ವೃದ್ಧಿಮಾನ್ ಸಾಹ(67*) ಆಕರ್ಷಕ ಅರ್ಧಶತಕ ಹಾಗೂ ಬೌಲರ್‌ಗಳ ಸಾಂಘಿಕ ಪ್ರದರ್ಶನದಿಂದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು. ಈ ಗೆಲುವಿನೊಂದಿಗೆ 13 ಪಂದ್ಯಗಳಲ್ಲಿ 20 ಪಾಯಿಂಟ್ಸ್ ಕಲೆಹಾಕಿದ ಗುಜರಾತ್ ಟೈಟನ್ಸ್, ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿಯಿತು.
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ನಿಧಾನಗತಿಯ ಬ್ಯಾಟಿಂಗ್ ಪ್ರದರ್ಶಿಸಿದ ಸಿಎಸ್‌ಕೆ, 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 133 ರನ್‌ಗಳ ಸಾಧಾರಣ ಮೊತ್ತ ಕಲೆಹಾಕಿತು. ಈ ಟಾರ್ಗೆಟ್ ಬೆನ್ನತ್ತಿದ ಗುಜರಾತ್ ಟೈಟನ್ಸ್ 19.1 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 137 ರನ್‌ಗಳಿಸುವ ಮೂಲಕ ಗೆಲುವಿನ ದಡಸೇರಿತು.

ಸಿಎಸ್‌ಕೆ ಸಾಧಾರಣ ಮೊತ್ತ:
ಮೊದಲು ಬ್ಯಾಟಿಂಗ್ ಆರಂಭಿಸಿದ ಸಿಎಸ್‌ಕೆ ಇನ್ನಿಂಗ್ಸ್ ಆರಂಭದಲ್ಲೇ ಡ್ವೇನ್ ಕಾನ್ವೆ(5) ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ಬಳಿಕ ಜೊತೆಯಾದ ಮೊಯಿನ್ ಅಲಿ(21) ಹಾಗೂ ಋತುರಾಜ್ ಗಾಯಕ್ವಾಡ್(53) 2ನೇ ವಿಕೆಟ್‌ಗೆ 57 ರನ್‌ಗಳ ಉತ್ತಮ ಜೊತೆಯಾಟದಿಂದ ಚೇತರಿಕೆ ನೀಡಿದರು. ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ ಋತುರಾಜ್, ಅರ್ಧಶತಕ ಸಿಡಿಸಿ ತಂಡಕ್ಕೆ ನೆರವಾದರು. ನಂತರ ಬಂದ ಎನ್.ಜಗದೀಸನ್(39*) ಸಹ ಉತ್ತಮ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ತಂಡದ ಮೊತ್ತ ಹೆಚ್ಚಿಸಿದರು. ಆದರೆ ಇವರಿಬ್ಬರ ವಿಕೆಟ್ ಪತನದ ಬಳಿಕ ಶಿವಂ ದುಬೆ(0) ಹಾಗೂ ನಾಯಕ ಎಂ.ಎಸ್.ಧೋನಿ(7) ನಿರೀಕ್ಷಿತ ರನ್ ಕಲೆಹಾಕುವಲ್ಲಿ ವಿಫಲವಾದರು. ಪರಿಣಾಮ ಸಿಎಸ್‌ಕೆ 20 ಓವರ್‌ಗಳಲ್ಲಿ 135 ರನ್‌ಗಳಿಸಲಷ್ಟೇ ಶಕ್ತವಾಯಿತು. ಗುಜರಾತ್ ಪರ ಶಮಿ(2/19) ವಿಕೆಟ್ ಪಡೆದರೆ. ರಶೀದ್, ಜೋಸೆಫ್ ಮತ್ತು ಸಾಯಿ ಕಿಶೋರ್ ತಲಾ 1 ವಿಕೆಟ್ ಪಡೆದರು.

ಸಾಹ ಅರ್ಧಶತಕದ ಆಸರೆ:
ಸಿಎಸ್‌ಕೆ ನೀಡಿದ 134 ರನ್‌ಗಳ ಸಾಧಾರಣ ಟಾರ್ಗೆಟ್ ಎದುರಿಸಿದ ಗುಜರಾತ್ ಉತ್ತಮ ಆರಂಭ ಪಡೆಯಿತು. ಆರಂಭಿಕರಾಗಿ ಕಣಕ್ಕಿಳಿದ ವೃದ್ಧಿಮಾನ್ ಸಾಹ (67*) ಹಾಗೂ ಶುಭ್ಮನ್ ಗಿಲ್(18) ಮೊದಲ ವಿಕೆಟ್‌ಗೆ 59 ರನ್‌ಗಳ ಉತ್ತಮ ಅಡಿಪಾಯ ಹಾಕಿಕೊಟ್ಟರು. 1ನೇ ಕ್ರಮಾಂಕದಲ್ಲಿ ಬಂದ ಮ್ಯಾಥ್ಯೂ ವೇಡ್(20) ಉಪಯುಕ್ತ ರನ್‌ಗಳಿಸಿ ವಿಕೆಟ್ ಒಪ್ಪಿಸಿದರು. ನಾಯಕ ಹಾರ್ದಿಕ್ ಪಾಂಡ್ಯ(7) ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಆದರೆ ನಂತರ ಕಣಕ್ಕಿಳಿದ ಡೇವಿಡ್ ಮಿಲ್ಲರ್ 15* ಜವಾಬ್ದಾರಿಯ ಆಟವಾಡಿ ತಂಡವನ್ನ ಗೆಲುವಿನ ದಡಸೇರಿಸಿದರು. ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ವೃದ್ಧಿಮಾನ್ ಸಾಹ ಆಕರ್ಷಕ ಅರ್ಧಶತಕ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಸಿಎಸ್‌ಕೆ ಪರ ಮತೀಶ ಪತೀರಣ(2/24) ಹಾಗೂ ಮೊಯಿನ್ ಅಲಿ(1/11) ಯಶಸ್ವಿ ಬೌಲರ್ ಎನಿಸಿದರು.
