ಪ್ರಬಲ ಪೈಪೋಟಿಯಿಂದ ಕೂಡಿದ್ದ ಹಣಾಹಣಿಯಲ್ಲಿ ಬ್ಯಾಟ್ಸ್ಮನ್ಗಳ ಅದ್ಭುತ ಆಟದಿಂದ ಮಿಂಚಿದ ಗುಜರಾತ್ ಟೈಟನ್ಸ್ ಐಪಿಎಲ್ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ 5 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ.
ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ 20 ಓವರ್ಗಳಲ್ಲಿ 158/6 ರನ್ ಕಲೆಹಾಕಿತು. ಈ ಸವಾಲು ಬೆನ್ನತ್ತಿದ ಗುಜರಾತ್ ಟೈಟನ್ಸ್ 19.4 ಓವರ್ಗಳಲ್ಲಿ 161/5 ರನ್ಗಳಿಸಿ ಜಯಭೇರಿ ಬಾರಿಸಿತು. ಗುಜರಾತ್ ಪರ ರಾಹುಲ್ ತೆವಾಟಿಯ 40*(24) ಹಾಗೂ ಚೊಚ್ಚಲ ಐಪಿಎಲ್ ಪಂದ್ಯವಾಡಿದ ಅಭಿನವ್ ಮನೋಹರ್ 15*(7) ಸ್ಪೋಟಕ ಬ್ಯಾಟಿಂಗ್ನಿಂದ ತಂಡಕ್ಕೆ ಗೆಲುವು ತಂದುಕೊಟ್ಟರು.
ಮಿಲ್ಲರ್-ತೆವಾಟಿಯಾ ಆಸರೆ
ಚೇಸಿಂಗ್ ವೇಳೆ ನಿರ್ಣಾಯಕ ಹಂತದಲ್ಲಿ ಮುಗ್ಗರಿಸಿದ್ದ ಗುಜರಾತ್ ಟೈಟನ್ಸ್ಗೆ ಡೇವಿಡ್ ಮಿಲ್ಲರ್(30) ಹಾಗೂ ರಾಹುಲ್ ತೆವಾಟಿಯ 40* ಆಸರೆಯಾದರು. ನಿರ್ಣಾಹಕ ಹಂತದಲ್ಲಿ ಜೊತೆಯಾದ ಈ ಇಬ್ಬರು ಸಮಯೋಚಿತ ಬ್ಯಾಟಿಂಗ್ ಪ್ರದರ್ಶಿಸಿದರು. ಡೇವಿಡ್ ಮಿಲ್ಲರ್ 30 ರನ್ (21 ಎಸೆತ, 1 ಬೌಂಡರಿ, 2 ಸಿಕ್ಸರ್) ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದರೆ, ಕೊನೆವರೆಗೂ ಹೋರಾಟ ನಡೆಸಿದ ರಾಹುಲ್ ತೆವಾಟಿಯಾ 40* ರನ್ (24 ಎಸೆತ, 5 ಬೌಂಡರಿ, 2 ಸಿಕ್ಸರ್) ತಂಡವನ್ನ ಗೆಲುವಿನ ದಡ ಸೇರಿಸಿದರು. 5ನೇ ವಿಕೆಟ್ಗೆ ಈ ಜೋಡಿ 60 ರನ್ಗಳ ಜೊತೆಯಾಟದ ಕಾಣಿಕೆ ನೀಡಿದರು.
ಗುಜರಾತ್ ಆರಂಭಿಕ ಆಘಾತ
ಲಕ್ನೋ ಸೂಪರ್ ಜೈಂಟ್ಸ್ ನೀಡಿದ 159 ರನ್ಗಳ ಗುರಿ ಬೆನ್ನತ್ತಿದ ಗುಜರಾತ್ ಟೈಟನ್ಸ್ ಕೂಡ ಆರಂಭಿಕ ಆಘಾತ ಕಂಡಿತು. ಇನ್ನಿಂಗ್ಸ್ ಆರಂಭಿಸಿದ ಶುಭ್ಮನ್ ಗಿಲ್(0) ಹಾಗೂ 1ನೇ ಕ್ರಮಾಂಕದಲ್ಲಿ ಬಂದ ವಿಜಯ್ ಶಂಕರ್(4) ಬಹುಬೇಗನೆ ನಿರ್ಗಮಿಸಿದರು. ಆದರೆ ನಂತರ ಜೊತೆಯಾದ ಮ್ಯಾಥ್ಯೂ ವೇಡ್(30) ಹಾಗೂ ನಾಯಕ ಹಾರ್ದಿಕ್ ಪಾಂಡ್ಯ(33) ಎಚ್ಚರಿಕೆ ಆಟವಾಡಿದರು. 3ನೇ ವಿಕೆಟ್ಗೆ 57 ರನ್ಗಳಿಸಿದ ಈ ಜೋಡಿ, ತಂಡಕ್ಕೆ ಚೇತರಿಕೆ ನೀಡಿದರು. ಆದರೆ ಉತ್ತಮವಾಗಿ ಆಡುತ್ತಿದ್ದ ಇವರಿಬ್ಬರು, ಕೇವಲ 6 ರನ್ಗಳ ಅಂತರದಲ್ಲಿ ವಿಕೆಟ್ ಒಪ್ಪಿಸಿದರು. ಲಕ್ನೋ ಪರ ದುಶ್ಮಂತ ಚಮೀರ 2, ಅವೇಶ್ ಖಾನ್, ಕೃನಾಲ್ ಪಾಂಡ್ಯ ಹಾಗೂ ದೀಪಕ್ ಹೂಡ ತಲಾ 1 ವಿಕೆಟ್ ಪಡೆದರು.
ಹೂಡ – ಬಡೋನಿ ಅರ್ಧಶತಕ:
ಟಾಸ್ ಸೋತು ಬ್ಯಾಟಿಂಗ್ ಅವಕಾಶ ಪಡೆದ ಲಕ್ನೋ ಸೂಪರ್ ಜೈಂಟ್ಸ್ ಬ್ಯಾಟಿಂಗ್ ವೈಫಲ್ಯ ಕಂಡಿತು. ನಾಯಕ ಕೆ.ಎಲ್.ರಾಹುಲ್(0) ಇನ್ನಿಂಗ್ಸ್ನ ಮೊದಲ ಬಾಲ್ನಲ್ಲೇ ಔಟಾದರೆ, ಕ್ವಿಂಟನ್ ಡಿಕಾಕ್(7), ಎವಿನ್ ಲೆವಿಸ್(10) ಹಾಗೂ ಮನೀಷ್ ಪಾಂಡೆ(6) ಗುಜರಾತ್ ಬೌಲಿಂಗ್ ದಾಳಿಗೆ ತತ್ತರಿಸಿದರು. ಪರಿಣಾಮ ಲಕ್ನೋ 29 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ಹಂತದಲ್ಲಿ ಜೊತೆಯಾದ ದೀಪಕ್ ಹೂಡ 55(41) ಹಾಗೂ ಆಯುಷ್ ಬಡೋನಿ 54(41) ಉತ್ತಮ ಆಟವಾಡಿದರು. ಬೌಂಡರಿ ಹಾಗೂ ಸಿಕ್ಸರ್ಗಳ ಮೂಲಕ ಅಬ್ಬರಿಸಿದ ಈ ಜೋಡಿ 5ನೇ ವಿಕೆಟ್ಗೆ 87 ರನ್ಗಳ ಜೊತೆಯಾಟದಿಂದ ತಂಡದ ಮೊತ್ತವನ್ನು 150ರ ಗಡಿದಾಟಿಸಿದರು.
ಶಮಿ ಆಕ್ರಮಣಕಾರಿ ದಾಳಿ:
ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಗುಜರಾತ್ ಟೈಟನ್ಸ್ ತಂಡಕ್ಕೆ ಮೊಹಮ್ಮದ್ ಶಮಿ ಅದ್ಭುತ ಆರಂಭ ನೀಡಿದರು. ನಾಯಕನ ನಿರೀಕ್ಷೆಯಂತೆ ಆರಂಭಿಕ ಮೇಲುಗೈ ತಂದುಕೊಟ್ಟ ಶಮಿ, 25 ರನ್ ನೀಡಿ 3 ವಿಕೆಟ್ ಪಡೆಯುವ ಮೂಲಕ ಲಕ್ನೋ ತಂಡದ ಟಾಪ್ ಆರ್ಡರ್ ಬ್ಯಾಟ್ಸ್ಮನ್ಗಳಿಗೆ ಕಡಿವಾಣ ಹಾಕಿದರು. ಇವರಿಗೆ ಸಾಥ್ ನೀಡಿದ ವರುಣ್ ಆರನ್ 2 ವಿಕೆಟ್ ಪಡೆದರು.
ಎರಡು ತಂಡಗಳ ಮುಂದಿನ ಪಂದ್ಯ:
ಲಕ್ನೋ ಸೂಪರ್ ಜೈಂಟ್ಸ್ ಮಾರ್ಚ್ 31ರಂದು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಗುಜರಾತ್ ಟೈಟನ್ಸ್ ಏಪ್ರಿಲ್ 2ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಹಣಾಹಣಿ ನಡೆಸಲಿದೆ.