ಟೀಂ ಇಂಡಿಯಾದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಈ ಬಾರಿಯ ಐಪಿಎಲ್‌ನಲ್ಲಿ ನಿರೀಕ್ಷಿತ ಸಕ್ಸಸ್ ಕಂಡಿಲ್ಲ. ಮುಂಬೈ ಇಂಡಿಯನ್ಸ್‌ನ ಬೌಲಿಂಗ್ ಅಸ್ತ್ರವಾಗಿರುವ ಬುಮ್ರಾ, ಫಾರ್ಮ್ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಆದರೆ ಇವೆಲ್ಲದಕ್ಕೂ ಡೋಂಟ್ ಕೇರ್ ಎಂದಿರುವ ಯುವ ವೇಗಿ, ತಮ್ಮ ಬೌಲಿಂಗ್ ಲಯದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.
15ನೇ ಆವೃತ್ತಿಯ ಐಪಿಎಲ್‌ನ ಏಳು ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್‌ನ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ, ಯಾವುದೇ ವಿಕೆಟ್ ಪಡೆದಿರಲಿಲ್ಲ. ಆದರೆ ಉಳಿದ ಮೂರು ಪಂದ್ಯಗಳಲ್ಲಿ ಐದು ವಿಕೆಟ್ ಪಡೆದಿದ್ದ ಬುಮ್ರಾ, ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ದಾಳಿ ನಡೆಸಿದರು. ಕೇವಲ ಹತ್ತು ರನ್ ನೀಡಿದ ಐದು ವಿಕೆಟ್ ಕಬಳಿಸುವ ಮೂಲಕ ದಾಖಲೆ ಸೃಷ್ಟಿಸಿದ ಅವರು, ಭರ್ಜರಿ ಕಮ್‌ಬ್ಯಾಕ್ ಮಾಡಿದ್ದಾರೆ.

ನನಗೆ ಸಂತೋಷವಾಗಿದೆ:
2022ರ ಐಪಿಎಲ್‌ನಲ್ಲಿ ತಮ್ಮ ಪ್ರದರ್ಶನದ ಬಗ್ಗೆ ಮಾತನಾಡಿರುವ ಜಸ್ಪ್ರೀತ್ ಬುಮ್ರಾ, ಟೂರ್ನಿಯಲ್ಲಿನ ನನ್ನ ಬೌಲಿಂಗ್ ಲಯದಿಂದ ಸಂತೋಷವಾಗಿದೆ. ಹೊರಗಿನ ಟೀಕೆಗಳು ಹೆಚ್ಚಾಗಿ ನನ್ನನ್ನು ಕಾಡುವುದಿಲ್ಲ. ನನ್ನ ಪ್ರದರ್ಶನದ ಬಗ್ಗೆ ನಾನು ವೈಯಕ್ತಿಕವಾಗಿ ಮೌಲ್ಯಮಾಪನ ಮಾಡುತ್ತೇನೆ. ವೈಯಕ್ತಿಕವಾಗಿ ನನಗೆ ಪಂದ್ಯಾವಳಿಯ ಉದ್ದಕ್ಕೂ ನೀಡುತ್ತಿರುವ ಬೌಲಿಂಗ್ ಲಯದಿಂದ ಸಂತೋಷ ತಂದಿದೆ ಎಂದು ಕೆಕೆಆರ್ ವಿರುದ್ಧದ ನಂತರ ನಡೆದ ಪ್ರೆಸ್ ಕಾನ್ಫರೆನ್ಸ್‌ನಲ್ಲಿ ಬುಮ್ರಾ ಹೇಳಿದರು.
ಪ್ರತಿ ಪಂದ್ಯಕ್ಕಾಗಿ ನಾವು ತಯಾರಿ ನಡೆಸುತ್ತೇವೆ ಮತ್ತು ನಮ್ಮದೇ ಪ್ರಕ್ರಿಯೆ ಹೊಂದಿದ್ದೇವೆ. ನಾವೆಂದೂ ಅಂತಿಮ ಫಲಿತಾಂಶದ ನಿರೀಕ್ಷೆಯೊಂದಿಗೆ ಆಡುವುದಿಲ್ಲ, ಬದಲಾಗಿ ತಂಡಕ್ಕೆ ಕೊಡುಗೆ ನೀಡುವ ಮೂಲಕ ಫಲಿತಾಂಶ ನೋಡುತ್ತೇವೆ. ನಮ್ಮದು ಹೊಸ ತಂಡವಾಗಿದ್ದು, ನಮ್ಮದೇ ಸ್ವಂತಃ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಅರ್ಥ ಮಾಡಿಕೊಳ್ಳುತ್ತೇವೆ ಎಂದು ಮುಂಬೈ ಇಂಡಿಯನ್ಸ್ ತಂಡದ ಪ್ರದರ್ಶನದ ಬಗ್ಗೆ ಜಸ್ಪ್ರೀತ್ ಬುಮ್ರಾ ಹೇಳಿದರು.