ಇಂಡಿಯನ್ ಪ್ರಿಮಿಯರ್ ಲೀಗ್ ಆರಂಭವಾಗಿದೆ. ಯುವಕರು ಸಿಕ್ಕ ಅವಕಾಶವನ್ನು ಬಳಸಿಕೊಂಡು ಅಬ್ಬರಿಸಲು ಪ್ಲಾನ್ ಮಾಡಿಕೊಂಡಿದ್ದಾರೆ. ಅನುಭವಿ ಆಟಗಾರರ ರಣ ತಂತ್ರವನ್ನು ಮೆಟ್ಟಿ ನಿಂತು ರನ್ ಕಲೆ ಹಾಕಿ ತಂಡಕ್ಕೆ ನೆರವಾಗಿದ್ದಾರೆ. ಇನ್ನು ಪದಾರ್ಪಣೆ ಪಂದ್ಯದಲ್ಲಿ ಸೊಗಸಾದ ಪ್ರದರ್ಶನ ನೀಡಿ ತಂಡ ತಮ್ಮ ಮೇಲೆ ಇಟ್ಟ ನಂಬಿಕೆಗೆ ಪೂರಕವಾಗಿ ಆಡಿದ ಯುವಕರು ಮಿಂಚಿದ್ದಾರೆ. ಈ ಸಾಲಿಗೆ ಈಗ ಮತ್ತೊಂದು ಹೆಸರು ಸೇರ್ಪಡೆಯಾಗಿದೆ.
ದೆಹಲಿ ಮೂಲದ ಯುವ ಆಟಗಾರ ಆಯೂಷ್ ಬದೋನಿ ಗುಜರಾತ್ ವಿರುದ್ಧದ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡಕ್ಕೆ ಆಧಾರವಾಗಿದ್ದಾರೆ. ಇವರು ಸಿಕ್ಕ ಅವಕಾಶದಲ್ಲಿ ಮನಮೋಹಕ ಇನ್ನಿಂಗ್ಸ್ ಕಟ್ಟಿ ನೆರವಾಗಿದ್ದಾರೆ. ಇವರು ಪದಾರ್ಪಣೆ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ ಆಟಗಾರರ ಸಾಲಿಗೆ ಸೇರಿಕೊಂಡಿದ್ದಾರೆ. ಇವರ ಇನ್ನಿಂಗ್ಸ್ ನಲ್ಲಿ 4 ಬೌಂಡರಿ, 3 ಸಿಕ್ಸರ್ ಸೇರಿವೆ.
ಭಾರತದ ಪರ ಆಡಿದ ಮೊದಲ ಐಪಿಎಲ್ ಪಂದ್ಯದಲ್ಲಿ 50ಕ್ಕೂ ಹೆಚ್ಚು ರನ್ ಸಿಡಿಸಿದ ಎಂಟು ಆಟಗಾರರು ಇದ್ದರು. ಈ ಪಟ್ಟಿಗೆ ಈಗ ಬದೋನಿ ಸೇರ್ಪಡೆಯಾಗಿದ್ದಾರೆ.
- ಸ್ವಪ್ನಿಲ್ ಅಸ್ನೋಡ್ಕರ್
ರಾಜಸ್ಥಾನ ರಾಯಲ್ಸ್ ಮೊದಲ ಆವೃತ್ತಿಯ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಈ ತಂಡದಲ್ಲಿ ಕಾಣಿಸಿಕೊಂಡಿದ್ದ ಸ್ವಪ್ನಿಲ್ ಅಸ್ನೋಡ್ಕರ್ ಉತ್ತಮ ಕಾಣಿಕೆ ನೀಡಿದ್ದರು. ಆರಂಭಿಕ ಆಟಗಾರ ಸ್ವಪ್ನಿಲ್ ಅಸ್ನೋಡ್ಕರ್ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಪದಾರ್ಪಣೆ ಮಾಡಿದರು. ಇವರು ರಾಜಸ್ಥಾನ ಪರ ದಕ್ಷಿಣ ಆಫ್ರಿಕಾದ ನಾಯಕ ಸ್ಮಿತ್ ಜೊತೆ ಇನ್ನಿಂಗ್ಸ್ ಆರಂಭಿಸಿದರು. ಸ್ವಪ್ನಿಲ್ ಅಸ್ನೋಡ್ಕರ್ 34 ಎಸೆತಗಳಲ್ಲಿ 60 ರನ್ ಸಿಡಿಸಿ ಮಿಂಚಿದರು.
- ಗೌತಮ್ ಗಂಭೀರ್
ಟೀಮ್ ಇಂಡಿಯಾದ ಆರಂಭಿಕ ಆಟಗಾರ ಗೌತಮ್ ಗಂಭೀರ್ ಸಹ ಪದಾರ್ಪಣೆ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ ಸಾಧನೆ ಮಾಡಿದ್ದಾರೆ. ಡೆಲ್ಲಿ ಪರ 2008ರಲ್ಲಿ ಚೊಚ್ಚಲ ಐಪಿಎಲ್ ಪಂದ್ಯವನ್ನು ಆಡಿದ ಗಂಭೀರ್ ರಾಜಸ್ಥಾನ ರಾಯಲ್ಸ್ ವಿರುದ್ಧ 46 ಎಸೆತಗಳಲ್ಲಿ ಅಜೇಯ 58 ಬಾರಿಸಿ ಅಬ್ಬರಿಸಿದ್ದರು. ಇವರ ಸೊಗಸಾದ ಇನ್ನಿಂಗ್ಸ್ ನಲ್ಲಿ ಏಳು ಬೌಂಡರಿ, ಒಂದು ಸಿಕ್ಸರ್ ಸೇರಿವೆ.
- ಶಿಖರ್ ಧವನ್
2008ರಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಪಂದ್ಯದಲ್ಲೇ ಶಿಖರ್ ಧವನ್ ಸಹ ಆರ್ಭಟಿಸಿದ್ದರು. ಡೆಲ್ಲಿ ತಂಡದ ಪರ ಬ್ಯಾಟ್ ಮಾಡಿದ ಧವನ್ ಹಾಗೂ ಗಂಭೀರ್ ಎರಡನೇ ವಿಕೆಟ್ ಗೆ 112 ರನ್ ಸೇರಿಸಿದರು. ಗಬ್ಬರ್ ಅಜೇಯ 52 ರನ್ ಚಚ್ಚಿದ್ದರು.
- ದೇವದತ್ ಪಡಿಕ್ಕಲ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಪದಾರ್ಪಣೆ ಮಾಡಿದ್ದ ದೇವದತ್ ಪಡಿಕ್ಕಲ್ ಮೊದಲ ಪಂದ್ಯದಲ್ಲೇ ತಮ್ಮ ಕ್ಷಮತೆಯನ್ನು ಸಾಬೀತು ಪಡಿಸಿದ್ದರು. ಇವರು 2020ರ ಐಪಿಎಲ್ ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 42 ಎಸೆತಗಳಲ್ಲಿ 56 ರನ್ ಕಲೆ ಹಾಕಿ ಗೆಲುವಿನಲ್ಲಿ ಕಾಣಿಕೆ ನೀಡಿದ್ದರು.
- ಅಂಬಟಿ ರಾಯುಡು
2010ರ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದ ಅಂಬಟಿ ರಾಯುಡು ಸೊಬಗಿನ ಆಟವಾಡಿದ್ದರು. ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಅಂಬಟಿ 33 ಎಸೆತಗಳಲ್ಲಿ 55 ರನ್ ಬಾರಿಸಿ ಗಮನ ಸೆಳೆದಿದ್ದರು.
- ಶಿವರಾಮಕೃಷ್ಣನ್ ವಿದ್ಯುತ್
ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ 2008ರ ಐಪಿಎಲ್ ನಲ್ಲಿ ಕಾಣಿಸಿಕೊಂಡಿದ್ದ ಶಿವರಾಮಕೃಷ್ಣನ್ ವಿದ್ಯುತ್, ಡೆಲ್ಲಿ ವಿರುದ್ಧ ಹಾಫ್ ಸೆಂಚೂರಿ ಸಿಡಿಸಿದ್ದರು. ಇವರು 37 ಎಸೆತಗಳಲ್ಲಿ 54 ರನ್ ಕಲೆ ಹಾಕಿ ಭರವಸೆ ಮೂಡಿಸಿದ್ದರು.
- ಶ್ರೀವತ್ಸ್ ಗೋಸ್ವಾಮಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಜೆರ್ಸಿಯಲ್ಲಿ ಕಾಣಿಸಿಕೊಂಡಿದ್ದ ಶ್ರೀವತ್ಸ್ ಗೋಸ್ವಾಮಿ ಮಿಂಚು ಹರಿಸಿದ್ದರು. ಡೆಲ್ಲಿ ವಿರುದ್ಧ ಇವರು 42 ಎಸೆತಗಳಲ್ಲಿ 52 ರನ್ ಸಿಡಿಸಿದ್ದರು.
- ಕೇದಾರ್ ಜಾದವ್
ಪದಾರ್ಪಣೆ ಪಂದ್ಯದಲ್ಲಿ ಅರ್ಧಶತಕ ಬಾರಿಸಿದವರ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಆಟಗಾರ ಕೇದಾರ್ ಜಾದವ್. ಇವರು ಡೆಲ್ಲಿ ಪರ ಬ್ಯಾಟ್ ಮಾಡಿ 29 ಎಸೆತಗಳಲ್ಲಿ 50 ರನ್ ಸಿಡಿಸಿ ಬೆಂಗಳೂರ ತಂಡಕ್ಕೆ ಸೋಲಿನ ರುಚಿ ತೋರಿಸಿದ್ದರು.