ಕ್ರಿಕೆಟರ್ ಆಗುವ ದೊಡ್ಡ ಕನಸು ಹೊತ್ತು ಚಿಕ್ಕ ವಯಸ್ಸಿನಲ್ಲೇ ಮನೆ ಬಿಟ್ಟು ಬಂದಿದ್ದ ಹಾಗೂ 2022ರ ಐಪಿಎಲ್ನಲ್ಲಿ ಗಮನಾರ್ಹ ಪ್ರದರ್ಶನ ನೀಡಿರುವ ಯುವ ಆಟಗಾರ 9 ವರ್ಷಗಳ ಬಳಿಕ ಮನೆಗೆ ತೆರಳುತ್ತಿದ್ದಾರೆ.
ಕ್ರಿಕೆಟ್ ಲೋಕದಲ್ಲಿ ಮಿಂಚುವ ನಿರೀಕ್ಷೆಯೊಂದಿಗೆ ಕಠಿಣ ಪರಿಶ್ರಮ, ನಿರಂತರ ಪ್ರಯತ್ನದಿಂದ ಶ್ರೀಮಂತ ಕ್ರಿಕೆಟ್ ಲೀಗ್ನಲ್ಲಿ ಆಡುವ ಅವಕಾಶ ಪಡೆದಿರುವ ಮುಂಬೈ ಇಂಡಿಯನ್ಸ್ ತಂಡದ ಕುಮಾರ್ ಕಾರ್ತಿಕೇಯಾ, 9 ವರ್ಷಗಳ ಬಳಿಕ ತಮ್ಮ ಮನೆಗೆ ತೆರಳುತ್ತಿದ್ದಾರೆ. ಪ್ರಸಕ್ತ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಹೊಸ ಸ್ಪಿನ್ ಸೆನ್ಸೇಷನ್ ಕುಮಾರ್ ಕಾರ್ತಿಕೇಯಾ, ತಮ್ಮ ಅದ್ಭುತ ಪ್ರದರ್ಶನದಿಂದ ತಂಡದಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ.
ಐಪಿಎಲ್ನ ಹೊಸ ಮಿಸ್ಟ್ರಿ ಸ್ಪಿನ್ನರ್ ಎಂದು ಕರೆಯಲಾಗುತ್ತಿರುವ ಎಡಗೈ ಲೆಗ್ ಸ್ಪಿನ್ನರ್ ಕಾರ್ತಿಕೇಯಾ, ಚಿಕ್ಕ ವಯಸ್ಸಿನಲ್ಲೇ ಮನೆ ಬಿಟ್ಟು ಬಂದಿದ್ದರು. ನಂತರ ದಿನಗೂಲಿ ಕೆಲಸ ಮಾಡಿಕೊಂಡು, ಕ್ರಿಕೆಟರ್ ಆಗಬೇಕೆಂಬ ಕನಸಿನ ಒಂದೊಂದೆ ಮೆಟ್ಟಿಲನ್ನೇರುತ್ತಾ ಮುಂದೆ ಬಂದಿದ್ದರು. ತಮ್ಮ ಕ್ರಿಕೆಟಿಂಗ್ ಟ್ಯಾಲೆಂಟ್ನಿಂದ ಗಮನ ಸೆಳೆದಿರುವ ಕಾರ್ತಿಕೇಯ, ಮುಂಬೈ ಇಂಡಿಯನ್ಸ್ ತಂಡದಲ್ಲಿ ಆಡುವ ದೊಡ್ಡ ಅವಕಾಶ ಪಡೆದು, ಗಮನಾರ್ಹ ಪ್ರದರ್ಶನ ನೀಡಿದ್ದಾರೆ.
ಲೈಫಲ್ಲಿ ಸಾಧನೆ ಮಾಡಿದ ನಂತರವಷ್ಟೇ ಮನೆಗೆ ಹೋಗವ ದೃಢ ನಿರ್ಧಾರ ಮಾಡಿ ಮನೆಬಿಟ್ಟು ಬಂದಿದ್ದ ಕುಮಾರ್ ಕಾರ್ತಿಕೇಯ, ಇದೀಗ ದೊಡ್ಡ ಸಕ್ಸಸ್ ಪಡೆಯುವ ಮೂಲಕ ಒಂಭತ್ತು ವರ್ಷಗಳ ಬಳಿಕ ಮನೆಗೆ ತೆರಳುತ್ತಿದ್ದಾರೆ. ಈ ಬಗ್ಗೆ ಮುಂಬೈ ಇಂಡಿಯನ್ಸ್ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ತಮ್ಮ ಜೀವನದ ಏರಿಳಿತಗಳ ಬಗ್ಗೆ ಹೇಳಿಕೊಂಡಿದ್ದಾರೆ.
“ನಾನು ಮನೆ ಬಿಟ್ಟು ಬಂದ ನಂತರ, ಜೀವನದಲ್ಲಿ ಏನಾದರೋ ಸಾಧಿಸಿಯೇ ಮನೆಗೆ ಹೋಗಬೇಕೆಂದು ನಿರ್ಧರಿಸಿದ್ದೆ. ಮುಂಬೈ ಇಂಡಿಯನ್ಸ್ ನನಗೆ ಸಾಕಷ್ಟು ಪ್ರೋತ್ಸಾಹ ನೀಡಿದೆ. ನನ್ನ ಬೌಲಿಂಗ್ ಬಂದಾಗ, ಯಾವುದೇ ಹಿಂಜರಿಕೆ ಇಲ್ಲದೇ ಬೌಲಿಂಗ್ ಮಾಡುವಂತೆ ಹೇಳಿದ್ದರು” ಎಂದು ಕಾರ್ತಿಕೇಯ ಹೇಳಿದ್ದಾರೆ.
“ನಾನು ಐಪಿಎಲ್ ಮ್ಯಾಚ್ ಆಡುತ್ತಿರುವ ಬಗ್ಗೆ ನನ್ನ ತಂದೆಗೆ ಹೇಳಿದ್ದೆ. ಅವರು ಈ ವಿಷಯವನ್ನ ತಮ್ಮ ಬೆಟಾಲಿಯನ್ಗೆ ಹೇಳಿದ್ದರು. ಮ್ಯಾಚ್ ಮುಗಿದ ನಂತರ ಅವರು ಆ ವಿಡಿಯೋವನ್ನ ನನಗೆ ಶೇರ್ ಮಾಡಿದ್ದರು, ಅದು ನನಗೆ ಅತ್ಯಂತ ಖುಷಿಕೊಟ್ಟಿತು”. ಅಲ್ಲದೇ ನಾನು ಐಪಿಎಲ್ ಮುಗಿದ ನಂತರ ಮನೆಗೆ ಹೋದಾಗ ಅಪ್ಪ-ಅಮ್ಮನ ಪ್ರತಿಕ್ರಿಯೆ ಹೇಗಿರುತ್ತೆ ಅನ್ನೋದನ್ನ ನೋಡಲು ನಾನು ತುಂಬಾ ಉತ್ಸುಕನಾಗಿದ್ದೇನೆ ಎಂದು ಕಾರ್ತಿಕೇಯ ಹೇಳಿದ್ದಾರೆ.