿ ಇತ್ತಂಡಗಳು ಎರಡನೇ ಬಾರಿ ಹೋರಾಟ ನಡೆಸುತ್ತಿವೆ. IPL 2022- Match No 64- DELHI VS PUNJAB HEAD TO HEAD RECORDS
ಎರಡೂ ತಂಡಗಳಲ್ಲೂ ಸ್ಟಾರ್ ಆಟಗಾರರು ಇರುವುದರಿಂದ ಇಂದಿನ ಪಂದ್ಯ ರೋಚಕವಾಗಿ ಅಂತ್ಯಗೊಳ್ಳುವ ಸಾಧ್ಯತೆ ಇದೆ. ಮುಖ್ಯವಾಗಿ ಪಂಜಾಬ್ ಕಿಂಗ್ಸ್ ತಂಡದಲ್ಲಿ ಶಿಖರ್ ಧವನ್, ಲಿವಿಂಗ್ ಸ್ಟೋನ್, ಜಾನಿ ಬೇರ್ ಸ್ಟೋವ್ ಮತ್ತು ಮಯಾಂಕ್ ಅಗರ್ ವಾಲ್ ಅವರನ್ನು ಬ್ಯಾಟಿಂಗ್ ನಲ್ಲಿ ಹೆಚ್ಚು ನೆಚ್ಚಿಕೊಂಡಿದೆ.
ಇನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ ಡೇವಿಡ್ ವಾರ್ನರ್ ಅವರನ್ನು ಹೆಚ್ಚು ಅವಲಂಬಿತವಾಗಿದೆ. ಡೇವಿಡ್ ವಾರ್ನರ್ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಮತ್ತೊಂದೆಡೆ, ರಿಷಬ್ ಪಂತ್ ಮತ್ತು ರೊವ್ಮನ್ ಪೊವೆಲ್ ಮ್ಯಾಚ್ ಫಿನಿಶರ್ ಆಗಿದ್ರೂ ಕೂಡ ಸಮಯೋಚಿತವಾಗಿ ಆಡುತ್ತಿಲ್ಲ. ಇದು ತಂಡಕ್ಕೆ ಮೈನಸ್ ಪಾಯಿಂಟ್.

ಹಾಗೇ ಬೌಲಿಂಗ್ ನಲ್ಲಿ ಪಂಜಾಬ್ ಕಿಂಗ್ಸ್ ತಂಡಕ್ಕೆ ಆರ್ಶಾದೀಪ್ ಸಿಂಗ್ ಟ್ರಂಪ್ ಕಾರ್ಡ್ ಬೌಲರ್. ಘಾತಕ ವೇಗಿ ಕಾಗಿಸೊ ರಬಾಡ ಲಯ ಕಂಡುಕೊಂಡ್ರೆ ಡೆಲ್ಲಿ ಕ್ಯಾಪಿಟಲ್ಸ್ ಅಪಾಯ ತಪ್ಪಿದ್ದಲ್ಲ.
ಇನ್ನೊಂದೆಡೆ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಕುಲದೀಪ್ ಸಿಂಗ್ ಸ್ಪಿನ್ ವರ್ಕ್ ಔಟಾದ್ರೆ, ಪಂಜಾಬ್ ಕಿಂಗ್ಸ್ ತಂಡಕ್ಕೆ ಹಿನ್ನಡೆಯಾಗಬಹುದು.
ಒಟ್ಟಿನಲ್ಲಿ ಹಳೆಯ ಅಂಕಿ ಅಂಶಗಳು ತಂಡಕ್ಕೆ ಸ್ವಲ್ಪ ಮಟ್ಟಿನ ಆತ್ಮವಿಶ್ವಾಸವನ್ನು ತುಂಬಬಹುದು. ಆದ್ರೆ ಗೆಲುವು ದಾಖಲಿಸಲು ಸಂಘಟಿತ ಆಟ ಬೇಕೇಬೇಕು. ಹೀಗಾಗಿ ಹೊಂದಾಣಿಕೆ ಮತ್ತು ಸಂಘಟಿತ ಆಟವನ್ನಾಡುವ ತಂಡ ಗೆಲ್ಲಬಹುದು.
ಈಗಾಗಲೇ ಡೆಲ್ಲಿ ಕ್ಯಾಪಿಟಲ್ಸ್ ತಂಡ ಆಡಿರುವ 12 ಪಂದ್ಯಗಳಲ್ಲಿ ಆರು ಪಂದ್ಯಗಳಲ್ಲಿ ಜಯ ಸಾಧಿಸಿದ್ರೆ, ಆರು ಪಂದ್ಯಗಳಲ್ಲಿ ಸೋತಿದೆ. ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಇನ್ನು ಪಂಜಾಬ್ ಕಿಂಗ್ಸ್ ಕೂಡ ಆರು ಪಂದ್ಯ ಸೋತಿದೆ. ಆರು ಪಂದ್ಯ ಗೆದ್ದಿದೆ. ಆದ್ರೆ ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ.
ಒಟ್ಟಿನಲ್ಲಿ ಐಪಿಎಲ್ ಟೂರ್ನಿಯ 64ನೇ ಪಂದ್ಯ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳಿಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ.