ಈ ಬಾರಿಯ ಐಪಿಎಲ್ ರವೀಂದ್ರ ಜಡೇಜಾ ಪಾಲಿಗೆ ನಿಜಕ್ಕೂ ಬೇಸರದ ಟೂರ್ನಿಯಾಗಲಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕ್ಯಾಪ್ಟನ್ ಜವಾಬ್ದಾರಿ ಸಿಕ್ಕರೂ, ನಂತರದಲ್ಲಿ ನಾಯಕತ್ವದಿಂದ ಕೆಳಗಿಳಿದಿದ್ದ ಸ್ಟಾರ್ ಆಲ್ರೌಂಡರ್ ಇದೀಗ ಪಂದ್ಯಾವಳಿಯಿಂದಲೇ ಹೊರಗುಳಿಯುವಂತಾಗಿದೆ.
ಇತ್ತೀಚೆಗೆ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದಲ್ಲಿ ಫೀಲ್ಡಿಂಗ್ ವೇಳೆ ರವೀಂದ್ರ ಜಡೇಜಾ ಅವರ ಎಡಗೈ ಭುಜದ ಭಾಗಕ್ಕೆ ಗಾಯವಾಗಿತ್ತು. ಇದೇ ಕಾರಣದಿಂದಾಗಿ ಕಳೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಿಂದ ರವೀಂದ್ರ ಜಡೇಜಾ ತಂಡದಿಂದ ಹೊರಗುಳಿದಿದ್ದರು. ಆದರೆ ಗಾಯದ ಸಮಸ್ಯೆಯಿಂದ ರವೀಂದ್ರ ಜಡೇಜಾ ಸಂಪೂರ್ಣವಾಗಿ ಗುಣಮುಖರಾಗಿಲ್ಲ. ಹೀಗಾಗಿ ಆಲ್ರೌಂಡರ್ ಜಡೇಜಾ, 15ನೇ ಆವೃತ್ತಿಯ ಐಪಿಎಲ್‌ನ ಮುಂದಿನ ಪಂದ್ಯಗಳಿಂದ ಹೊರಗುಳಿಯುವ ಸಾಧ್ಯತೆ ಹೆಚ್ಚಾಗಿದೆ.
ರವೀಂದ್ರ ಜಡೇಜಾ ಅವರು ಶೀಘ್ರವಾಗಿ ಗುಣಮುಖರಾಗಲಿದ್ದಾರೆ ಎಂದು ಚೆನ್ನೈ ಸೂಪರ್ ಕಿಂಗ್ಸ್, ಮ್ಯಾನೇಜ್ಮೆಂಟ್ ಅಂದಾಜಿಸಿತ್ತು. ಆದರೆ ರವೀಂದ್ರ ಜಡೇಜಾ ಸಂಪೂರ್ಣವಾಗಿ ಗುಣಮುಖರಾಗಿಲ್ಲ. ಈ ನಡುವೆ ಐಪಿಎಲ್ ಪಂದ್ಯಾವಳಿ ಸಹ ಮುಕ್ತಾಯದ ಹಂತಕ್ಕೆ ಬಂದಿದ್ದು, ಸಿಎಸ್‌ಕೆ ತಂಡದ ಪ್ಲೇ-ಆಫ್ ಪ್ರವೇಶಿಸುವ ಅವಕಾಶ ಅಷ್ಟೇನು ಸುಲಭವಾಗಿಲ್ಲ. ಹೀಗಾಗಿ ಸಿಎಸ್‌ಕೆ ಮ್ಯಾನೇಜ್ಮೆಂಟ್ ಸಹ ಜಡೇಜಾ ವಿಷಯದಲ್ಲಿ ರಿಸ್ಕ್ ತೆಗೆದುಕೊಳ್ಳಲು ಸಿದ್ಧವಿಲ್ಲ. ಚೆನ್ನೈ ತಂಡದ ಮೇ 12ರಂದು ನಡೆಯುವ ಪಂದ್ಯದಲ್ಲಿ ಮುಂಬೈ ತಂಡವನ್ನು ಎದುರಿಸಲಿದೆ.
2022ರ ಐಪಿಎಲ್ ಪಂದ್ಯಾವಳಿ ರವೀಂದ್ರ ಜಡೇಜಾ ಪಾಲಿಗೆ ಸದಾ ನೆನಪಿನಲ್ಲಿ ಉಳಿಯುವ ಟೂರ್ನಿಯಾಗುವುದಿಲ್ಲ. ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ವಿಭಾಗದಲ್ಲೂ ನಿರೀಕ್ಷಿತ ಪ್ರದರ್ಶನ ನೀಡದ ಜಡೇಜಾ, 10 ಪಂದ್ಯಗಳಲ್ಲಿ 19.33 ಬ್ಯಾಟಿಂಗ್ ಸರಾಸರಿಯಲ್ಲಿ ಕೇವಲ 116 ರನ್‌ಗಳಿಸಿದ್ದು, ಬೌಲಿಂಗ್‌ನಲ್ಲಿ ಕೇವಲ 5 ವಿಕೆಟ್ ಪಡೆದಿದ್ದಾರೆ. ಹೀಗಾಗಿ ಐಪಿಎಲ್‌ನ ಮುಂದಿನ ಪಂದ್ಯಗಳಿಂದ ಹೊರಗುಳಿಯಲಿರುವ ರವೀಂದ್ರ ಜಡೇಜಾ, ಸೂಕ್ತ ವಿಶ್ರಾಂತಿ ಬಳಿಕ ಮುಂದಿನ ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯುವ ಟಿ20 ವಿಶ್ವಕಪ್‌ಗೆ ಟೀಂ ಇಂಡಿಯಾಕ್ಕೆ ಕಮ್‌ಬ್ಯಾಕ್ ಮಾಡುವ ಸಾಧ್ಯತೆ ಇದೆ.