ಸನ್ರೈಸರ್ಸ್ ಹೈದ್ರಾಬಾದ್ ಬೌಲರ್ಗಳ ಶಿಸ್ತುಬದ್ಧ ಬೌಲಿಂಗ್ ನಡುವೆಯೂ ಆಂಡ್ರೆ ರಸೆಲ್(49*) ಬಿರುಸಿನ ಬ್ಯಾಟಿಂಗ್ ಹಾಗೂ ಇತರೆ ಬ್ಯಾಟ್ಸ್ಮನ್ಗಳ ಸಂಘಟಿತ ಪ್ರದರ್ಶನದ ನೆರವಿನಿಂದ ಕೊಲ್ಕತ್ತಾ ನೈಟ್ ರೈಡರ್ಸ್ 177 ರನ್ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿದೆ.
ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಕೆಕೆಆರ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ಬ್ಯಾಟ್ಸ್ಮನ್ಗಳ ವೈಫಲ್ಯಕ್ಕೆ ಸಿಲುಕಿದ ನೈಟ್ ರೈಡರ್ಸ್, 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 177 ರನ್ಗಳಿಸಿತು. ಕೊಲ್ಕತ್ತಾ ಪರ ಸ್ಯಾಮ್ ಬಿಲ್ಲಿಂಗ್ಸ್(34) ಹಾಗೂ ಆಂಡ್ರೆ ರಸೆಲ್(49*) ಉತ್ತಮ ಬ್ಯಾಟಿಂಗ್ ಮೂಲಕ ತಂಡಕ್ಕೆ ಆಸರೆಯಾದರು.
ಕೆಕೆಆರ್ ಪರ ಆರಂಭಿಕನಾಗಿ ಕಣಕ್ಕಿಳಿದ ವೆಂಕಟೇಶ್ ಅಯ್ಯರ್(7) ಬಹುಬೇಗನೆ ನಿರ್ಗಮಿಸಿದರು. ನಂತರ ಜೊತೆಯಾದ ಅಜಿಂಕ್ಯಾ ರಹಾನೆ(28) ಹಾಗೂ ನಿತೀಶ್ ರಾಣ(26) 2ನೇ ವಿಕೆಟ್ಗೆ 48 ರನ್ಗಳ ಉಪಯುಕ್ತ ಜೊತೆಯಾಟವಾಡಿದರು. ಬಳಿಕ ಕಣಕ್ಕಿಳಿದ ನಾಯಕ ಶ್ರೇಯಸ್ ಅಯ್ಯರ್(15) ತಮ್ಮ 100ನೇ ಐಪಿಎಲ್ ಪಂದ್ಯದಲ್ಲಿ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶಿಸುವಲ್ಲಿ ವಿಫಲವಾದರು. ಇವರ ಬೆನ್ನಲ್ಲೇ ರಿಂಕು ಸಿಂಗ್(5) ಸಹ ವಿಕೆಟ್ ಒಪ್ಪಿಸಿ ಹೊರ ನಡೆದರು. ಪರಿಣಾಮ ಕೆಕೆಆರ್ 95 ರನ್ಗಳಿಗೆ ಪ್ರಮುಖ 5 ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಆದರೆ 6ನೇ ವಿಕೆಟ್ಗೆ ಜೊತೆಯಾದ ಸ್ಯಾಮ್ ಬಿಲ್ಲಿಂಗ್ಸ್(34) ಹಾಗೂ ಆಂಡ್ರೆ ರಸೆಲ್(49*) ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಹೈದ್ರಾಬಾದ್ ಬೌಲರ್ಗಳ ಮೇಲೆ ಸ್ವಲ್ಪಮಟ್ಟಿನ ಹಿಡಿತ ಸಾಧಿಸಿದ ಈ ಜೋಡಿ 6ನೇ ವಿಕೆಟ್ಗೆ 63 ರನ್ಗಳ ಅದ್ಭುತ ಜೊತೆಯಾಟವಾಡಿ, ತಂಡದ ಮೊತ್ತವನ್ನ 150ರ ಗಡಿ ದಾಟಿಸಿದರು. ಆದರೆ ಕೊನೆ ಓವರ್ನಲ್ಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ರಸೆಲ್, 20 ರನ್ಗಳಿಸಿ ತಂಡದ ಮೊತ್ತವನ್ನ 177ಕ್ಕೆ ಏರಿಸಿದರು.
ಸನ್ರೈಸರ್ಸ್ ಹೈದ್ರಾಬಾದ್ ಪರ ಉತ್ತಮ ಬೌಲಿಂಗ್ ದಾಳಿ ನಡೆಸಿದ ಯುವ ವೇಗದ ಬೌಲರ್ ಉಮ್ರಾನ್ ಮಲ್ಲಿಕ್(3/33) ವಿಕೆಟ್ ಪಡೆದು ಮಿಂಚಿದರು. ಉಳಿದಂತೆ ಭುವನೇಶ್ವರ್(1/27), ಜಾನ್ಸನ್(1/30) ಹಾಗೂ ಟಿ.ನಟರಾಜನ್(1/43) ಉತ್ತಮ ಸಾಥ್ ನೀಡಿದರು.