ಲಿಯಾಮ್ ಲಿವಿಂಗ್‌ಸ್ಟೋನ್(3/27), ಅರ್ಶದೀಪ್ ಸಿಂಗ್(3/38) ಪರಿಣಾಮಕಾರಿ ಬೌಲಿಂಗ್ ನಡುವೆಯೂ ಮಿಚೆಲ್ ಮಾರ್ಷ್(63) ಅರ್ಧಶತಕದ ನೆರವಿನಿಂದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 159 ರನ್‌ಗಳಿಸಿದೆ.
ಮುಂಬೈನ ಡಿ.ವೈ. ಪಾಟೀಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮೊದಲು ಬ್ಯಾಟಿಂಗ್ ಅವಕಾಶ ಪಡೆಯಿತು. ಆರಂಭಿಕ ಆಘಾತದ ನಡುವೆಯೂ ಚೇತರಿಕೆ ಕಂಡ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 159 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿದೆ. ಡಿಸಿ ಪರ ಮಿಚೆಲ್ ಮಾರ್ಷ್(63) ಹಾಗೂ ಸರ್ಫರಾಜ಼್ ಖಾನ್(32) ಉಪಯುಕ್ತ ಬ್ಯಾಟಿಂಗ್ ಪ್ರದರ್ಶಿಸಿದರೆ. ಪಂಜಾಬ್ ಪರ ಲಿವಿಂಗ್‌ಸ್ಟೋನ್(3/27) ಹಾಗೂ ಅರ್ಶದೀಪ್(3/38) ಉತ್ತಮ ದಾಳಿ ನಡೆಸಿದರು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಡೆಲ್ಲಿ ಕ್ಯಾಪಿಟಲ್ಸ್ ನಿರೀಕ್ಷಿತ ಆರಂಭ ಪಡೆಯಲಿಲ್ಲ. ಇನ್ನಿಂಗ್ಸ್‌ನ ಮೊದಲ ಬಾಲ್‌ನಲ್ಲೇ ಡೇವಿಡ್ ವಾರ್ನರ್(0) ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. 2ನೇ ವಿಕೆಟ್‌ಗೆ 51 ರನ್‌ಗಳ ಜೊತೆಯಾಟವಾಡಿದ ಸರ್ಫರಾಜ಼್ ಖಾನ್(32) ಹಾಗೂ ಮಿಚೆಲ್ ಮಾರ್ಷ್ ತಂಡಕ್ಕೆ ಚೇತರಿಕೆ ನೀಡಿದರೆ. ಬಳಿಕ ಕಣಕ್ಕಿಳಿದ ಲಲಿತ್ ಯಾದವ್(24) ಉಪಯುಕ್ತ ರನ್‌ಗಳಿಸಿ ವಿಕೆಟ್ ಒಪ್ಪಿಸಿದರು.
MARSH, IPL 2022, SPORTS KARNATAKAಮಾರ್ಷ್ ಅರ್ಧಶತಕದ ಆಸರೆ:
ಒಂದು ಹಂತದಲ್ಲಿ ಉತ್ತಮ ಸ್ಥಿತಿಯಲ್ಲಿದ್ದ ಡೆಲ್ಲಿ ಕ್ಯಾಪಿಟಲ್ಸ್, ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ವೈಫಲ್ಯಕ್ಕೆ ಸಿಲುಕಿತು. ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕ ರಿಷಬ್ ಪಂತ್(7) ಹಾಗೂ ರೋವ್ಮನ್ ಪೋವಲ್(2) ರನ್‌ಗಳಿಸುವ ಆತುರದಲ್ಲಿ ಬಂದಷ್ಟೇ ಬೇಗ ಪೆವಿಲಿಯನ್ ಸೇರಿದರು. ಆದರೆ ಕೊನೆ ಹಂತದವರೆಗೂ ಜವಾಬ್ದಾರಿಯುತ ಆಟವಾಡಿದ ಮಿಚೆಲ್ ಮಾರ್ಷ್ 63 ರನ್(48 ಬಾಲ್, 4 ಬೌಂಡರಿ, 3 ಸಿಕ್ಸ್) ಅದ್ಭುತ ಆಟವಾಡಿದರು. ಪಂಜಾಬ್ ಬೌಲಿಂಗ್ ದಾಳಿಯನ್ನ ಸಮರ್ಥವಾಗಿ ಎದುರಿಸಿದ ಮಾರ್ಷ್, ಅರ್ಧಶತಕ ಸಿಡಿಸಿ ತಂಡಕ್ಕೆ ಆಸರೆಯಾದರು. ಉಳಿದಂತೆ ಅಕ್ಸರ್ ಪಟೇಲ್(17*) , ಶಾರ್ದೂಲ್ ಥಾಕೂರ್(3) ಹಾಗೂ ಕುಲ್ದೀಪ್ ಯಾದವ್(3*) ಅಲ್ಪಮೊತ್ತದ ಕಾಣಿಕೆ ನೀಡಿದರು.

ಲಿವಿಂಗ್‌ಸ್ಟೋನ್ ಸ್ಪಿನ್ ಮೋಡಿ
ಪಂಜಾಬ್ ಕಿಂಗ್ಸ್ ಪರ ಲಿಯಮ್ ಲಿವಿಂಗ್‌ಸ್ಟೋನ್(3/27) ಅದ್ಭುತ ಬೌಲಿಂಗ್ ಪ್ರದರ್ಶಿಸಿದರು. ಇನ್ನಿಂಗ್ಸ್‌ನ ಮೊದಲ ಓವರ್‌ನಲ್ಲೇ ತಂಡಕ್ಕೆ ಮುನ್ನಡೆ ತಂದುಕೊಟ್ಟ ಲಿವಿಂಗ್‌ಸ್ಟೋನ್, ನಿರ್ಣಾಯಕ ಹಂತದಲ್ಲಿ ವಿಕೆಟ್ ಕಬಳಿಸುವ ಮೂಲಕ ಡೆಲ್ಲಿ ಬ್ಯಾಟ್ಸ್‌ಮನ್‌ಗಳಿಗೆ ಕಡಿವಾಣ ಹಾಕಿದರು. ಇವರಿಗೆ ಅರ್ಶದೀಪ್ ಸಿಂಗ್(3/38), ಕಗೀಸೋ ರಬಾಡ(1/24) ಉತ್ತಮ ಸಾಥ್ ನೀಡಿದರು.