ಆರಂಭಿಕ ಬ್ಯಾಟ್ಸಮನ್ಗಳ ವೈಫಲ್ಯದ ನಡುವೆಯೂ ದೀಪಕ್ ಹೂಡ(55) ಹಾಗೂ ಆಯುಷ್ ಬಡೋನಿ(54) ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಲಕ್ನೋ ಸೂಪರ್ ಜೈಂಟ್ಸ್ ಎದುರಾಳಿ ಗುಜರಾತ್ ಟೈಟನ್ಸ್ ತಂಡಕ್ಕೆ 159 ರನ್ಗಳ ಗುರಿ ನೀಡಿದೆ.
ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಲಕ್ನೋ ಸೂಪರ್ ಜೈಂಟ್ಸ್, ಆಘಾತಕಾರಿ ಆರಂಭ ಕಂಡಿತು. ಮಧ್ಯಮ ಕ್ರಮಾಂಕದಲ್ಲಿ ಚೇತರಿಕೆ ಕಂಡ ಲಕ್ನೋ 20 ಓವರ್ಗಳಲ್ಲಿ 6 ವಿಕೆಟ್ಗೆ 158 ರನ್ಗಳ ಪೈಪೋಟಿಯ ಮೊತ್ತ ಕಲೆಹಾಕಿತು. ಲಕ್ನೋ ಪರ ದೀಪಕ್ ಹೂಡ 55(41) ಹಾಗೂ ಆಯುಷ್ ಬಡೋನಿ 54(41) ಉತ್ತಮ ಬ್ಯಾಟಿಂಗ್ ಮೂಲಕ ತಂಡಕ್ಕೆ ನೆರವಾದರು.
ಇದಕ್ಕೂ ಮುನ್ನ ಉತ್ತಮ ಮೊತ್ತ ಕಲೆಹಾಕುವ ನಿರೀಕ್ಷೆಯೊಂದಿಗೆ ಇನ್ನಿಂಗ್ಸ್ ಆರಂಭಿಸಿದ ಲಕ್ನೋ ಸೂಪರ್ ಜೈಂಟ್ಸ್, ಇನ್ನಿಂಗ್ಸ್ನ ಮೊದಲ ಎಸೆತದಲ್ಲೇ ತಮ್ಮ ತಂಡದ ಬ್ಯಾಟಿಂಗ್ ಅಸ್ತ್ರವಾಗಿರುವ ಕೆ.ಎಲ್.ರಾಹುಲ್(0) ಅವರನ್ನ ಕಳೆದುಕೊಂಡು ಆಘಾತ ಅನುಭವಿಸಿತು. ಇದಾದ ಕೆಲವೇ ಕ್ಷಣದಲ್ಲೇ ಆರಂಭಿಕ ಆಟಗಾರ ಕ್ವಿಂಟನ್ ಡಿಕಾಕ್(7) ಕೂಡ ಪೆವಿಲಿಯನ್ ಸೇರಿದರು. ಆರಂಭಿಕರ ನಿರ್ಗಮನದ ಬಳಿಕ ಬಂದ ಎವಿನ್ ಲೂಯಿಸ್(10) ಹಾಗೂ ಮನೀಷ್ ಪಾಂಡೆ(6) ಕೂಡ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು.
ಈ ಹಂತದಲ್ಲಿ ಜೊತೆಯಾದ ದೀಪಕ್ ಹೂಡ ಹಾಗೂ ಅಯುಷ್ ಬಡೋನಿ ಜವಾಬ್ದಾರಿಯ ಆಟದ ಮೂಲಕ ತಂಡಕ್ಕೆ ನೆರವಾದರು. ಬಿರುಸಿನ ಆಟವಾಡಿದ ಹೂಡ 41 ಬಾಲ್ಗಳಲ್ಲಿ 6 ಬೌಂಡರಿ, 2 ಸಿಕ್ಸರ್ ನೆರವಿನಿಂದ 55 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಅಲ್ಲದೇ 5ನೇ ವಿಕೆಟ್ಗೆ ಈ ಜೋಡಿ 87 ರನ್ಗಳ ಅತ್ಯುತ್ತಮ ಜೊತೆಯಾಟದ ಕಾಣಿಕೆ ನೀಡಿದರು. ದೀಪಕ್ ಹೂಡ ನಿರ್ಗಮನದ ಬಳಿಕವೂ ತಮ್ಮ ಆಟ ಮುಂದುವರಿಸಿದ ಬಡೋನಿ, ಗುಜರಾತ್ ಬೌಲರ್ಗಳ ಮೇಲೆ ಪ್ರಾಬಲ್ಯ ಸಾಧಿಸಿದರು. ಐಪಿಎಲ್ನ ಚೊಚ್ಚಲ ಪಂದ್ಯದಲ್ಲೇ ಮಿಂಚಿದ ಆಯುಷ್ ಬಡೋನಿ, 41 ಬಾಲ್ಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನೊಂದಿಗೆ 54 ರನ್ಗಳಿಸಿದರು. ಉಳಿದಂತೆ ಕೃನಾಲ್ ಪಾಂಡ್ಯ 21*(13)
ಗುಜರಾತ್ ಪರ ಮೊಹಮ್ಮದ್ ಶಮಿ ಉತ್ತಮ ಬೌಲಿಂಗ್ ದಾಳಿ ನಡೆಸಿದರು. ಇನ್ನಿಂಗ್ಸ್ ಆರಂಭದಿಂದಲೇ ಅಬ್ಬರಿಸಿದ ಶಮಿ 4 ಓವರ್ಗಳಲ್ಲಿ 25 ರನ್ ನೀಡಿ ಪ್ರಮುಖ 3 ವಿಕೆಟ್ ಪಡೆದು ಮಿಂಚಿದರು. ಉಳಿದಂತೆ ವರುಣ್ ಆರೂನ್ 2 ಹಾಗೂ ರಶೀದ್ ಖಾನ್ 1 ವಿಕೆಟ್ ಪಡೆದರು.