IPL 2022 -KKR vs MI ಮುಂಬೈ ಇಂಡಿಯನ್ಸ್ – ಕೆಕೆಆರ್.. ಅಂಕಿ ಅಂಶಗಳಲ್ಲಿ ಯಾರು ಗ್ರೇಟ್..!

ಮುಂಬೈ ಇಂಡಿಯನ್ಸ್.. ಇಂಡಿಯನ್ ಪ್ರೀಮಿಯರ್ ಲೀಗ್ ನ ಅತ್ಯಂತ ಯಶಸ್ವಿ ತಂಡ. ಐದು ಬಾರಿ ಚಾಂಪಿಯನ್ ಪಟ್ಟಕ್ಕೇರಿದ್ದ ಹೆಗ್ಗಳಿಕೆ ರೋಹಿತ್ ಬಳಗದ್ದು.
ಆದ್ರೆ ಈ ಬಾರಿಯ ಐಪಿಎಲ್ ನ ಆರಂಭದಲ್ಲೇ ಮುಂಬೈ ಇಂಡಿಯನ್ಸ್ ಎಡವಿ ಬಿದ್ದಿದೆ. ಹಾಗೇ ನೋಡಿದ್ರೆ, ಮುಂಬೈ ಇಂಡಿಯನ್ಸ್ ತಂಡ ಐಪಿಎಲ್ ನ ಸ್ಲೋ ಸ್ಟಾರ್ಟರ್. ಆರಂಭದ ಪಂದ್ಯಗಳಲ್ಲಿ ಸೋತು ಮತ್ತೆ ಗೆಲುವಿನ ಓಟವನ್ನು ಮುಂದುವರಿಸುವ ಪರಿಪಾಠವನ್ನು ಹೊಂದಿದೆ.
ಆದ್ರೂ ಸಾಲು ಸಾಲು ಎರಡು ಸೋಲುಗಳು ಮುಂಬೈ ಇಂಡಿಯನ್ಸ್ ತಂಡದ ಆತ್ಮವಿಶ್ವಾಸಕ್ಕೆ ದಕ್ಕೆಯನ್ನುಂಟು ಮಾಡಿದೆ. ಯಾಕಂದ್ರೆ, ಈ ಬಾರಿಯ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಂಡಿದೆ. ಈ ಹಿಂದಿನಂತೆ ತಂಡ ಬಲಿಷ್ಠವಾಗಿ ಕಾಣುತ್ತಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಅನುಭವಿ ಮತ್ತು ಸ್ಥಿರತೆಯನ್ನು ಹೊಂದಿರುವಂತಹ ಬ್ಯಾಟ್ಸ್ ಮೆನ್ ಗಳ ಕೊರತೆ ಕಾಡುತ್ತಿದೆ. ಅದೇ ರೀತಿ ಬೌಲಿಂಗ್ ನಲ್ಲೂ ಕೂಡ ಸ್ಥಿರ ಪ್ರದರ್ಶನ ನೀಡುತ್ತಿಲ್ಲ. ಮುಖ್ಯವಾಗಿ ತಂಡಕ್ಕೆ ಸೂರ್ಯ ಕುಮಾರ್ ಯಾದವ್ ಅವರ ಅನುಪಸ್ಥಿತಿ ಎದ್ದು ಕಾಣುತ್ತಿದೆ. ಗಾಯದಿಂದ ಇನ್ನೂ ಚೇತರಿಸಿಕೊಳ್ಳದ ಕಾರಣ ಇಂದಿನ ಪಂದ್ಯಕ್ಕೂ ಸ್ಕೈ ಅವರು ಅಲಭ್ಯರಾಗಲಿದ್ದಾರೆ.
ಇನ್ನೊಂದೆಡೆ ಕೆಕೆಆರ್ ತಂಡ ಗೆಲುವಿನ ಆತ್ಮವಿಶ್ವಾಸದಲ್ಲಿದೆ. ತಂಡದಿಂದ ಸಾಂಘಿಕ ಆಟ ಹೊರಬಾರದೇ ಇದ್ರೂ ಕೂಡ ಅಚ್ಚರಿಯ ಗೆಲುವನ್ನು ಸಾಧಿಸಿದೆ. ಹೀಗಾಗಿ ಉಭಯ ತಂಡಗಳು ಈ ಹಿಂದಿನ ತಪ್ಪುಗಳನ್ನು ಸುಧಾರಿಸಿಕೊಂಡು ಈ ಪಂದ್ಯವನ್ನು ಆಡಬೇಕಿದೆ.
ಪುಣೆಯ ಎಮ್ ಸಿಎ ಅಂಗಣದಲ್ಲಿ ರಾತ್ರಿ 7.30ಕ್ಕೆ ನಡೆಯಲಿರುವ ಈ ಪಂದ್ಯ ಜಿದ್ದಾಜಿದ್ದಿನಿಂದ ಸಾಗುವುದರಲ್ಲಿ ಎರಡು ಮಾತಿಲ್ಲ.

ಇನ್ನು ಈ ಹಿಂದಿನ ಅಂಕಿ ಅಂಶಗಳನ್ನು ನೋಡುವುದಾದ್ರೆ ಕೆಕೆಆರ್ ಗೆ ಅಷ್ಟೊಂದು ಪೂರಕವಾಗಿಲ್ಲ. 2008ರಿಂದ ಇಲ್ಲಿಯವರೆಗೆ ಆಡಿರುವ 29 ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ತಂಡ 22 ಪಂದ್ಯಗಳನ್ನು ಗೆದ್ದಿದೆ. ಏಳು ಪಂದ್ಯಗಳನ್ನು ಮಾತ್ರ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಗೆದ್ದಿದೆ.
2021ರ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ತಲಾ ಒಂದೊಂದು ಪಂದ್ಯಗಳನ್ನು ಗೆದ್ದುಕೊಂಡಿದೆ. ಹಾಗೇ ಕಳೆದ ಮೂರು ಟೂರ್ನಿಗಳ ಅಂಕಿ ಅಂಶಗಳಲ್ಲಿ ಮುಂಬೈ ಇಂಡಿಯನ್ಸ್ ನಾಲ್ಕು ಪಂದ್ಯಗಳನ್ನು ಗೆದ್ರೆ, ಕೆಕೆಆರ್ ಎರಡು ಪಂದ್ಯಗಳಲ್ಲಿ ಮಾತ್ರ ಜಯ ಸಾಧಿಸಿದೆ.
ಕೆಕೆಆರ್ ತಂಡ ಮುಂಬೈ ಇಂಡಿಯನ್ಸ್ ವಿರುದ್ದ 232 ರನ್ ಗಳಿಸಿದ್ರೆ, ಮುಂಬೈ ಇಂಡಿಯನ್ಸ್ ತಂಡ ಕೆಕೆಆರ್ ವಿರುದ್ದ 210 ರನ್ ದಾಖಲಿಸಿರುವುದು ಗರಿಷ್ಠ ಸ್ಕೋರ್ ಆಗಿದೆ. ಹಾಗೇ 67 ರನ್ ಕೆಕೆಆರ್ ತಂಡದ ಕನಿಷ್ಠ ಸ್ಕೋರ್ ಆಗಿದ್ರೆ, ಮುಂಬೈ ಇಂಡಿಯನ್ಸ್ ತಂಡದ್ದು 108 ರನ್ ಕನಿಷ್ಠ ಸ್ಕೋರ್ ಆಗಿದೆ. IPL 2022: KKR vs MI – Head-to-head stats and records
ಒಟ್ಟಿನಲ್ಲಿ ಇವತ್ತಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಗೆಲ್ಲುವ ನೆಚ್ಚಿನ ತಂಡವಾಗಿದೆ. ಆದ್ರೂ ಕೆಕೆಆರ್ ಸಂಘಟಿತ ಆಟವನ್ನಾಡಿದ್ರೆ ಅಚ್ಚರಿಯ ಗೆಲುವು ದಾಖಲಿಸುವ ಸಾಧ್ಯತೆಗಳು ಹೆಚ್ಚಿವೆ. ಏನೇ ಆಗ್ಲಿ, ಹೈ ಸ್ಕೋರ್ ಮ್ಯಾಚ್ ಆಗುವುದರಲ್ಲಿ ಎರಡು ಮಾತಿಲ್ಲ.