ಎವಿನ್ ಲೂಯಿಸ್(55*) ಬೊಂಬಾಟ್ ಬ್ಯಾಟಿಂಗ್ ಹಾಗೂ ಕ್ವಿಂಟನ್ ಡಿಕಾಕ್(61) ಆಕರ್ಷಕ ಅರ್ಧಶತಕದ ನೆರವಿನಿಂದ ಅಬ್ಬರಿಸಿದ ಲಕ್ನೋ ಸೂಪರ್ ಜೈಂಟ್ಸ್, ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 6 ವಿಕೆಟ್ಗಳಿಂದ ಭರ್ಜರಿ ಗೆಲುವು ಸಾಧಿಸಿತು.
ಬ್ರೆಬೌರ್ನ್ ಮೈದಾನಲ್ಲಿ ನಡೆದ ಪಂದ್ಯದಲ್ಲಿ ಮೊದಲ ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 210 ರನ್ಗಳಿಸಿತು. ಈ ಕಠಿಣ ಸವಾಲು ಎದುರಿಸಿದ ಲಕ್ನೋ ಸೂಪರ್ ಜೈಂಟ್ಸ್ 19.3 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 212 ರನ್ಗಳಿಸುವ ಮೂಲಕ ಅದ್ಭುತ ಗೆಲುವು ಸಾಧಿಸಿತು. ಈ ಗೆಲುವಿನೊಂದಿಗೆ ಲಕ್ನೋ, 15ನೇ ಆವೃತ್ತಿಯ ಐಪಿಎಲ್ನಲ್ಲಿ ಮೊದಲ ಗೆಲುವು ಸಾಧಿಸಿದರೆ. ಪ್ರಸಕ್ತ ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಸತತ ಎರಡನೇ ಸೋಲಿನ ಆಘಾತ ಕಂಡಿತು.
ಲೂಯಿಸ್ ಅಬ್ಬರದ ಆಟ
ಕಠಿಣ ಸವಾಲು ಎದುರಿಸಿದ ಲಕ್ನೋ ತಂಡಕ್ಕೆ ಎವಿನ್ ಲೂಯಿಸ್(55*) ಹೀರೋ ಆದರು. 2ನೇ ಕ್ರಮಾಂಕದಲ್ಲಿ ಬಂದ ಲೂಯಿಸ್, ಚೆನ್ನೈ ಬೌಲರ್ಗಳ ಮೇಲೆ ಸಂಪೂರ್ಣ ಪ್ರಾಬಲ್ಯ ಸಾಧಿಸಿದರು. ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದ ಎವಿನ್ ಲೂಯಿಸ್, ಕೇವಲ 23 ಬಾಲ್ಗಳಲ್ಲಿ 6 ಬೌಂಡರಿ ಹಾಗೂ 3 ಸಿಕ್ಸರ್ಗಳ ನೆರವಿನಿಂದ ಸ್ಪೋಟಕ ಅರ್ಧಶತಕ ಬಾರಿಸಿ ತಂಡವನ್ನ ಗೆಲುವಿನ ದಡಸೇರಿಸಿದರು. ಇವರಿಗೆ ಉತ್ತಮ ಸಾಥ್ ನೀಡಿದ ಆಯುಷ್ ಬಡೋನಿ, 18* ರನ್(9 ಬಾಲ್, 2 ಸಿಕ್ಸರ್) ಬಿರುಸಿನ ಆಟವಾಡಿದರು. ಅಲ್ಲದೇ ಈ ಇಬ್ಬರು 5ನೇ ವಿಕೆಟ್ಗೆ 40* ರನ್ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ಶಿವಂ ದುಬೆ ಮಾಡಿದ ಇನ್ನಿಂಗ್ಸ್ನ 19ನೇ ಓವರ್ನಲ್ಲಿ ಚೆನ್ನೈ 25 ರನ್ ನೀಡಿದ್ದು, ಸೋಲಿಗೆ ಪ್ರಮುಖ ಕಾರಣವಾಯಿತು.
ಲಕ್ನೋ ಭರ್ಜರಿ ಆರಂಭ
ಸಿಎಸ್ಕೆ ನೀಡಿದ ಬೃಹತ್ ಟಾರ್ಗೆಟ್ ಬೆನ್ನತ್ತಿದ ಲಕ್ನೋ ಭರ್ಜರಿ ಆರಂಭ ಕಂಡಿತು. ತಂಡದ ಪರ ಇನ್ನಿಂಗ್ಸ್ ಆರಂಭಿಸಿದ ನಾಯಕ ಕೆ.ಎಲ್.ರಾಹುಲ್ 40 ರನ್(26 ಎಸೆತ, 2 ಬೌಂಡರಿ, 3 ಸಿಕ್ಸರ್) ಹಾಗೂ ಕ್ವಿಂಟನ್ ಡಿಕಾಕ್ 61 ರನ್(45 ಬಾಲ್, 9 ಬೌಂಡರಿ) ಮೊದಲ ವಿಕೆಟ್ಗೆ 99 ರನ್ಗಳ ಅದ್ಭುತ ಆರಂಭ ಒದಗಿಸಿದರು. ಆದರೆ ಉತ್ತಮವಾಗಿ ಆಡುತ್ತಿದ್ದ ರಾಹುಲ್, ದೊಡ್ಡ ಹೊಡೆತಕ್ಕೆ ಯತ್ನಿಸಿ ವಿಕೆಟ್ ಒಪ್ಪಿಸಿದರು. ಆದರೆ ಜವಾಬ್ದಾರಿಯ ಆಟವಾಡಿದ ಡಿಕಾಕ್ (61) ಅರ್ಧಶತಕ ಬಾರಿಸಿ ನಿರ್ಣಾಯಕ ಹಂತದಲ್ಲಿ ಪೆವಿಲಿಯನ್ ಸೇರಿದರು. ಆದರೆ ಆರಂಭಿಕರ ನಂತರ ಕಣಕ್ಕಿಳಿದ ಮನೀಷ್ ಪಾಂಡೆ (5) ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. 4ನೇ ಕ್ರಮಾಂಕದಲ್ಲಿ ಬಂದ ದೀಪಕ್ ಹೂಡ(13) ಸಿಕ್ಸರ್ ಹೊಡೆಯುವ ಯತ್ನದಲ್ಲಿ ವಿಫಲರಾಗಿ ವಿಕೆಟ್ ಒಪ್ಪಿಸಿದರು.
ಸಿಎಸ್ಕೆ ಭರ್ಜರಿ ಬ್ಯಾಟಿಂಗ್
ಟಾಸ್ ಸೋತು ಮೊದಲ ಬ್ಯಾಟಿಂಗ್ ಅವಕಾಶ ಪಡೆದ ಚೆನ್ನೈ ಸೂಪರ್ ಕಿಂಗ್ಸ್ ಇನ್ನಿಂಗ್ಸ್ ಆರಂಭದಲ್ಲೇ ಋತುರಾಜ್ ಗಾಯಕ್ವಾಡ್(1) ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. 2ನೇ ವಿಕೆಟ್ಗೆ ಜೊತೆಯಾದ ರಾಬಿನ್ ಉತ್ತಪ್ಪ(50) ಹಾಗೂ ಮೊಯಿನ್ ಅಲಿ(35) ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಉತ್ತಪ್ಪ 50(27 ಎಸೆತ, 8 ಬೌಂಡರಿ, 1 ಸಿಕ್ಸರ್) ಅರ್ಧಶತಕ ಬಾರಿಸಿದರು. ಶಿವಂ ದುಬೆ 49 (30 ಎಸೆತ, 5 ಬೌಂಡರಿ, 2 ಸಿಕ್ಸ್) ಅಬ್ಬರದ ಆಟವಾಡಿದರು. ಉಳಿದಂತೆ ಮೊಯಿನ್ ಅಲಿ(22), ಅಂಬಟಿ ರಾಯುಡು(27) ತಂಡದ ರನ್ ವೇಗ ಹೆಚ್ಚಿಸಿದರು. ರವೀಂದ್ರ ಜಡೇಜಾ 17 ರನ್ಗಳಿಸಿದರೆ. ಇನ್ನಿಂಗ್ಸ್ ಕೊನೆಯಲ್ಲಿ ಎಂ.ಎಸ್.ಧೋನಿ ಬಿರುಸಿನ 16* ರನ್ಗಳಿಸಿ ತಂಡದ ಮೊತ್ತವನ್ನ 200ರ ಗಡಿದಾಟಿಸಿದರು. ಲಕ್ನೋ ಪರ ರವಿ ಬಿಷ್ಣೋಯಿ, ಅವೇಶ್ ಖಾನ್ ಹಾಗೂ ಆಂಡ್ರ್ಯೂ ಥಾಯ್ ತಲಾ 2 ವಿಕೆಟ್ ಪಡೆದರು.
ಎರಡು ತಂಡಗಳ ಮುಂದಿನ ಪಂದ್ಯ
ಚೆನ್ನೈ ಸೂಪರ್ ಕಿಂಗ್ಸ್ ತನ್ನ ಮುಂದಿನ ಪಂದ್ಯವನ್ನು ಏಪ್ರಿಲ್ 3ರಂದು ಪಂಜಾಬ್ ಕಿಂಗ್ಸ್ ವಿರುದ್ಧ ಆಡಲಿದೆ. ಲಕ್ನೋ ಸೂಪರ್ ಜೈಂಟ್ಸ್ ಏ.4ರಂದು ಸನ್ರೈಸರ್ಸ್ ಹೈದ್ರಾಬಾದ್ ವಿರುದ್ಧ ಹಣಾಹಣಿ ನಡೆಸಲಿದೆ.