ನಾಯಕ ಹಾರ್ದಿಕ್ ಪಾಂಡ್ಯ(62*) ಅರ್ಧಶತಕ ಹಾಗೂ ಡೇವಿಡ್ ಮಿಲ್ಲರ್(34) ಉಪಯುಕ್ತ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಗುಜರಾತ್ ಟೈಟನ್ಸ್ 168 ರನ್ಗಳಿಸಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಟೈಟನ್ಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕ ಆಘಾತದ ನಡುವೆಯೂ ಹಾರ್ದಿಕ್ ಪಾಂಡ್ಯ 62*, ಡೇವಿಡ್ ಮಿಲ್ಲರ್(34) ಹಾಗೂ ವೃದ್ಧಿಮಾನ್ ಸಾಹ(31) ಅವರ ಜವಾಬ್ದಾರಿಯುತ ಆಟದಿಂದ ಗುಜರಾತ್ 20 ಓವರ್ಗಳಲ್ಲಿ 5 ವಿಕೆಟ್ಗೆ 168 ರನ್ಗಳಿಸಿತು.
ಇದಕ್ಕೂ ಮುನ್ನ ಇನ್ನಿಂಗ್ಸ್ ಆರಂಭಿಸಿದ ವೃದ್ಧಿಮಾನ್ ಸಾಹ(31) ಹಾಗೂ ಶುಭ್ಮನ್ ಗಿಲ್(1) ಜೋಡಿ ಬಹುಬೇಗನೆ ಬೇರ್ಪಟ್ಟಿತು. 1ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮ್ಯಾಥ್ಯೂ ವೇಡ್(16) ದೊಡ್ಡ ಇನ್ನಿಂಗ್ಸ್ ಕಟ್ಟುವಲ್ಲಿ ಎಡವಿದರು. ಉತ್ತಮವಾಗಿ ಆಡುತ್ತಿದ್ದ ವೃದ್ಧಿಮಾನ್ ಸಾಹ, ಸಿಂಗಲ್ ರನ್ ಕದಿಯುವ ಯತ್ನದಲ್ಲಿ ರನೌಟ್ ಬಲೆಗೆ ಬಿದ್ದರು. ಪರಿಣಾಮ ಗುಜರಾತ್ 63 ರನ್ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಹಾರ್ದಿಕ್-ಮಿಲ್ಲರ್ ಆಸರೆ:
ಈ ಹಂತದಲ್ಲಿ ಜೊತೆಯಾದ ನಾಯಕ ಹಾರ್ದಿಕ್ ಪಾಂಡ್ಯ ಹಾಗೂ ಡೇವಿಡ್ ಮಿಲ್ಲರ್ 34(25) ತಂಡಕ್ಕೆ ಚೇತರಿಕೆ ನೀಡಿದರು. ಆರ್ಸಿಬಿ ಬೌಲಿಂಗ್ ದಾಳಿಯ ಎದುರು ಎಚ್ಚರಿಕೆಯ ಆಟವಾಡಿದ ಈ ಜೋಡಿ 4ನೇ ವಿಕೆಟ್ಗೆ 61(47) ರನ್ಗಳ ಉಪಯುಕ್ತ ಜೊತೆಯಾಟದ ಕಾಣಿಕೆ ನೀಡಿದರು. ಆದರೆ ಉತ್ತಮ ಆಡುತ್ತಿದ್ದ ಮಿಲ್ಲರ್, 17ನೇ ಓವರ್ನಲ್ಲಿ ವನಿಂದು ಹಸರಂಗ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿ ಹೊರ ನಡೆದರು. ಮಿಲ್ಲರ್ ವಿಕೆಟ್ ಪತನದ ನಂತರವೂ ಹಾರ್ದಿಕ್ ಪಾಂಡ್ಯ 62* ರನ್(47 ಬಾಲ್, 4 ಬೌಂಡರಿ, 3 ಸಿಕ್ಸ್) ಜವಾಬ್ದಾರಿಯ ಆಟವಾಡಿದರು. ಅಲ್ಲದೇ ಪ್ರಸಕ್ತ ಐಪಿಎಲ್ನಲ್ಲಿ 4ನೇ ಅರ್ಧಶತಕ ಸಿಡಿಸಿದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ರಾಹುಲ್ ತೇವಾಟಿಯಾ(2) ಬ್ಯಾಟಿಂಗ್ ವ್ಯಫಲ್ಯ ಅನುಭವಿಸಿದರು. ಕೊನೆಯ ಹಂತದಲ್ಲಿ ರಶೀದ್ ಖಾನ್ 19*(6) ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. ಆ ಮೂಲಕ ತಂಡದ ಮೊತ್ತವನ್ನ 160 ರನ್ಗಳ ಗಡಿದಾಟುವಂತೆ ಮಾಡಿದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಜೋಶ್ ಹೇಜಲ್ವುಡ್(2/39), ವನಿಂದು ಹಸರಂಗ(1/25) ಹಾಗೂ ಗ್ಲೆನ್ ಮ್ಯಾಕ್ಸ್ವೆಲ್(1/28) ಉತ್ತಮ ಬೌಲಿಂಗ್ ದಾಳಿ ನಡೆಸಿದರು.