2022ರ ಐಪಿಎಲ್ ಆರಂಭಕ್ಕೂ ಮುನ್ನ ನಡೆದ ಮೆಗಾ ಹರಾಜಿನಲ್ಲಿ ಹಲವು ಆಟಗಾರರು ಹಳೆಯ ತಂಡಗಳಲ್ಲೇ ಉಳಿದುಕೊಂಡಿದ್ದರು. ಆದರೆ ರಿಟೈನ್ ಮಾಡಿಕೊಂಡ ಹಲವು ಸ್ಟಾರ್ ಆಟಗಾರರು ತಮ್ಮ ಫ್ರಾಂಚೈಸಿಗಳಿಗೆ ನಿರೀಕ್ಷಿತ ಸಕ್ಸಸ್ ತಂದುಕೊಡುವಲ್ಲಿ ವೈಫಲರಾಗಿದ್ದಾರೆ.
ಕೊಲ್ಕತ್ತಾ ನೈಟ್ ರೈಡರ್ಸ್: ಈ ಬಾರಿಯ ಹರಾಜಿನಲ್ಲಿ ಕೆಕೆಆರ್, ಸುನೀಲ್ ನರೈನ್, ವೆಂಕಟೇಶ್ ಅಯ್ಯರ್, ವರುಣ್ ಚಕ್ರವರ್ತಿ ಹಾಗೂ ಆಂಡ್ರೆ ರಸೆಲ್ ಅವರನ್ನ ರಿಟೈನ್ ಮಾಡಿಕೊಂಡಿತ್ತು. ಆದರೆ ವೆಂಕಟೇಶ್ ಅಯ್ಯರ್(182 ರನ್ಗಳು), ವರುಣ್ ಚಕ್ರವರ್ತಿ(6 ವಿಕೆಟ್ಸ್) ನಿರೀಕ್ಷೆಗೆ ತಕ್ಕಂತೆ ಆಟವಾಡಲಿಲ್ಲ. ರಸೆಲ್ ಹಾಗೂ ನರೇನ್, ದೊಡ್ಡ ಸಕ್ಸಸ್ ಕಾಣದಿದ್ದರು, ಕೆಲವು ಸಂದರ್ಭಗಳಲ್ಲಿ ತಂಡದ ಕೈಹಿಡಿದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು:
ಆರ್ಸಿಬಿ 15ನೇ ಸೀಸನ್ಗಾಗಿ ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್ವೆಲ್, ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್ ಅವರನ್ನ ರಿಟೈನ್ ಮಾಡಿತ್ತು. ಆದರೆ ಸೀಸನ್ ಉದ್ದಕ್ಕೂ ಫಾರ್ಮ್ ಕೊರತೆ ಎದುರಿಸಿದ ಕೊಹ್ಲಿ(341 ರನ್ಗಳು) ಮತ್ತು ಸಿರಾಜ್(9 ವಿಕೆಟ್ಸ್) ಅಂದುಕೊಂಡಂತೆ ಆಡಲಿಲ್ಲ. ಗ್ಲೆನ್ ಮ್ಯಾಕ್ಸ್ವೆಲ್ ಹಾಗೂ ಹರ್ಷಲ್ ಪಟೇಲ್ ಸಹ ಇದೇ ಹಾದಿಯಲ್ಲಿ ಸಾಗಿದರು.

ಸನ್ರೈಸರ್ಸ್ ಹೈದ್ರಾಬಾದ್:
ಎಸ್ಆರ್ಎಚ್ ತಂಡದಲ್ಲಿ ಉಳಿದ ಕೇನ್ ವಿಲಿಯಂಸನ್ ಈ ಐಪಿಎಲ್ನಲ್ಲಿ ಭಾರೀ ನಿರಾಸೆ ಅನುಭವಿಸಿದರು. ಸಂಪೂರ್ಣ ಬ್ಯಾಟಿಂಗ್ ಲಯ ಕಳೆದುಕೊಂಡ ವಿಲಿಯಂಸನ್ ಏಕೈಕ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಲಿಲ್ಲ. ಬೌಲಿಂಗ್ನಲ್ಲಿ ಭುವನೇಶ್ವರ್, ಟಿ.ನಟರಾಜನ್ ಅವರಿಂದಲೂ ಹೇಳಿಕೊಳ್ಳುವ ಪ್ರದರ್ಶನ ಮೂಡಿ ಬರಲಿಲ್ಲ. ಉಮ್ರಾನ್ ಮಲ್ಲಿಕ್ ಮಾತ್ರ ಅದ್ಭುತ ಪ್ರದರ್ಶನ ನೀಡುವ ಮೂಲಕ ಎಲ್ಲರ ಗಮನ ಸೆಳೆದರು.
ಪಂಜಾಬ್ ಕಿಂಗ್ಸ್:
ಈ ಬಾರಿ ಪಂಜಾಬ್ ಕಿಂಗ್ಸ್ ತಂಡದಲ್ಲೇ ಉಳಿದ ಕನ್ನಡಿಗ ಮಯಂಕ್ ಅಗರ್ವಾಲ್ ಸೀಸನ್ ಉದ್ದಕ್ಕೂ ವೈಫಲ್ಯವನ್ನೇ ಅನುಭವಿಸಿದರು. ವೈಯಕ್ತಿಕ ಪ್ರದರ್ಶನದ ಜೊತೆಗೆ ನಾಯಕನಾಗಿ ತಂಡವನ್ನ ಮುನ್ನಡೆಸುವಲ್ಲಿಯೂ ಮಯಂಕ್ ಸಕ್ಸಸ್ ಪಡೆಯಲಿಲ್ಲ. ಕಳೆದೆರಡು ಸೀಸನ್ಗಳಲ್ಲಿ ಮಿಂಚಿದ್ದ ಮಯಂಕ್, ಈ ಬಾರಿ ಗಳಿಸಿದ್ದ ಕೇವಲ 196 ರನ್ಗಳಷ್ಟೇ. ಬೌಲಿಂಗ್ನಲ್ಲಿ ಅರ್ಶದೀಪ್ ಸಿಂಗ್ ಎಂದಿನಂತೆ ಡೆತ್ ಓವರ್ಗಳಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾದರು.

ಚೆನ್ನೈ ಸೂಪರ್ ಕಿಂಗ್ಸ್:
ಈ ಬಾರಿಯ ಐಪಿಎಲ್ನಲ್ಲಿ ಸಿಎಸ್ಕೆ ತಂಡದ ಹಣಬರಹವೇ ಸರಿ ಇರಲಿಲ್ಲ. ಚೆನ್ನೈ ತಂಡದಲ್ಲೇ ಉಳಿದ ರವೀಂದ್ರ ಜಡೇಜಾ, ಎಲ್ಲಾ ವಿಭಾಗದಲ್ಲೂ ವೈಫಲ್ಯ ಕಂಡಿದ್ದು ನಿಜಕ್ಕೂ ಬೇಸರದ ವಿಷಯ. ತಂಡದ ನಾಯಕತ್ವದ ಜವಾಬ್ದಾರಿ ಸಿಕ್ಕರೂ ಈ ಅವಕಾಶವನ್ನ ಅರ್ಧಕ್ಕೆ ಕೈಚಲ್ಲಿದ ಆಲ್ರೌಂಡರ್, ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ನಲ್ಲಿ ಮುಗ್ಗರಿಸಿದರು. ಇನ್ನೂ ಧೋನಿ, ಋತುರಾಜ್ ಹಾಗೂ ಮೊಯಿನ್ ಅಲಿ, ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಲಿಲ್ಲ.
ಮುಂಬೈ ಇಂಡಿಯನ್ಸ್:
ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಸೀಸನ್ ಉದ್ದಕ್ಕೂ ಆಘಾತವನ್ನೇ ಅನುಭವಿಸಿತು. ನಾಯಕ ರೋಹಿತ್ ಶರ್ಮ, ಜಸ್ಪ್ರೀತ್ ಬುಮ್ರ ಒಂದೆರೆಡು ಪಂದ್ಯಗಳಲ್ಲಿ ಮಿಂಚಿ ಸುಮ್ಮನಾದರೆ, ಕೈರನ್ ಪೊಲಾರ್ಡ್ ತಂಡದಲ್ಲಿ ಇದ್ದು ಇಲ್ಲದಂತೆ ಸೀಸನ್ ಮುಗಿಸಿದರು. ಇನ್ನು ಸೀಸನ್ ಉದ್ದಕ್ಕೂ ಗಾಯದ ಸಮಸ್ಯೆಯಿಂದ ಬಳಲಿದ ಸೂರ್ಯಕುಮಾರ್ ಯಾದವ್, ತಮ್ಮ ಮೇಲಿನ ನಿರೀಕ್ಷೆ ಹುಸಿ ಮಾಡಲಿಲ್ಲ.

ರಾಜಸ್ಥಾನ್ ರಾಯಲ್ಸ್:
ಇಡೀ ಸೀಸನ್ನಲ್ಲಿ ರಾಜಸ್ಥಾನ್ ರಾಯಲ್ಸ್ ರೀಟೈನ್ ಮಾಡಿದ ಆಟಗಾರರು ಮಾತ್ರವೇ ತಮ್ಮ ಮೇಲಿನ ನಂಬಿಕೆ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಜಾಸ್ ಬಟ್ಲರ್, ಸಂಜೂ ಸ್ಯಾಮ್ಸನ್ ಹಾಗೂ ಯಶಸ್ವಿ ಜೈಸ್ವಾಲ್, ಶ್ರೇಷ್ಠ ಪ್ರದರ್ಶನದ ಮೂಲಕ ತಂಡಕ್ಕೆ ಯಶಸ್ಸು ತಂದುಕೊಟ್ಟರು.
ಡೆಲ್ಲಿ ಕ್ಯಾಪಿಟಲ್ಸ್:
ಕಳೆದೆರಡು ಸೀಸನ್ನಲ್ಲಿ ದೊಡ್ಡ ಸಕ್ಸಸ್ ಕಂಡಿದ್ದ ಡೆಲ್ಲಿ ಕ್ಯಾಪಿಟಲ್ಸ್, ಈ ಬಾರಿ ಹೆಚ್ಚು ಸದ್ದು ಮಾಡಲಿಲ್ಲ. ತಂಡದಲ್ಲೇ ಉಳಿದ ರಿಷಬ್ ಪಂತ್, ಬ್ಯಾಟಿಂಗ್ ಜೊತೆಗೆ ನಾಯಕತ್ವದಲ್ಲೂ ಸಾಕಷ್ಟು ತಪ್ಪುಗಳನ್ನ ಮಾಡಿದರೆ. ಪೃಥ್ವಿ ಶಾ ಬೆರಳೆಣಿಕೆ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದರು.