15ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಅದ್ದೂರಿ ತೆರೆಬಿದ್ದಿದ್ದು, ಗುಜರಾತ್ ಟೈಟನ್ಸ್ 2022ರ ಚಾಂಪಿಯನ್ ತಂಡವಾಗಿ ಹೊರಹೊಮ್ಮಿದೆ. ಆದರೆ 2022ರ ಐಪಿಎಲ್‌ನಲ್ಲಿ ಇಂಟ್ರೆಸ್ಟಿಂಗ್ ಅಂಕಿ ಅಂಶಗಳು ದಾಖಲಾಗಿವೆ.

ಅರ್ಧಶತಕ ಬರಲಿಲ್ಲ:
2022ರ ಐಪಿಎಲ್‌ನಲ್ಲಿ ನೀರಸ ಪ್ರದರ್ಶನ ನೀಡಿದ ಮುಂಬೈ ಇಂಡಿಯನ್ಸ್ ಮೊದಲ ತಂಡವಾಗಿ ಟೂರ್ನಿಯಿಂದ ಹೊರಬಿದ್ದಿತು. ಮುಂಬೈ ತಂಡದ ನಾಯಕ ರೋಹಿತ್ ಶರ್ಮ ಅವರಿಗೂ ಈ ಸೀಸನ್‌ನಲ್ಲಿ ನಿರೀಕ್ಷಿತ ಸಕ್ಸಸ್ ಕೊಡಲಿಲ್ಲ. ಐಪಿಎಲ್‌ನಲ್ಲಿ ಅದ್ಭುತ ದಾಖಲೆ ಹೊಂದಿರುವ ಹಿಟ್ ಮ್ಯಾನ್, ಈ ಬಾರಿ 14 ಪಂದ್ಯಗಳನ್ನ ಆಡಿದರು ಒಂದೇ ಒಂದು ಅರ್ಧಶತಕ ಗಳಿಸಲಿಲ್ಲ.

ಮೂರು ಬಾರಿ ಡಕೌಟ್:
ಆರ್‌ಸಿಬಿ ತಂಡದ ಬ್ಯಾಟಿಂಗ್ ಶಕ್ತಿಯಾಗಿರುವ ವಿರಾಟ್ ಕೊಹ್ಲಿಗೆ 2022ರ ಐಪಿಎಲ್‌ಯಲ್ಲಿ ಅಂದುಕೊಂಡಷ್ಟು ಯಶಸ್ಸು ಸಿಗಲಿಲ್ಲ. ಸೀಸನ್ ಉದ್ದಕ್ಕೂ ಫಾರ್ಮ್ ಕೊರತೆ ಎದುರಿಸಿದ ಕಿಂಗ್ ಕೊಹ್ಲಿ, ಈ ಸೀಸನ್‌ನಲ್ಲಿ ಮೂರು ಬಾರಿ ಡಕೌಟ್ ಆಗಿ ನಿರಾಸೆ ಅನುಭವಿಸಿದರು.

ಮೊದಲ ಹೆಜ್ಜೆಯಲ್ಲೇ ಸಕ್ಸಸ್:
2022ರ ಐಪಿಎಲ್ ಟೂರ್ನಿಗೆ ಹೊಸ ತಂಡವಾಗಿ ಸೇರ್ಪಡೆಯಾದ ಗುಜರಾತ್ ಟೈಟನ್ಸ್, ಮೊದಲ ಹೆಜ್ಜೆಯಲ್ಲೇ ಸಕ್ಸಸ್ ಕಂಡಿದೆ. ಆಡಿದ ಮೊದಲ ಸೀಸನ್‌ನಲ್ಲೇ ಚಾಂಪಿಯನ್ ಪಟ್ಟಕ್ಕೇರುವ ಮೂಲಕ ಗಮನ ಸೆಳೆಯಿತು. ಗುಜರಾತ್ ತಂಡವನ್ನ ಮುನ್ನಡೆಸುವ ಜವಾಬ್ದಾರಿ ಹೊತ್ತ ಹಾರ್ದಿಕ್ ಪಾಂಡ್ಯ, ಮೊದಲ ಪ್ರಯತ್ನದಲ್ಲೇ ಭರ್ಜರಿ ಯಶಸ್ಸು ಕಂಡಿದ್ದಾರೆ.
ಒಂದೇ ತಂಡಕ್ಕೆ ಆರೆಂಜ್-ಪರ್ಪಲ್ ಕ್ಯಾಪ್:
15ನೇ ಆವೃತ್ತಿಯ ಐಪಿಎಲ್‌ನ ಫೈನಲ್‌ನಲ್ಲಿ ಮುಗ್ಗರಿಸಿದ ರಾಜಸ್ಥಾನ್ ರಾಯಲ್ಸ್, ಭಾರೀ ನಿರಾಸೆ ಮೂಡಿಸಿತು. ಆದರೆ ಟೂರ್ನಿಯಲ್ಲಿ ನೀಡುವ “ಆರೆಂಜ್ ಕ್ಯಾಪ್” ಹಾಗೂ “ಪರ್ಪಲ್ ಕ್ಯಾಪ್” ರಾಜಸ್ಥಾನ್ ಪಾಲಾಯಿತು. ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಜಾಸ್ ಬಟ್ಲರ್(863 ರನ್‌ಗಳು) ಆರೆಂಜ್ ಕ್ಯಾಪ್ ಪಡೆದರೆ, ಯುಜುವೇಂದ್ರ ಚಹಲ್(27 ವಿಕೆಟ್ಸ್) ಪರ್ಪಲ್ ಕ್ಯಾಪ್ ಪಡೆದರು.

ರವೀಂದ್ರ ಜಡೇಜಾ ವೈಫಲ್ಯ:
ಸಿಎಸ್‌ಕೆ ತಂಡದ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ 2022ರ ಐಪಿಎಲ್ ಟೂರ್ನಿಯಲ್ಲಿ ಏಳು-ಬೀಳುಗಳನ್ನು ಅನುಭವಿಸಿದರು. ಸೀಸನ್ ಆರಂಭಕ್ಕೂ ಮೊದಲೇ ಚೆನ್ನೈ ತಂಡವನ್ನ ಮುನ್ನಡೆಸುವ ಜವಾಬ್ದಾರಿ ಜಡೇಜಾ ಅವರಿಗೆ ಒಲಿದು ಬಂತು. ಆದರೆ ಕ್ಯಾಪ್ಟನ್ ಆದ ಬಳಿಕ ಒತ್ತಡಕ್ಕೆ ಸಿಲುಕಿದ ಜಡೇಜಾ, ತಮ್ಮ ಅಸಲಿ ಖದರ್ ತೋರುವಲ್ಲಿ ವಿಫಲರಾದರು. ಬ್ಯಾಟಿಂಗ್, ಬೌಲಿಂಗ್ ಜೊತೆಗೆ ಫೀಲ್ಡಿಂಗ್‌ನಲ್ಲೂ ವೈಫಲ್ಯ ಕಂಡ ರವೀಂದ್ರ ಜಡೇಜಾ, ಟೂರ್ನಿಯ ಮಧ್ಯದಲ್ಲಿ ನಾಯಕತ್ವದಿಂದ ಕೆಳಗಿಳಿಯುವ ಜೊತೆಗೆ ಗಾಯದ ಸಮಸ್ಯೆ ಕಾರಣಕ್ಕೆ ಟೂರ್ನಿಯಿಂದಲೇ ಹೊರಬಿದ್ದರು.

ಸಾವಿರಕ್ಕೂ ಅಧಿಕ ಸಿಕ್ಸ್‌ಗಳು:
ಹೊಡಿಬಡಿ ಆಟಕ್ಕೆ ಹೆಸರಾಗಿರುವ ಐಪಿಎಲ್‌ನ ಈ ಸೀಸನ್‌ನಲ್ಲಿ ಮೊಟ್ಟ ಮೊದಲ ಬಾರಿಗೆ 1000ಕ್ಕೂ ಹೆಚ್ಚು ಸಿಕ್ಸರ್‌ಗಳು ದಾಖಲಾಯಿತು. ಹತ್ತು ತಂಡಗಳ ನಡುವೆ ನಡೆದ ಪ್ರಬಲ ಪೈಪೋಟಿಯಿಂದಾಗಿ ಈ ಆವೃತ್ತಿಯಲ್ಲಿ ಒಟ್ಟು 1062 ಸಿಕ್ಸ್‌ಗಳು ದಾಖಲಾಯಿತು. ಟೂರ್ನಿಯ ಕೊನೆಯ ರನ್ ಸಹ ಸಿಕ್ಸ್ ಮೂಲಕವೇ ಬಂದಿದ್ದು ವಿಶೇಷ.