ಮುಂಬೈ ಇಂಡಿಯನ್ಸ್ ಬೌಲರ್ಗಳನ್ನ ಧೂಳಿಪಟ ಮಾಡಿದ ಜಾಸ್ ಬಟ್ಲರ್(100) ಸಿಡಿಲಬ್ಬರದ ಶತಕ ನೆರವಿನಿಂದ ರಾಜಸ್ಥಾನ್ ರಾಯಲ್ಸ್ 193 ರನ್ಗಳ ಬೃಹತ್ ಮೊತ್ತ ಕಲೆಹಾಕಿದೆ.
ಇಲ್ಲಿನ ಡಿ.ವೈ. ಪಾಟೀಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ಈ ಲೆಕ್ಕಾಚಾರವನ್ನ ತಲೆಕೆಳಗಾಗಿಸಿದ ರಾಜಸ್ಥಾನ ರಾಯಲ್ಸ್ ಬ್ಯಾಟ್ಸ್ಮನ್ಗಳು 20 ಓವರ್ಗಳಲ್ಲಿ 8 ವಿಕೆಟ್ಗೆ 193 ರನ್ ಕಲೆಹಾಕಿತು. ರಾಜಸ್ಥಾನ್ ಪರ ಜಾಸ್ ಬಟ್ಲರ್(100) ಅಬ್ಬರದ ಬ್ಯಾಟಿಂಗ್ ಮೂಲಕ ತಂಡಕ್ಕೆ ಆಸರೆಯಾದರು.
ಬಟ್ಲರ್ ಸ್ಪೋಟಕ ಬ್ಯಾಟಿಂಗ್
ಮೊದಲ ಬ್ಯಾಟಿಂಗ್ ಅವಕಾಶ ಪಡೆದ ರಾಜಸ್ಥಾನ್ ರಾಯಲ್ಸ್ ಪರ ಬಟ್ಲರ್ ಅಬ್ಬರ ಜೋರಾಗಿತ್ತು. ಇನ್ನಿಂಗ್ಸ್ ಆರಂಭದಿಂದಲೂ ಆರ್ಭಟಿಸಿದ ಜಾಸ್ ಬಟ್ಲರ್, ಮುಂಬೈ ಬೌಲರ್ಗಳನ್ನು ಮನಬಂದಂತೆ ದಂಡಿಸಿದರು. ಬೌಂಡರಿ, ಸಿಕ್ಸರ್ಗಳ ಮೂಲಕವೇ ರನ್ಗಳಿಸಿದ ಬಟ್ಲರ್, ಐಪಿಎಲ್ ಆವೃತ್ತಿಯಲ್ಲಿ ತಮ್ಮ 2ನೇ ಹಾಗೂ ಪ್ರಸಕ್ತ ಸೀಸನ್ನ ಮೊದಲ ಶತಕ ಬಾರಿಸಿ ಮಿಂಚಿದರು. ಸ್ಪೋಟಕ ಬ್ಯಾಟಿಂಗ್ನಿಂದ ಕಮಾಲ್ ಮಾಡಿದ ಜಾಸ್ ಬಟ್ಲರ್ 100 ರನ್ (68 ಎಸೆತ, 11 ಬೌಂಡರಿ, 5 ಸಿಕ್ಸರ್) ಸಿಡಿಸಿ ತಂಡದ ಮೊತ್ತವನ್ನ ಹೆಚ್ಚಿಸಿದರು.
ಹೆಟ್ಮಾಯೆರ್-ಸಂಜೂ ಕಮಾಲ್
ಇಂಗ್ಲೆಂಡ್ ಆಟಗಾರನಿಗೆ ತಕ್ಕ ಸಾಥ್ ನೀಡಿದ ನಾಯಕ ಸಂಜೂ ಸ್ಯಾಮ್ಸನ್ 30 ರನ್ (21 ಎಸೆತ, 1 ಬೌಂಡರಿ, 3 ಸಿಕ್ಸರ್) ಉಪಯುಕ್ತ ರನ್ಗಳಿಸಿದರು. ಅಲ್ಲದೇ 3ನೇ ವಿಕೆಟ್ಗೆ ಬಟ್ಲರ್ ಹಾಗೂ ಸ್ಯಾಮ್ಸನ್ 82 ರನ್ಗಳಿಸಿದರು. ನಂತರ ಬಂದ ಶಿಮ್ರಾನ್ ಹೆಟ್ಮಾಯೆರ್ 35 ರನ್(14 ಎಸೆತ, 3 ಬೌಂಡರಿ, 3 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. ತಂಡದ ರನ್ಗಳಿಕೆ ವೇಗಕ್ಕೆ ಚುರುಕು ನೀಡಿದ ಈ ಜೋಡಿ 4ನೇ ವಿಕೆಟ್ಗೆ 53 ರನ್ಗಳ ಅದ್ಭುತ ಜೊತೆಯಾಟವಾಡಿದರು. ಉಳಿದಂತೆ ಯಶಸ್ವಿ ಜೈಸ್ವಾಲ್(1), ಪಡಿಕ್ಕಲ್(7), ಅಶ್ವಿನ್(1), ಸೈನಿ(2), ಪರಾಗ್(5) ಯಾವುದೇ ಕಮಾಲ್ ಮಾಡಲಿಲ್ಲ. ಮುಂಬೈ ಇಂಡಿಯನ್ಸ್ ಪರ ಜಸ್ಪ್ರೀತ್ ಬುಮ್ರ (3/17), ಥೈಮಲ್ ಮಿಲ್ಸ್ (3/35) ಯಶಸ್ವಿ ಬೌಲರ್ ಎನಿಸಿದರೆ. ಕೈರನ್ ಪೊಲಾರ್ಡ್ ತಲಾ 1 ವಿಕೆಟ್ ಪಡೆದರು.