IPL 2022- LSG – K.Gowtham – ಏರಿಳಿತಗಳ ನಡುವೆ ಭರವಸೆಯ ಹೆಜ್ಜೆಯನ್ನಿಡುತ್ತಿರುವ ಕೆ. ಗೌತಮ್…!

ಕೃಷ್ಣಪ್ಪ ಗೌತಮ್. ಕರ್ನಾಟಕಯ ಆಟಗಾರ. ಸದ್ಯ ಐಪಿಎಲ್ ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರ ಆಡುತ್ತಿದ್ದಾರೆ.
31ರ ಹರೆಯದ ಕೆ. ಗೌತಮ್ ಆಲ್ ರೌಂಡರ್. 2012ರಿಂದ ಕರ್ನಾಟಕ ತಂಡದ ಭಾಗವಾಗಿರುವ ಗೌತಮ್, 2021ರಲ್ಲಿ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದರು. ಶ್ರೀಲಂಕಾ ವಿರುದ್ಧ ಆಡಿದ ಒಂದು ಪಂದ್ಯದಲ್ಲಿ ಒಂದು ವಿಕೆಟ್ ಕೂಡ ಪಡೆದುಕೊಂಡಿದ್ದರು.
ಹರ್ಭಜನ್ ಸಿಂಗ್ ಬೌಲಿಂಗ್ ಶೈಲಿಯಂತೆ ಬೌಲಿಂಗ್ ಮಾಡುತ್ತಿದ್ದ ಗೌತಮ್ ಅವರನ್ನು ಭಜ್ಜಿ ಅಂತನೇ ಪ್ರೀತಿಯಿಂದ ಕರೆಯಲಾಗುತ್ತಿತ್ತು. ಆದ್ರೆ ಗೌತಮ್ ಗೆ ಅದೃಷ್ಟವಿರಲಿಲ್ಲ. ಆಲ್ ರೌಂಡ್ ಆಟವನ್ನಾಡುತ್ತಿದ್ದರೂ ಕೂಡ ಸರಿಯಾದ ವೇದಿಕೆ ಸಿಕ್ಕಿರಲಿಲ್ಲ.
ಇನ್ನು ಐಪಿಎಲ್ ನಲ್ಲಿ ಗೌತಮ್ ಹಲವು ಏರಿಳಿತಗಳನ್ನು ಕಂಡಿದ್ದಾರೆ. 2017ರಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಂಡಿದ್ದ ಗೌತಮ್ ಒಂದೇ ಒಂದು ಪಂದ್ಯವನ್ನು ಆಡಿರಲಿಲ್ಲ.
ಆದ್ರೆ 2018ರಲ್ಲಿ ರಾಜಸ್ತಾನ ರಾಯಲ್ಸ್ ತಂಡವನ್ನು ಸೇರಿಕೊಂಡಾಗ ತನ್ನ ಪ್ರತಿಭೆ ಮತ್ತು ಸಾಮಥ್ರ್ಯವನ್ನು ಸಾಬೀತುಪಡಿಸಿದ್ರು. ಜೊತೆಗೆ ಸ್ಪಿನ್ ದಂತ ಕಥೆ ಶೇನ್ ವಾರ್ನ್ ಅವರ ಮಾರ್ಗದರ್ಶನವೂ ಸಿಕ್ಕಿತ್ತು. ಅಷ್ಟೇ ಅಲ್ಲ, ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿ ರಾಜಸ್ತಾನ ರಾಯಲ್ಸ್ ತಂಡಕ್ಕೆ ಅಚ್ಚರಿಯ ಗೆಲುವನ್ನು ತಂದುಕೊಟ್ಟರು. ಆದ್ರೆ 2019ರಲ್ಲಿ ಗೌತಮ್ ರಾಜಸ್ತಾನ ರಾಯಲ್ಸ್ ಪರ ಕೇವಲ ಏಳು ಪಂದ್ಯಗಳನ್ನು ಆಡಿದ್ದರು. ಒಂದು ವಿಕೆಟ್ ಮಾತ್ರ ಪಡೆದುಕೊಂಡಿದ್ದರು.
2020ರಲ್ಲಿ ಗೌತಮ್ ಅವರು ಪಂಜಾಬ್ ಕಿಂಗ್ಸ್ ತಂಡವನ್ನು ಸೇರಿಕೊಂಡ್ರು. ಪಂಜಾಬ್ ತಂಡದ ಹೆಡ್ ಕೋಚ್ ಅನಿಲ್ ಕುಂಬ್ಳೆ ಮತ್ತು ನಾಯಕ ಕೆ.ಎಲ್. ರಾಹುಲ್. ಇಬ್ಬರು ಕೂಡ ಕರ್ನಾಟಕದವರೇ. ಆದ್ರೂ ಗೌತಮ್ ಅವರಿಗೆ ಅವಕಾಶ ಸಿಗಲಿಲ್ಲ. ಕೇವಲ 2 ಪಂದ್ಯಗಳಿಗೆ ಮಾತ್ರ ಸೀಮಿತವಾದ್ರು.

ಆದ್ರೆ ರಣಜಿ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಗೌತಮ್ 2021ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಭಾರೀ ಮೊತ್ತಕ್ಕೆ ಸೇಲಾದ್ರು. ಕೆಕೆಆರ್ ಮತ್ತು ಎಸ್ ಆರ್ ಎಚ್ ಫ್ರಾಂಚೈಸಿಗಳ ಪೈಪೋಟಿಯ ನಡುವೆಯೂ ಗೌತಮ್ ಅವರನ್ನು ಸಿಎಸ್ ಕೆ ತಂಡ 9.25 ಕೋಟಿಗೆ ಖರೀದಿ ಮಾಡಿತ್ತು. ಆದ್ರೆ ಸಿಎಸ್ ಕೆ ತಂಡದಲ್ಲೂ ಸರಿಯಾದ ಅವಕಾಶ ಸಿಗಲಿಲ್ಲ. ಆದ್ರೂ ಚಾಂಪಿಯನ್ ತಂಡದ ಭಾಗವಾಗಿದ್ದರು ಎಂಬ ಸಮಾಧಾನವಿತ್ತು.
ದುರಂತ ಅಂದ್ರೆ ಗೌತಮ್ ಅವರಿಗೆ 2022ರ ಐಪಿಎಲ್ ಬಿಡ್ಡಿಂಗ್ ನಲ್ಲಿ ಬೇಡಿಕೆನೇ ಇರಲಿಲ್ಲ. ಟೀಮ್ ಇಂಡಿಯಾ ಪರ ಆಡಿದ್ರೂ ಕೂಡ 90 ಲಕ್ಷ ರೂಪಾಯಿಗೆ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಸೇರಿಕೊಂಡಿದ್ದಾರೆ.
ಇದೀಗ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ಆಡಿರುವ ಗೌತಮ್ ಅದ್ಭುತ ಪ್ರದರ್ಶನವನ್ನೇ ನೀಡಿದ್ದಾರೆ. ಪೃಥ್ವಿ ಶಾ ಬ್ಯಾಟ್ ನಿಂದ ಮೂರು ಬೌಂಡರಿ ಮತ್ತು ಎರಡು ಸಿಕ್ಸರ್ ಹೊಡೆಸಿಕೊಂಡ್ರು. ಆದ್ರೂ ಮಹತ್ವದ ಘಟ್ಟದಲ್ಲಿ ಪೃಥ್ವಿ ಶಾ ಅವರನ್ನು ಪೆವಿಲಿಯನ್ ಸೇರಿಸುವಲ್ಲಿ ಯಶಸ್ವಿಯಾದ್ರು. IPL 2022- LSG – K.Gowtham takes baby steps to being an IPL regular again
ಇನ್ನೊಂದೆಡೆ ಪಂದ್ಯ 12 ನೇ ಓವರ್ ಅನ್ನು ಮೇಡನ್ ಓವರ್ ಮಾಡಿದ್ದ ಗೌತಮ್ ಡೆಲ್ಲಿ ತಂಡದ ರನ್ ದಾಹಕ್ಕೂ ಕಡಿವಾಣ ಹಾಕಿದ್ರು. ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಬ್ ಪಂತ್ ಅವರನ್ನು ಪರದಾಡುವಂತೆ ಮಾಡಿದ್ದರು. ಅಲ್ಲದೆ ಇದೇ ಮೊದಲ ಬಾರಿ ರಿಷಬ್ ಪಂತ್ ಐಪಿಎಲ್ ನಲ್ಲಿ ಮೇಡನ್ ಓವರ್ ಮಾಡುವಂತೆ ಆಡಿದ್ದರು. ಅಂತಿಮವಾಗಿ ಗೌತಮ್ ತನ್ನ ನಾಲ್ಕು ಓವರ್ ಗಳ ಕೋಟಾದಲ್ಲಿ 23 ರನ್ ನೀಡಿ ಒಂದು ವಿಕೆಟ್ ಪಡೆದಿದ್ದಾರೆ.
ಒಟ್ಟಿನಲ್ಲಿ ಐಪಿಎಲ್ ನಲ್ಲಿ ಹಲವು ಏರಿಳಿತಗಳನ್ನು ಕಂಡಿರುವ ಗೌತಮ್ ಅವರಿಗೆ ಎಲ್ ಎಸ್ ಜಿ ತಂಡದ ನಾಯಕ ಕೆ.ಎಲ್. ರಾಹುಲ್ ಅವರ ಬೆಂಬಲವೂ ಇದೆ. ಏನೇ ಆಗ್ಲಿ ಗೌತಮ್ ಅವರಿಗೆ ಈ ವರ್ಷದ ಐಪಿಎಲ್ ಅದೃಷ್ಟ ಬದಲಾಯಿಸುತ್ತಾ ಅನ್ನೋದನ್ನು ಕಾದು ನೋಡಬೇಕು.