IPL – 2022- ಗುಜರಾತ್ ಟೈಟಾನ್ಸ್ ಸೋಲಿಸಬೇಕು.. ಡೆಲ್ಲಿ ಕ್ಯಾಪಿಟಲ್ಸ್ ಗೆಲ್ಲಬಾರದು..! ಇದು ಆರ್ ಸಿಬಿ ಲೆಕ್ಕಚಾರ..!

15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಗುಜರಾತ್ ಟೈಟಾನ್ಸ್, ರಾಜಸ್ತಾನ ರಾಯಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಪ್ಲೇ ಆಫ್ ಪ್ರವೇಶ ಖಚಿತವಾಗಿದೆ.
ಇನ್ನುಳಿದ ಒಂದು ಸ್ಥಾನಕ್ಕಾಗಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವೆ ಪೈಪೋಟಿ ಇದೆ. ರನ್ ರೇಟ್ ಆಧಾರದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಒಂದು ಹೆಜ್ಜೆ ಮುಂದಿದೆ. ಹೀಗಾಗಿ ಅಂಕಪಟ್ಟಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನಾಲ್ಕನೇ ಸ್ಥಾನದಲ್ಲಿದ್ರೆ, ಆರ್ ಸಿಬಿ ಐದನೇ ಸ್ಥಾನದಲ್ಲಿದೆ.
ಈಗಾಗಲೇ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಆರ್ ಸಿಬಿ ತಂಡಗಳು 13 ಪಂದ್ಯಗಳನ್ನು ಆಡಿವೆ. ಇದರಲ್ಲಿ ತಲಾ ಏಳು ಪಂದ್ಯಗಳಲ್ಲಿ ಗೆದ್ದುಕೊಂಡ್ರೆ, ಆರು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ರನ್ ರೇಟ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪ್ಲಸ್ ನಲ್ಲಿದ್ರೆ, ಆರ್ ಸಿಬಿ ಮೈನಸ್ ನಲ್ಲಿದೆ.
ಹೀಗಾಗಿ ಲೀಗ್ ನ ಅಂತಿಮ ಪಂದ್ಯದಲ್ಲಿ ಆರ್ ಸಿಬಿ ಗೆಲ್ಲಲೇಬೇಕು. ಡೆಲ್ಲಿ ಕ್ಯಾಪಿಟಲ್ಸ್ ಸೋಲಲೇಬೇಕು. ಹಾಗಿದ್ರೆ ಮಾತ್ರ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಪ್ಲೇ ಆಫ್ ಪ್ರವೇಶ ಪಡೆಯಲು ಸಾಧ್ಯ.
ಒಂದು ವೇಳೆ, ಆರ್ ಸಿಬಿ ಗೆದ್ದು, ಇನ್ನೊಂದೆಡೆ ಡೆಲ್ಲಿ ಕ್ಯಾಪಿಟಲ್ಸ್ ಕೂಡ ಗೆದ್ರೆ ಆರ್ ಸಿಬಿ ಮನೆ ದಾರಿ ಹಿಡಿಯಬೇಕಾಗುತ್ತದೆ. ಅಲ್ಲದೆ ಈ ಸಲ ಕಪ್ ನಮ್ದೆ ಅಂತ ಅಭಿಯಾನ ಮಾಡುತ್ತಿರುವ ಆರ್ ಸಿಬಿ ಅಭಿಮಾನಿಗಳ ಅಭಿಯಾನ ಕೂಡ ಮುಕ್ತಾಯಗೊಳ್ಳುತ್ತದೆ.

ಹಾಗೇ ನೋಡಿದ್ರೆ, ಆರ್ ಸಿಬಿ ತಂಡಕ್ಕೆ ಪ್ಲೇ ಆಫ್ ಪ್ರವೇಶ ಪಡೆಯುವುದು ಕಷ್ಟವೇನೂ ಆಗುತ್ತಿರಲಿಲ್ಲ. ಹ್ಯಾಟ್ರಿಕ್ ಸೋಲು ಆರ್ ಸಿಬಿ ತಂಡವನ್ನು ಸಂಕಷ್ಟದಲ್ಲಿರುವಂತೆ ಮಾಡಿತ್ತು. ಎಸ್ ಆರ್ ಎಚ್, ರಾಜಸ್ತಾನ ರಾಯಲ್ಸ್ ಮತ್ತು ಗುಜರಾತ್ ಟೈಟಾನ್ಸ್ ವಿರುದ್ಧ ಸೋತ ನಂತರ ಮತ್ತೆ ಗೆಲುವಿನ ಹಾದಿಯಲ್ಲಿ ಸಾಗಿತ್ತು. ಸಿಎಸ್ ಕೆ ಮತ್ತು ಮತ್ತೆ ಸನ್ ರೈಸರ್ಸ್ ಹೈದ್ರಬಾದ್ ತಂಡದ ವಿರುದ್ಧ ಸೇಡು ತೀರಿಸಿಕೊಂಡ್ರೂ ಮಹತ್ವದ ಪಂದ್ಯದಲ್ಲಿ ಸೋಲು ಅನುಭವಿಸಿತ್ತು. ಪಂಜಾಬ್ ಕಿಂಗ್ಸ್ ವಿರುದ್ಧ 54 ರನ್ ಗಳ ಸೋಲು ಆರ್ ಸಿಬಿ ಕನಸನ್ನು ಭಗ್ನಗೊಳಿಸಿತ್ತು. ಇನ್ನೊಂದೆಡೆ ಆರ್ ಸಿಬಿ ರನ್ ರೇಟ್ ಅನ್ನೂ ಕೂಡ ಉತ್ತಮ ಪಡಿಸಿಕೊಳ್ಳಲಿಲ್ಲ. ಹೀಗಾಗಿ ಈಗ ಆರ್ ಸಿಬಿ ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸೋಲನ್ನು ಎದುರು ನೋಡುತ್ತಿದೆ.
ಇನ್ನೊಂದೆಡೆ ಡೆಲ್ಲಿ ಕ್ಯಾಪಿಟಲ್ಸ್ ಗೆಲುವು, ಸೋಲಿನ ಹಾದಿಯಲ್ಲಿ ಸಾಗಿ ಬಂದಿದ್ದು, ಈಗ ಬ್ಯಾಕ್ ಟು ಬ್ಯಾಕ್ ಗೆಲುವು ಸಾಧಿಸಿ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ. ಮೇ 21ರಂದು ಡೆಲ್ಲಿ ಕ್ಯಾಪಿಟಲ್ಸ್ ತಂಡ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಇದಕ್ಕು ಮುನ್ನ ಮೇ 19ರಂದು ಆರ್ ಸಿಬಿ ತಂಡ ಗುಜರಾತ್ ಟೈಟಾನ್ಸ್ ತಂಡದ ವಿರುದ್ಧ ಹೋರಾಟ ನಡೆಸಲಿದೆ.
ಒಂದು ವೇಳೆ ಆರ್ ಸಿಬಿ ಗುಜರಾತ್ ಟೈಟಾನ್ಸ್ ವಿರುದ್ಧ ಸೋತ್ರೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪ್ಲೇ ಆಫ್ ಹಾದಿ ಸುಗಮವಾಗುತ್ತದೆ.
ಒಟ್ಟಿನಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಆರ್ ಸಿಬಿ ತಂಡದ ಫಲಿತಾಂಶ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಭವಿಷ್ಯವನ್ನು ಬರೆದ್ರೆ, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡದ ಫಲಿತಾಂಶ ಆರ್ ಸಿಬಿಯ ಭವಿಷ್ಯವನ್ನು ಬರೆಯಲಿದೆ.

ಇನ್ನೊಂದು ಪ್ಲೇ ಆಫ್ ಲೆಕ್ಕಚಾರದಲ್ಲಿ ಸನ್ ರೈಸರ್ಸ್ ಹೈದ್ರಬಾದ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಫ್ಲೇ ಆಫ್ ರೇಸ್ ನಲ್ಲಿವೆ. ಆದ್ರೆ ಈ ಎರಡು ತಂಡಗಳು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಆರ್ ಸಿಬಿ ತಂಡಗಳು ಹೀನಾಯವಾಗಿ ಸೋಲಬೇಕು. ಹಾಗೇ ಎಸ್ ಆರ್ ಎಚ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಬೃಹತ್ ಅಂತರದ ಗೆಲುವನ್ನು ದಾಖಲಿಸಬೇಕು. ಆಗ ಈ ಎರಡು ತಂಡಗಳು ಅದೃಷ್ಟದ ಬಲದಿಂದ ಪ್ಲೇ ಆಫ್ ಎಂಟ್ರಿ ಪಡೆಯಬಹುದು. ಆದ್ರೆ ಇದು ಅಸಾಧ್ಯ. ಯಾಕಂದ್ರೆ ಪಂಜಾಬ್ ಕಿಂಗ್ಸ್ ಮತ್ತು ಎಸ್ ಆರ್ ಎಚ್ ತಂಡಗಳ ರನ್ ರೇಟ್ ಮೈನಸ್ ನಲ್ಲಿದೆ.
ಹೀಗಾಗಿ ಫ್ಲೇ ಆಫ್ ಪ್ರವೇಶಿಸುವ ನಾಲ್ಕನೇ ತಂಡಕ್ಕಾಗಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಆರ್ ಸಿಬಿ ತಂಡಗಳಿಗೆ ಹೆಚ್ಚಿನ ಅವಕಾಶವಿದೆ. ಅದರಲ್ಲೂ ಆರ್ ಸಿಬಿ ಟೂರ್ನಿಯಲ್ಲಿರಬೇಕಾದ್ರೆ, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಸೋಲಬೇಕು. ಗುಜರಾತ್ ಮತ್ತು ಡೆಲ್ಲಿ ತಂಡದ ಫಾರ್ಮ್ ನೋಡಿದ್ರೆ, ಆರ್ ಸಿಬಿಯ ಲೆಕ್ಕಚಾರ ವರ್ಕ್ ಔಟ್ ಆಗಲ್ಲ ಅನ್ಸುತ್ತೆ. ಆದ್ರೆ ಅದೃಷ್ಟದ ಆಟವನ್ನು ಬಲ್ಲವರು ಯಾರು.. ಯಾವುದಕ್ಕೂ ಕಾದು ನೋಡೋಣ. ಕಪ್ ನಮ್ದೇ ಆಗಬೇಕಾದ್ರೆ ಏನು ಬೇಕಾದ್ರೂ ಆಗಬಹುದು ಅಲ್ವಾ…?