IPL 2022- RR Vs LSG -Match Preview – ರಾಜಸ್ತಾನ ರಾಯಲ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ಸೇಡು ತೀರಿಸಿಕೊಳ್ಳುತ್ತಾ ?
15ನೇ ಆವೃತ್ತಿಯ ಐಪಿಎಲ್ ಟೂರ್ನಿಯ 63ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಜಸ್ತಾನ ರಾಯಲ್ಸ್ ತಂಡಗಳು ಮುಂಬೈನ ಬ್ರಬೋರ್ನ್ ಅಂಗಣದಲ್ಲಿ ನಡೆಯಲಿದೆ.
ಈಗಾಗಲೇ ಲಕ್ನೋ ಸೂಪರ್ ಜೈಂಟ್ಸ್ ತಂಡ ಪ್ಲೇ ಆಫ್ ಅರ್ಹತೆಯನ್ನು ಪಡೆದುಕೊಂಡಿದೆ. ಆದ್ರೆ ಇಂದಿನ ಪಂದ್ಯವನ್ನು ಗೆದ್ದುಕೊಂಡು ಅಧಿಕೃತವಾಗಿ ಪ್ಲೇ ಆಫ್ ಎಂಟ್ರಿಯನ್ನು ಖಚಿತ ಪಡಿಸಿಕೊಳ್ಳುವತ್ತ ರಾಹುಲ್ ಬಳಗ ಚಿತ್ತವನ್ನಿಟ್ಟಿದೆ.
ಲಕ್ನೋ ಸೂಪರ್ ಜೈಂಟ್ಸ್ ತಂಡ ಆಡಿರುವ 12 ಪಂದ್ಯಗಳಲ್ಲಿ ಎಂಟು ಪಂದ್ಯಗಳನ್ನು ಗೆದ್ದುಕೊಂಡಿದೆ. ಕೇವಲ ನಾಲ್ಕು ಪಂದ್ಯಗಳಲ್ಲಿ ಮಾತ್ರ ಸೋಲು ಅನುಭವಿಸಿದೆ. ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.
ಇನ್ನೊಂದೆಡೆ ರಾಜಸ್ತಾನ ರಾಯಲ್ಸ್ ತಂಡ ಕೂಡ ಪ್ಲೇ ಆಫ್ ಎಂಟ್ರಿಯ ಸನೀಹದಲ್ಲಿದೆ. ಆಡಿರುವ 12 ಪಂದ್ಯಗಳಲ್ಲಿ ಏಳು ಪಂದ್ಯಗಳಲ್ಲಿ ಗೆಲುವು ಮತ್ತು ಐದು ಪಂದ್ಯಗಳಲ್ಲಿ ಸೋತು ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

ಇನ್ನು ರಾಜಸ್ತಾನ ರಾಯಲ್ಸ್ ತಂಡ ಕೂಡ ಇಂದಿನ ಪಂದ್ಯದಲ್ಲಿ ಗೆಲುವನ್ನು ಎದುರು ನೋಡುತ್ತಿದೆ. ಈಗಾಗಲೇ ಗುಜರಾತ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳಿಗೆ ಪ್ಲೇ ಆಫ್ ಎಂಟ್ರಿಯ ಬಗ್ಗೆ ಅಷ್ಟೊಂದು ತಲೆನೋವು ಇಲ್ಲ. ಇನ್ನುಳಿದ ಎರಡು ಸ್ಥಾನಗಳಿಗೆ ನಾಲ್ಕು ತಂಡಗಳ ನಡುವೆ ಪೈಪೋಟಿ ಇದೆ. ಹೀಗಾಗಿ ರಾಜಸ್ತಾನ ರಾಯಲ್ಸ್ ಇಂದಿನ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲೂ ಇದೆ. ಆರ್ ಸಿಬಿ, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಕೂಡ ರೇಸ್ ನಲ್ಲಿವೆ.
ಇನ್ನು ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಜಸ್ತಾನ ರಾಯಲ್ಸ್ ತಂಡಗಳು ಬಲಿಷ್ಟವಾಗಿವೆ. ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡು ವಿಭಾಗದಲ್ಲೂ ಉಭಯ ತಂಡಗಳು ಸಮಬಲದಲ್ಲಿವೆ. ಆದ್ರೆ ಈ ಹಿಂದಿನ ಪಂದ್ಯಗಳಲ್ಲಿ ಎರಡು ತಂಡಗಳು ಕೂಡ ಸೋಲು ಅನುಭವಿಸಿವೆ. ಹಾಗೇ ಕಳೆದ ಪಂದ್ಯದಲ್ಲಿ ರಾಜಸ್ತಾನ ರಾಯಲ್ಸ್ ತಂಡ ಮೂರು ರನ್ ಗಳಿಂದ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಸೋಲಿಸಿತ್ತು. ಈ ಸೋಲಿಗೆ ಸೇಡು ತೀರಿಸಿಕೊಳ್ಳುವ ಇರಾದೆಯಲ್ಲಿದೆ ಲಕ್ನೋ ಸೂಪರ್ ಜೈಂಟ್ಸ್ ತಂಡ. IPL 2022- Match No 63- RR Vs LSG -Match Preview

ಲಕ್ನೋ ಸೂಪರ್ ಜೈಂಟ್ಸ್ ತಂಡ ಹೆಚ್ಚು ನೆಚ್ಚಿಕೊಂಡಿರುವುದು ಆರಂಭಿಕರಾದ ಕ್ವಿಂಟನ್ ಡಿಕಾಕ್ ಮತ್ತು ಕೆ.ಎಲ್. ರಾಹುಲ್ ಅವರನ್ನು. ಇವರಿಬ್ಬರು ಉತ್ತಮ ಆರಂಭವನ್ನು ನೀಡಿದ್ರೆ, ಮಧ್ಯಮ ಕ್ರಮಾಂಕದಲ್ಲಿ ದೀಪಕ್ ಹೂಡ, ಮಾರ್ಕಸ್ ಸ್ಟೋನಿಸ್, ಆಯುಷ್ ಬಡೋನಿ, ಕೃನಾಲ್ ಪಾಂಡ್ಯ ತಂಡಕ್ಕೆ ಆಧಾರವಾಗಲಿದ್ದಾರೆ. ಹಾಗೇ ಆಲ್ ರೌಂಡರ್ ಜೇಸನ್ ಹೋಲ್ಡರ್ ಕೂಡ ಬೌಲಿಂಗ್ ಜೊತೆಗೆ ಬ್ಯಾಟಿಂಗ್ ನಲ್ಲೂ ಆಸರೆಯಾಗಲಿದ್ದಾರೆ. ಇನ್ನುಳಿದಂತೆ ಬೌಲಿಂಗ್ ನಲ್ಲಿ ಕರಣ್ ಶರ್ಮಾ, ಆವೇಶ್ ಖಾನ್, ದುಶ್ಮಂತ್ ಚಾಮೀರ ಮತ್ತು ಮೋಶಿನ್ ಖಾನ್ ಮಾರಕವಾಗಿ ಪರಿಣಮಿಸಬಹುದು.
ಇನ್ನು ರಾಜಸ್ತಾನ ರಾಯಲ್ಸ್ ತಂಡಕ್ಕೆ ಜೋಸ್ ಬಟ್ಲರ್ ರನ್ ಮೇಷಿನ್ ಆಗಿದ್ದಾರೆ. ದೇವದತ್ ಪಡಿಕ್ಕಲ್ ಬದಲು ಯಶಸ್ವಿ ಜೈಸ್ವಾಲ್ ಇನಿಂಗ್ಸ್ ಆರಂಭಿಸಿದ್ರೆ, ದೇವದತ್ ಪಡಿಕ್ಕಲ್ ಮಧ್ಯಮ ಕ್ರಮಾಂಕದಲ್ಲಿ ಆಡಬೇಕಾಗುತ್ತದೆ. ನಾಯಕ ಸಂಜು ಸ್ಯಾಮನ್ಸ್ ರಸೆಯ್ ವನ್ ಡೇರ್ ಡುಸೆನ್ ಮತ್ತು ರಿಯಾನ್ ಪರಾಗ್ ಮ್ಯಾಚ್ ಫಿನಿಶಿಂಗ್ ಜವಾಬ್ದಾರಿಯನ್ನು ನಿಭಾಯಿಸಬೇಕಾಗುತ್ತದೆ. ಹಾಗೇ ಬೌಲಿಂಗ್ ನಲ್ಲಿ ಆರ್ . ಅಶ್ವಿನ್ ಮತ್ತು ಯುಜುವೇಂದ್ರ ಚಾಹಲ್ ಸ್ಪಿನ್ ಅಸ್ತ್ರಗಳು. ಟ್ರೆಂಟ್ ಬೌಲ್ಟ್, ಪ್ರಸಿದ್ಧ ಕೃಷ್ಣ ಮತ್ತು ಕುಲದೀಪ್ ಸೇನ್ ಲಕ್ನೋ ಬ್ಯಾಟರ್ ಗಳಿಗೆ ದುಃಸ್ವಪ್ನವಾಗಿ ಕಾಡಿದ್ರೂ ಅಚ್ಚರಿ ಏನಿಲ್ಲ.
ಒಟ್ಟಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಜಸ್ತಾನ ರಾಯಲ್ಸ್ ತಂಡಗಳ ಹೋರಾಟ ಕ್ರಿಕೆಟ್ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲವನ್ನು ಮೂಡಿಸಿದೆ.