ವೆಂಕಟೇಶ್ ಅಯ್ಯರ್(43) ಹಾಗೂ ನಿತೀಶ್ ರಾಣ(43) ಜವಾಬ್ದಾರಿಯ ಬ್ಯಾಟಿಂಗ್ ನಡುವೆಯೂ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಕೊಲ್ಕತ್ತಾ ನೈಟ್ ರೈಡರ್ಸ್, ಮುಂಬೈ ಇಂಡಿಯನ್ಸ್ ವಿರುದ್ದ 165 ರನ್ಗಳ ಪೈಪೋಟಿಯ ಮೊತ್ತ ಕಲೆಹಾಕಿದೆ.
ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಸೋತ ಕೆಕೆಆರ್ ಮೊದಲ ಬ್ಯಾಟಿಂಗ್ ಅವಕಾಶ ಪಡೆಯಿತು. ಪ್ರಮುಖ ಬ್ಯಾಟ್ಸ್ಮನ್ ಗಳ ವೈಫಲ್ಯಕ್ಕೆ ಸಿಲುಕಿದ ಕೊಲ್ಕತ್ತಾ ನೈಟ್ ರೈಡರ್ಸ್ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 165 ರನ್ ಕಲೆಹಾಕಿದೆ. ಕೆಕೆಆರ್ ಪರ ವೆಂಕಟೇಶ್ ಅಯ್ಯರ್(43), ನಿತೀಶ್ ರಾಣ(43) ಹಾಗೂ ರಿಂಕು ಸಿಂಗ್(23*) ತಂಡಕ್ಕೆ ಆಸರೆಯಾದರು.
ಕೆಕೆಆರ್ ಬಿರುಸಿನ ಆರಂಭ:
ಮೊದಲು ಬ್ಯಾಟಿಂಗ್ ಆರಂಭಿಸಿದ ಕೊಲ್ಕತ್ತಾ ನೈಟ್ ರೈಡರ್ಸ್ ಬಿರುಸಿನ ಆರಂಭ ಪಡೆಯಿತು. ಇನ್ನಿಂಗ್ಸ್ ಆರಂಭಿಸಿದ ವೆಂಕಟೇಶ್ ಅಯ್ಯರ್ 43 ರನ್(24 ಬಾಲ್, 3 ಬೌಂಡರಿ, 4 ಸಿಕ್ಸ್) ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಮುಂಬೈ ಬೌಲರ್ ಗಳ ಮೇಲೆ ಸಂಪೂರ್ಣ ಮೇಲುಗೈ ಸಾಧಿಸಿದ ವೆಂಕಟೇಶ್ ಅಯ್ಯರ್ ಅವರ ಅಬ್ಬರದ ಆಟ ಹಾಗೂ ಅಜಿಂಕ್ಯಾ ರಹಾನೆ(25) ಮೊದಲ ವಿಕೆಟ್ಗೆ 60 ರನ್ಗಳ ಭರ್ಜರಿ ಆರಂಭ ನೀಡಿದರು. ಆದರೆ ನಂತರ ಕಣಕ್ಕಿಳಿದ ನಾಯಕ ಶ್ರೇಯಸ್ ಅಯ್ಯರ್(6) ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು.
ನಂತರ ಕಣಕ್ಕಿಳಿದ ನಿತೀಶ್ ರಾಣ 43 ರನ್(26 ಬಾಲ್, 3 ಬೌಂಡರಿ, 4 ಸಿಕ್ಸ್) ಉತ್ತಮ ಬ್ಯಾಟಿಂಗ್ ಮೂಲಕ ತಂಡಕ್ಕೆ ಆಸರೆಯಾದರು. ಆದರೆ ನಾಯಕ ಶ್ರೇಯಸ್ ಅಯ್ಯರ್(6) ಹಾಗೂ ಆಂಡ್ರೆ ರಸೆಲ್(9) ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಮಧ್ಯಮ ಕ್ರಮಾಂಕದಲ್ಲಿ ಬಂದ ಬ್ಯಾಟ್ಸ್ಮನ್ ಗಳಲ್ಲಿ ರಿಂಕು ಸಿಂಗ್(23*) ಹೊರತಾಗಿ ಯಾವುದೇ ಆಟಗಾರರು ಎರಡಂಕ್ಕಿಯ ಮೊತ್ತ ಕಲೆಹಾಕಲಿಲ್ಲ. ಪರಿಣಾಮ ಶೆಲ್ಡನ್ ಜ್ಯಾಕ್ಸನ್(5), ಪ್ಯಾಟ್ ಕಮ್ಮಿನ್ಸ್(0), ಸುನೀಲ್ ನರೈನ್(0) ಹಾಗೂ ಟಿಮ್ ಸೌಥಿ(0) ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿದರು. ಅಂತಿಮವಾಗಿ ಕೆಕೆಆರ್ 20 ಓವರ್ಗಳಲ್ಲಿ 165 ರನ್ಗಳಿಸಲಷ್ಟೇ ಶಕ್ತವಾಯಿತು.
ಬುಮ್ರಾ ಮಾರಕ ದಾಳಿ:
ಪ್ರಸಕ್ತ ಐಪಿಎಲ್ ಆವೃತ್ತಿಯಲ್ಲಿ ಅಷ್ಟೇನು ಉತ್ತಮ ತೋರದ ಜಸ್ಪ್ರೀತ್ ಬುಮ್ರ(5/10) ತಮ್ಮ ಬೌಲಿಂಗ್ ಖದರ್ ತೋರಿದರು. ಆಕ್ರಮಣಕಾರಿ ಬೌಲಿಂಗ್ ದಾಳಿ ನಡೆಸಿದ ಬುಮ್ರಾ, ಕೆಕೆಆರ್ ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್ಗಳಿಗೆ ಕಡಿವಾಣ ಹಾಕಿದರು. ಇವರಿಗೆ ಉತ್ತಮ ಸಾಥ್ ನೀಡಿದ ಕಾರ್ತಿಕೇಯನ್ 2, ಡೆನಿಯಲ್ ಸ್ಯಾಮ್ಸ್ ಹಾಗೂ ಮುರುಗನ್ ಅಶ್ವಿನ್ ತಲಾ 1 ವಿಕೆಟ್ ಪಡೆದರು.