IPL 2022- Match No 49 – RCB Vs CSK-ಒಂದು ಪಂದ್ಯದ ಹಲವು ದಾಖಲೆ – ಸಾಧನೆಗಳಿಗೆ ಸಾಕ್ಷಿಯಾಗುತ್ತಾ ?

ಮೇ 4ರಂದು ನಡೆಯಲಿರುವ 15ನೇ ಆವೃತ್ತಿಯ 49 ನೇ ಪಂದ್ಯದಲ್ಲಿ ಹಲವು ದಾಖಲೆಗಳು ನಿರ್ಮಾಣವಾಗುವ ಸಾಧ್ಯತೆಗಳಿವೆ.
ಪುಣೆಯ ಎಮ್ ಸಿಎ ಅಂಗಣದಲ್ಲಿ ಆರ್ ಸಿಬಿ ಮತ್ತು ಸಿಎಸ್ ಕೆ ತಂಡಗಳು ಗೆಲುವಿಗಾಗಿ ಜಿದ್ದಾಜಿದ್ದಿನ ಹೋರಾಟ ನಡೆಸಲಿವೆ. ಪ್ಲೇ ಆಫ್ ಗೆ ಎಂಟ್ರಿಯಾಗಬೇಕಾದ್ರೆ ಈ ಪಂದ್ಯದಲ್ಲಿ ಉಭಯ ತಂಡಗಳಿಗೆ ಗೆಲುವು ಅನಿವಾರ್ಯವಾಗಿದೆ.
ಲೀಗ್ ನ ಮೊದಲ ಪಂದ್ಯದಲ್ಲಿ ಆರ್ ಸಿಬಿ ಸಿಎಸ್ ಕೆ ವಿರುದ್ಧ ಮುಖಭಂಗ ಅನುಭವಿಸಿದೆ. ಹೀಗಾಗಿ ಆರ್ ಸಿಬಿ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ. ಆದ್ರೆ ಹಿಂದಿನ ಅಂಕಿ ಅಂಶಗಳು ಆರ್ ಸಿಬಿ ತಂಡಕ್ಕೆ ಪೂರಕವಾಗಿಲ್ಲ. ಒಟ್ಟು ಆರ್ ಸಿಬಿ ಮತ್ತು ಸಿಎಸ್ ಕೆ ತಂಡಗಳು 30 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಸಿಎಸ್ ಕೆ ತಂಡ 20 ಬಾರಿ ಜಯ ಸಾಧಿಸಿದ್ರೆ, ಆರ್ ಸಿಬಿ ಗೆದ್ದಿದ್ದು ಕೇವಲ 9 ಬಾರಿ ಮಾತ್ರ. ಒಂದು ಪಂದ್ಯದ ಫಲಿತಾಂಶ ಬಂದಿಲ್ಲ.
ಈ ನಡುವೆ, ಸಿಎಸ್ ಕೆ ತಂಡಕ್ಕೆ ಮತ್ತೆ ಮಹೇಂದ್ರ ಸಿಂಗ್ ಧೋನಿ ಸಾರಥ್ಯ ವಹಿಸಿದ್ದಾರೆ. ಅಲ್ಲದೆ ಮಹೇಂದ್ರ ಸಿಂಗ್ ಧೋನಿ ಅವರು ಸಿಎಸ್ ಕೆ ತಂಡದ ಪರ 200ನೇ ಪಂದ್ಯವನ್ನಾಡುತ್ತಿದ್ದಾರೆ. ಈ ಮೂಲಕ ಐಪಿಎಲ್ ನಲ್ಲಿ ಒಂದೇ ತಂಡದ ಪರ 200ನೇ ಪಂದ್ಯವನ್ನಾಡಿರುವ ಎರಡನೇ ಆಟಗಾರನಾಗಲಿದ್ದಾರೆ. ಇದಕ್ಕು ಮೊದಲು ವಿರಾಟ್ ಕೊಹ್ಲಿ ಆರ್ ಸಿಬಿ ಪರ 217 ಪಂದ್ಯಗಳನ್ನಾಡಿದ್ದಾರೆ. IPL 2022- Match No 49 – RCB Vs CSK- Head to Head records

ಇನ್ನೊಂದೆಡೆ ಆರ್ ಸಿಬಿಯ ವಿಕೆಟ್ ಕೀಪರ್ ಬ್ಯಾಟ್ಸ್ ಮೆನ್ ದಿನೇಶ್ ಕಾರ್ತಿಕ್ ಕೂಡ ಮತ್ತೊಂದು ಸಾಧನೆ ಮಾಡಲಿದ್ದಾರೆ. ಟಿ-20 ಕ್ರಿಕೆಟ್ ನಲ್ಲಿ ವಿಕೆಟ್ ಕೀಪರ್ ಆಗಿ 200ನೇ ಕ್ಯಾಚ್ ಪಡೆದ ಆಟಗಾರನಾಗಿ ಹೊರಹೊಮ್ಮಲಿದ್ದಾರೆ. ಇದಕ್ಕಾಗಿ ದಿನೇಶ್ ಕಾರ್ತಿಕ್ ಗೆ ಬೇಕಾಗಿರುವುದು ಬರೀ ಒಂದು ಕ್ಯಾಚ್ ಅಷ್ಟೇ. ಈ ಸಾಧನೆ ಮಾಡಿದ್ರೆ, ದಿನೇಶ್ ಕಾರ್ತಿಕ್ ಭಾರತದ ಎರಡನೇ ವಿಕೆಟ್ ಕೀಪರ್ ಆಗಲಿದ್ದಾರೆ.
ಈಗಾಗಲೇ ಐಪಿಎಲ್ ನಲ್ಲಿ ನೂರು ವಿಕೆಟ್ ಪಡೆದಿರುವ ರವೀಂದ್ರ ಜಡೇಜಾ ಒಂದು ರನ್ ಗಳಿಸಿದ್ರೆ, 100 ವಿಕೆಟ್ ಮತ್ತು 2500 ರನ್ ದಾಖಲಿಸಿದ್ದ ಐಪಿಎಲ್ ನ ಮೊದಲ ಆಲ್ ರೌಂಡರ್ ಎಂಬ ಗೌರವಕ್ಕೆ ಪಾತ್ರರಾಗಲಿದ್ದಾರೆ.

ಇನ್ನು ವಿರಾಟ್ ಕೊಹ್ಲಿ ಇಂದಿನ ಪಂದ್ಯದಲ್ಲಿ ಕ್ರೀಸ್ ಗೆ ಅಂಟಿಕೊಂಡು ಬಿಟ್ರೆ, ಎರಡು ಸಾಧನೆಗಳು ಅವರ ಹೆಸರಿನಲ್ಲಿ ಅಂಟಿಕೊಳ್ಳಲಿವೆ. ಐದು ಎಸೆತಗಳನ್ನು ಎದುರಿಸಿದ್ರೆ, ಐಪಿಎಲ್ ನಲ್ಲಿ 5000 ಎಸೆತಗಳನ್ನು ಎದುರಿಸಿದ ಮೊದಲ ಆಟಗಾರ ಎಂಬ ಗೌರವಕ್ಕೆ ಪಾತ್ರರಾಗಲಿದ್ದಾರೆ. ಹಾಗೇ ಸಿಎಸ್ ಕೆ ವಿರುದ್ದ 31 ರನ್ ಗಳಿಸಿದ್ರೆ, ಐಪಿಎಲ್ ನಲ್ಲಿ 6500 ರನ್ ಗಳಿಸಿದ್ದ ಹಿರಿಮೆಗೆ ಪಾತ್ರರಾಗಲಿದ್ದಾರೆ.
ಒಟ್ಟಿನಲ್ಲಿ ಆರ್ ಸಿಬಿ ಮತ್ತು ಸಿಎಸ್ ಕೆ ತಂಡಗಳ ನಡುವಿನ ಪಂದ್ಯದಲ್ಲಿ ಕೆಲವೊಂದು ಸಾಧನೆ, ದಾಖಲೆಗಳು ನಿರ್ಮಾಣವಾಗಲಿವೆ.