ಗುಜರಾತ್ ಟೈಟನ್ಸ್ ಬೌಲರ್ಗಳ ಪ್ರಾಬಲ್ಯದ ನಡುವೆಯೂ ಸ್ಪೋಟಕ ಆಟವಾಡಿದ ಲಿಯಾಮ್ ಲಿವಿಂಗ್ಸ್ಟೋನ್(64) ಅರ್ಧಶತಕದ ನೆರವಿನಿಂದ ಪಂಜಾಬ್ ಕಿಂಗ್ಸ್ 189 ರನ್ ಕಲೆಹಾಕಿದೆ.
ಬ್ರಬೌರ್ನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಸೋತ ಪಂಜಾಬ್ ಕಿಂಗ್ಸ್ ಮೊದಲು ಬ್ಯಾಟಿಂಗ್ ಅವಕಾಶ ಪಡೆಯಿತು. ಆದರೆ ನಿರೀಕ್ಷಿತ ಆರಂಭ ಪಡೆಯುವಲ್ಲಿ ವಿಫಲವಾದ ಪಂಜಾಬ್ ಕಿಂಗ್ಸ್, 20 ಓವರ್ಗಳಲ್ಲಿ 9 ವಿಕೆಟ್ಗೆ 189 ರನ್ಗಳಿಸಿತು. ತಂಡದ ಪರ ಲಿಯಾಮ್ ಲಿವಿಂಗ್ಸ್ಟೋನ್ 64, ಶಿಖರ್ ಧವನ್ 35 ತಂಡಕ್ಕೆ ಆಸರೆಯಾದರು.
ಲಿವಿಂಗ್ಸ್ಟೋನ್ ಅಬ್ಬರ:
ಗುಜರಾತ್ ಟೈಟನ್ಸ್ ಬೌಲರ್ಗಳ ಪ್ರಾಬಲ್ಯದ ನಡುವೆಯೂ ಲಿಯಾಮ್ ಲಿವಿಂಗ್ಸ್ಟೋನ್ 64 ರನ್ (27 ಬಾಲ್, 7 ಬೌಂಡರಿ, 4 ಸಿಕ್ಸರ್) ತಂಡಕ್ಕೆ ಆಸರೆಯಾದರು. ಬೌಂಡರಿ, ಸಿಕ್ಸರ್ ಮೂಲಕ ಅಬ್ಬರಿಸಿದ ಲಿವಿಂಗ್ಸ್ಟೋನ್, ಪ್ರಸಕ್ತ ಸೀಸನ್ನಲ್ಲಿ ಮತ್ತೊಂದು ಅರ್ಧಶತಕ ಸಿಡಿಸಿ ಮಿಂಚಿದರು. ಇವರಿಗೆ ಶಿಖರ್ ಧವನ್ ಹಾಗೂ ಜಿತೇಶ್ ಶರ್ಮ ಉತ್ತಮ ಸಾಥ್ ನೀಡಿದರು.
ಪಂಜಾಬ್ ನೀರಸ ಆರಂಭ:
ಪಂಜಾಬ್ ಪರ ಇನ್ನಿಂಗ್ಸ್ ಆರಂಭಿಸಿದ ನಾಯಕ ಮಯಂಕ್ ಅಗರ್ವಾಲ್(5) ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಇವರ ಬೆನ್ನಲ್ಲೇ 2022ರ ಐಪಿಎಲ್ನಲ್ಲಿ ಮೊದಲ ಪಂದ್ಯವಾಡಿದ ಜಾನಿ ಬೈರ್ಸ್ಟೌವ್(8) ಸಹ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಆದರೆ 3ನೇ ವಿಕೆಟ್ಗೆ ಜೊತೆಯಾದ ಶಿಖರ್ ಧವನ್ ಹಾಗೂ ಲಿವಿಂಗ್ಸ್ಟೋನ್, 52 ರನ್ಗಳ ಉಪಯುಕ್ತ ಜೊತೆಯಾಟವಾಡಿದರು. ನಂತರ ಬಂದ ಜಿತೇಶ್ ಶರ್ಮ 23(11) ಬಿರುಸಿನ ಆಟವಾಡಿ ನಿರ್ಗಮಿಸಿದರು.
ನಂತರ ಬಂದ ಒಡಿಯನ್ ಸ್ಮಿತ್(0) ಮೊದಲ ಬಾಲ್ನಲ್ಲೇ ಔಟಾಗಿ ನಿರಾಸೆ ಮೂಡಿಸಿದರೆ. ಸ್ಪೋಟಕ ಆಟವಾಡುವ ಸೂಚನೆ ನೀಡಿದ್ದ ಶಾರೂಕ್ ಖಾನ್(15) ಪೆವಿಲಿಯನ್ ಸೇರಿದರು. ಕೆಳ ಕ್ರಮಾಂಕದಲ್ಲಿ ಬಂದ ರಬಾಡ(1), ಅರೋರ(2) ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿದರೆ. ರಾಹುಲ್ ಚಹರ್ 22* ಮತ್ತು ಅರ್ಶದೀಪ್ 8* ಉಪಯುಕ್ತ ರನ್ಗಳಿಸಿದರು.
ಗುಜರಾತ್ ಟೈಟನ್ಸ್ ಪರ ಸ್ಪಿನ್ ಕಿಂಗ್ ರಶೀದ್ ಖಾನ್(3/22) ಉತ್ತಮ ಬೌಲಿಂಗ್ ದಾಳಿ ನಡೆಸಿದರೆ. ಚೊಚ್ಚಲ ಪಂದ್ಯವಾಡಿದ ದರ್ಶನ್ ನಲ್ಕಂಡೆ (2/37) ಗಮನ ಸೆಳೆದರು. ಉಳಿದಂತೆ ಲೂಕಿ ಫೆರ್ಗುಸನ್, ಮೊಹಮ್ಮದ್ ಶಮಿ ಹಾಗೂ ಹಾರ್ದಿಕ್ ಪಾಂಡ್ಯ ತಲಾ 1 ವಿಕೆಟ್ ಪಡೆದರು.